ADVERTISEMENT

ಉಡುಪಿ | ಬೀನ್ಸ್‌, ಟೊಮೆಟೊ ದರ ಏರುಗತಿ: ಈರುಳ್ಳಿ ದರ ಸ್ಥಿರ

ಬಾಲಚಂದ್ರ ಎಚ್.
Published 24 ನವೆಂಬರ್ 2023, 7:31 IST
Last Updated 24 ನವೆಂಬರ್ 2023, 7:31 IST
ಉಡುಪಿಯ ತರಕಾರಿ ಮಾರುಕಟ್ಟೆ
ಉಡುಪಿಯ ತರಕಾರಿ ಮಾರುಕಟ್ಟೆ   

ಉಡುಪಿ: ಕೆಲವೇ ತಿಂಗಳ ಹಿಂದೆ ಗಗನಕ್ಕೇರಿ ಪಾತಾಳಕ್ಕೆ ಕುಸಿದಿದ್ದ ಟೊಮೆಟೊ ಇದೀಗ ಮತ್ತೊಮ್ಮೆ ಏರಿಕೆ ಹಾದಿಯಲ್ಲಿ ಸಾಗುತ್ತಿದೆ. ಎರಡು ವಾರಗಳ ಹಿಂದೆ ಕೆ.ಜಿಗೆ ₹15 ರಿಂದ ₹20ಕ್ಕೆ ಸಿಗುತ್ತಿದ್ದ ಟೊಮೆಟೊ ಪ್ರಸ್ತುತ ₹35 ರಿಂದ ₹40ಕ್ಕೆ ಮುಟ್ಟಿದೆ.

ಟೊಮೆಟೊ ದರ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ತಿಂಗಳಲ್ಲಿ ದರ ದುಪ್ಪಟ್ಟಾಗಿದೆ. ರಾಜ್ಯದಾದ್ಯಂತ ಮಳೆ ಕೊರತೆ ಉಂಟಾಗಿರುವುದು ಹಾಗೂ ಇಳುವರಿ ಕುಸಿತದ ಪರಿಣಾಮ ಟೊಮೆಟೊ ದರ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿ ಶಬ್ಬೀರ್.

ಹೊರ ಜಿಲ್ಲೆಗಳಿಂದ ಗುಣಮಟ್ಟದ ಟೊಮೆಟೊ ಪೂರೈಕೆಯಾಗುತ್ತಿಲ್ಲ. ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬೆಲೆಯೂ ಶೀಘ್ರ ಅರ್ಧಶತಕದ ಗಡಿ ದಾಟುವ ಸಾಧ್ಯತೆಗಳಿವೆ ಎನ್ನುತ್ತಾರೆ ಅವರು.

ADVERTISEMENT

ಈರುಳ್ಳಿ ದರ ಅಲ್ಪ ಕುಸಿತ: ಶತಕದ ಗಡಿ ಮುಟ್ಟಿದ್ದ ಈರುಳ್ಳಿ ದರ ಅಲ್ಪ ಕುಸಿತ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹60 ರಿಂದ ₹70ರವರೆಗೆ ದರ ಇದೆ. ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದ ಈರುಳ್ಳಿ ಸರಬರಾಜಾಗುತ್ತಿರುವ ಪರಿಣಾಮ ದರ ಏರಿಕೆ ಸಾಧ್ಯತೆಗಳು ಕಡಿಮೆ, ಬದಲಾಗಿ ಸ್ಥಿರವಾಗಿರಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬೀನ್ಸ್ ಹೆಚ್ಚಳ: ಮಳೆ ಕೊರತೆಯಿಂದ ಬಹುತೇಕ ತರಕಾರಿಗಳ ದರ ಹೆಚ್ಚಾಗಿದ್ದು ಬೀನ್ಸ್ ಶತಕದ ಗಡಿ ಮುಟ್ಟಿದೆ. ಕೆ.ಜಿಗೆ ₹90 ಮುಟ್ಟಿದ್ದು, ಗ್ರಾಹಕರ ಜೇಬಿಗೆ ಬಾರವಾಗಿದೆ. ಕೆ.ಜಿಗೆ ₹30ರಿಂದ ₹40ಕ್ಕೆ ಸಿಗುತ್ತಿದ್ದ ಬೆಂಡೆ ಕೂಡ ₹60ಕ್ಕೆ ತಲುಪಿದೆ. ಕ್ಯಾರೆಟ್‌ ಕೆ.ಜಿಗೆ ₹50, ಆಲೂಗಡ್ಡೆ ₹40, ಬದನೆಕಾಯಿ ₹30, ಬೀಟ್‌ರೂಟ್‌ ₹40, ಕ್ಯಾಪ್ಸಿಕಂ ₹50, ಸೌತೆಕಾಯಿ ₹40, ಹಸಿ ಮೆಣಸಿನಕಾಯಿ ₹70, ಹಾಗಲಕಾಯಿ ₹50, ನುಗ್ಗೆ ₹150, ಬೆಳ್ಳುಳ್ಳಿ ₹220, ಹಿರೇಕಾಯಿ ₹50, ಸಾಂಬಾರ್ ಸೌತೆ ₹30, ಸಿಹಿ ಕುಂಬಳ ₹20, ಬೂದುಗುಂಬಳ ₹20 ದರ ಇದೆ. ಎಲೆಕೋಸಿನ ದರ ಕುಸಿತವಾಗಿದ್ದು ಕೆ.ಜಿಗೆ ₹10 ರಿಂದ ₹15 ಇದ್ದು, ಹೂಕೋಸು ₹30 ದರ ಇದೆ.

ಮಾರುಕಟ್ಟೆಗೆ ಕಿತ್ತಲೆಯ ಪೂರೈಕೆ ಹೆಚ್ಚಾಗಿದ್ದರೂ ದರ ಕಡಿಮೆಯಾಗಿಲ್ಲ. ಕೆ.ಜಿಗೆ ₹60 ರಿಂದ ₹65ಕ್ಕೆ ಮಾರಾಟವಾಗುತ್ತಿದೆ. ಏಲಕ್ಕಿ ಬಾಳೆ ಕೆ.ಜಿಗೆ ₹80ರಿಂದ ₹85, ಸೇಬು ₹ 180 ರಿಂದ ₹250, ಕಲ್ಲಂಗಡಿ ₹25, ಮಸ್ಕ್ ಮೆಲನ್ ₹40, ದಾಳಿಂಬೆ ₹240, ಪೈನಾಪಲ್‌ ₹40, ಮೂಸಂಬಿ ₹70, ಪಪ್ಪಾಯ ₹45 ದರ ಇದೆ.

ಸೊಪ್ಪಿನ ದರ ಸ್ಥಿರವಾಗಿದ್ದು ಕೊತ್ತಂಬರಿ ಒಂದು ಕಟ್ಟಿಗೆ ₹6 ರಿಂದ ₹8, ಕರಿಬೇವು ₹6, ಪಾಲಕ್ ₹7, ಪುದೀನ ₹7 ಇದೆ.

ಮೊಟ್ಟೆ ದುಬಾರಿ ಮಾಂಸ ಇಳಿಕೆ
ಕೋಳಿ ಮಾಂಸಕ್ಕಿಂತ ಮೊಟ್ಟೆಗೆ ದರ ಹೆಚ್ಚಾಗಿದೆ. ಒಂದು ಮೊಟ್ಟೆಗೆ ₹7 ರಿಂದ ₹7.50 ಇದೆ. ಚಿಕನ್‌ ಬ್ರಾಯ್ಲರ್ (ಚರ್ಮ ರಹಿತ) ₹220 ಚರ್ಮ ಸಹಿತ ₹200 ಇದ್ದರೆ ಕುರಿ ಮಾಂಸ ₹700ರಿಂದ ₹800ರವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.