ADVERTISEMENT

ಉಡುಪಿ: ಜಾಲತಾಣದಲ್ಲಿ ಸದ್ದುಮಾಡಿದ ಏನೀ ಅದ್ಭುತವೇ..

ಹಾಡಿಗೆ ಭಾವಾಭಿವ್ಯಕ್ತಿ ತುಂಬಿದ ಉಡುಪಿಯ ಮಾನಸಿ ಸುಧೀರ್

ಬಾಲಚಂದ್ರ ಎಚ್.
Published 12 ಜೂನ್ 2020, 13:44 IST
Last Updated 12 ಜೂನ್ 2020, 13:44 IST
ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್.
ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್.   

ಉಡುಪಿ: ಭಾವಾಭಿವ್ಯಕ್ತಿ ಹಾಗೂ ಸುಮಧುರ ಗಾಯನ ಹದವಾಗಿ ಬೆರೆತಿರುವ ‘ಏನೀ ಅದ್ಭುತವೇ ಗೆಳತಿ’ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಪ್ರಸಿದ್ಧ ಕವಿ ಬಿ.ಆರ್.ಲಕ್ಷ್ಮಣ್‌ ರಾವ್ ಅವರ ಕವನಕ್ಕೆ ಅದ್ಭುತ ಭಾವ ತುಂಬಿದವರು ಉಡುಪಿಯ ಖ್ಯಾತ ಭರತನಾಟ್ಯ ಕಲಾವಿದೆ ಹಾಗೂ ವಿದುಷಿ ಮಾನಸಿ ಸುಧೀರ್‌.

ಬದುಕಿನ ಜಂಜಡಗಳ ನಡುವಿನ ಸಂಭ್ರಮವನ್ನು ಮಧ್ಯಮ ವರ್ಗದ ಗೃಹಿಣಿಯೊಬ್ಬಳು ಗೆಳತಿಯೊಂದಿಗೆ ಹಂಚಿಕೊಳ್ಳುವ ಸನ್ನಿವೇಶಕ್ಕೆ ಅಭಿನಯದ ಮೂಲಕ ಜೀವ ತುಂಬಿದ್ದಾರೆ ಮಾನಸಿ ಸುಧೀರ್. ‘ಏನೀ ಅದ್ಭುತವೇ’ ಗೀತೆಯನ್ನು ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿದ್ದು, ಮಾನಸಿ ಅವರ ಭಾವಾಭಿಯನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಹಾಡು ಹುಟ್ಟಿದ್ದು ಹೇಗೆ?

ADVERTISEMENT

‘ಲಾಕ್‌ಡೌನ್ ಅವಧಿಯಲ್ಲಿ ನೃತ್ಯ ಚಟುವಟಿಕೆಗಳಿಗೆ ವಿರಾಮ ಬಿದ್ದು, ಹೊಸತನಕ್ಕೆ ಮನಸ್ಸು ತುಡಿಯವಾಗ ಖ್ಯಾತ ಕವಿಗಳ ಗೀತೆಗಳಿಗೆ ಭಾವಾಭಿವ್ಯಕ್ತಿ ತುಂಬಿ ಪ್ರಸ್ತುತ ಪಡಿಸುವ ವಿಚಾರ ಹೊಳೆಯಿತು. ತಕ್ಷಣ ಕಾರ್ಯರೂಪಕ್ಕೆ ತಂದೆ’ ಎಂದು ಹಾಡು ಹುಟ್ಟಿದ ಬಗೆಯನ್ನು ಮಾನಸಿ ಸುಧೀರ್ ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

ಭರತನಾಟ್ಯದ ಹೆಜ್ಜೆಗಳ ಸದ್ದಿನಲ್ಲಿ ಹಿನ್ನೆಲೆಗೆ ಸರಿದಿದ್ದ ಗಾಯನ ಮತ್ತೆ ಮುನ್ನಲೆಗೆ ಬಂತು. ಯೂಟ್ಯೂಬ್ ಖಾತೆಯಲ್ಲಿ ಮೊದಲ ಪ್ರಯತ್ನವಾಗಿ ಹಾಕಿದ ಬೇಂದ್ರೆಯವರ ‘ಭೃಂಗದ ಬೆನ್ನೇರಿ’ ಹಾಡಿಗೆ ಆಪ್ತರು, ಸ್ನೇಹಿತರಿಂದ ಮೆಚ್ಚುಗೆ ಬಂತು. ಬಳಿಕ, ಒಂದಾದ ಮೇಲೊಂದರಂತೆ ಹಾಡುಗಳನ್ನು ಹಾಕುತ್ತಾ, ಭಾವಾಭಿನಯಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದೆ ಎಂದರು.

ಬಿ.ಆರ್.ಲಕ್ಷ್ಮಣ್‌ ರಾವ್ ಅವರ ‘ಹೇಗಿದ್ದೀಯೇ ಟ್ವಿಂಕಲ್’ ಹಾಡು ಹೆಚ್ಚು ವೈರಲ್ ಆಗಿತ್ತು. ಡುಂಡಿರಾಜ್ ಅವರ ‘ಗಣ್ಯರಾಜ್ಯದ ಗುಣಗಾನ’, ತಿರುಮಲೇಶ್ ಅವರ ‘ಎಲ್ಲಿಗೆ ಹೋಗೋಣ’ ಗೀತೆಯ ಅಭಿಯನಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಗುರುಗಳಾದ ಗುರುರಾಜ ಮಾರ್ಪಳ್ಳಿ ಅವರ ರಾಗಸಂಯೋಜನೆಯ ಬಿ.ಆರ್.ಲಕ್ಷ್ಮಣ್‌ ರಾವ್ ಅವರ ‘ಏನೀ ಅದ್ಭುತವೇ’ ಹಾಡು ವೀಕ್ಷಿಸಿದವರೆಲ್ಲರೂ ಹೊಗಳಿಕೆಯ ಮಳೆ ಸುರಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ನೂರಾರು ಮಂದಿ ವಾಟ್ಸ್‌ಆ್ಯಪ್,‌ ಫೇಸ್‌ಬುಕ್‌ಗಳಲ್ಲಿ ಹಾಡು ಹಂಚಿಕೊಂಡಿದ್ದಾರೆ. ವಿದೇಶಗಳಿಂದಲೂ ಕರೆ ಬರುತ್ತಿದೆ. ಒಂದು ಸಿನಿಮಾ ಆಫರ್ ಕೂಡ ಬಂದಿದೆ. ಸ್ನೇಹಿತರು, ಹಿತೈಷಿಗಳು ಮತ್ತಷ್ಟು ಗೀತೆಗಳನ್ನು ಹಾಡುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ‘ಏನೀ ಅದ್ಭುತವೇ’ ಹಾಡು ನನ್ನ ಪಾಲಿಗೆ ನಿಜಕ್ಕೂ ಅದ್ಭುತವೇ ಸೃಷ್ಟಿಸಿದೆ ಎಂದರು ಮಾನಸಿ ಸುಧೀರ್‌.

ಅವರ ಹಾಡುಗಳನ್ನು ಯೂಟ್ಯೂಬ್ ಚಾನೆಲ್‌ ಲಿಂಕ್‌ ಬಳಸಿ ವೀಕ್ಷಿಸಬಹುದು. https://www.youtube.com/watch?v=kr9SzWkO014

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.