ADVERTISEMENT

ಉಡುಪಿ: ಹಡಿಲುಬಿದ್ಧ ಭೂಮಿಯಲ್ಲಿ ಕೃಷಿ ಯಜ್ಞ

ಉಡುಪಿಯಲ್ಲಿ ಬೀಳುಬಿದ್ದಿರುವ 2 ಸಾವಿರ ಎಕರೆಯಲ್ಲಿ ಭತ್ತ ಕೃಷಿಗೆ ಕೇದಾರೋತ್ಥಾನ ಟ್ರಸ್ಟ್‌ ಸಿದ್ಧತೆ

ಬಾಲಚಂದ್ರ ಎಚ್.
Published 30 ಏಪ್ರಿಲ್ 2021, 19:30 IST
Last Updated 30 ಏಪ್ರಿಲ್ 2021, 19:30 IST
ಉಡುಪಿಯಲ್ಲಿ ಹಡಿಲು ಭೂಮಿಯನ್ನು ಕೃಷಿ ಮಾಡಲು ಹಸನು ಮಾಡುತ್ತಿರುವ ಕೇದಾರೋತ್ಥಾನ ಟ್ರಸ್ಟ್‌ನ ಸದಸ್ಯರು+
ಉಡುಪಿಯಲ್ಲಿ ಹಡಿಲು ಭೂಮಿಯನ್ನು ಕೃಷಿ ಮಾಡಲು ಹಸನು ಮಾಡುತ್ತಿರುವ ಕೇದಾರೋತ್ಥಾನ ಟ್ರಸ್ಟ್‌ನ ಸದಸ್ಯರು+   

ಉಡುಪಿ: ಹಡಿಲುಬಿದ್ದ ಭೂಮಿ ಕೃಷಿಗೆ ಬಳಕೆಯಾಗಬೇಕು ಎಂಬ ಸದುದ್ದೇಶದಿಂದ ಕೇದಾರೋತ್ಥಾನ ಟ್ರಸ್ಟ್‌ ಮುಂದಡಿ ಇಟ್ಟಿದೆ. ಉಡುಪಿ ತಾಲ್ಲೂಕಿನಲ್ಲಿ ಬೀಳುಬಿದ್ದಿರುವ 2,000 ಎಕರೆಗೂ ಹೆಚ್ಚು ಭೂಮಿಯಲ್ಲಿ ಭತ್ತದ ಕೃಷಿಗೆ ಸಿದ್ಧತೆ ಮಾಡಿಕೊಂಡಿದೆ.

ಅಂತರ್ಜಲ ವೃದ್ಧಿ, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಲಾಕ್‌ಡೌನ್‌ನಿಂದ ನಗರಬಿಟ್ಟು ಊರು ಸೇರಿರುವ ಯುವಕರನ್ನು ಕೃಷಿಯತ್ತ ಸೆಳೆಯುವುದು ಟ್ರಸ್ಟ್‌ನ ಉದ್ದೇಶ.

ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ರಚನೆಯಾಗಿರುವ ಕೇದಾರೋತ್ಥಾನ ಟ್ರಸ್ಟ್ ತಾಲ್ಲೂಕಿನ 19 ಗ್ರಾಮ ಪಂಚಾಯಿತಿಗಳಲ್ಲಿ ಪ್ರಮುಖರ ಸಭೆ ನಡೆಸಿದ್ದು, ಪಂಚಾಯಿತಿವಾರು ಹಡಿಲು ಭೂಮಿ ಗುರುತಿಸಿದೆ. ಭೂಮಾಲೀಕರ ಒಪ್ಪಿಗೆ ಪಡೆದು ಉಳುಮೆಯನ್ನೂ ಆರಂಭಿಸಿದೆ.

ADVERTISEMENT

ದಶಕಗಳಿಂದ ಕೃಷಿ ಮಾಡದೆ ಜೊಂಡು ಬೆಳೆದಿರುವ ಭೂಮಿಯನ್ನು 15ಕ್ಕೂ ಹೆಚ್ಚು ಜೆಸಿಬಿಗಳಿಂದ ಹಸನು ಮಾಡಲಾಗುತ್ತಿದೆ. ಮುಚ್ಚಿಹೋಗಿದ್ದ ಕಾಲುವೆಗಳನ್ನು ಬಿಡಿಸಲಾಗುತ್ತಿದೆ.

ಖರ್ಚು ವೆಚ್ಚ:

2,000 ಎಕರೆಯಲ್ಲಿ ಭತ್ತ ಬೆಳೆಯಲು ₹ 4 ರಿಂದ₹ 5 ಕೋಟಿ ಖರ್ಚು ರ್ಅಂದಾಜಿಸಲಾಗಿದ್ದು, ಈ ಹಣವನ್ನು ದಾನಿಗಳಿಂದ ಪಡೆಯಲು ಹಾಗೂ ಬಡ್ಡಿ ರಹಿತ ಮುಂಗಡವಾಗಿ ಪಡೆಯಲು ಟ್ರಸ್ಟ್‌ ನಿರ್ಧರಿಸಿದೆ. ಕರಾವಳಿಯಲ್ಲಿ ಬಹುಬೇಡಿಕೆಯ ಎಂಒ–4 (ಕಜೆ) ತಳಿಯ ಭತ್ತವನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಲಾಗುತ್ತಿದ್ದು, ಬೆಳೆದ ಭತ್ತವನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಖರ್ಚುವೆಚ್ಚ ಸರಿದೂಗಿಸಲಾಗುವುದು. ಮುಂಗಡ ಕೊಟ್ಟವರಿಗೆ ಮರುಪಾವತಿ ಮಾಡಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ಹಾಗೂ ಶಾಸಕರೂ ಆದ ಕೆ.ರಘುಪತಿ ಭಟ್ ತಿಳಿಸಿದರು.

ಪ್ರತಿವರ್ಷ ಕನಿಷ್ಠ 2,000 ಎಕರೆ ಹಡಿಲು ಭೂಮಿ ಕೃಷಿ ಮಾಡುವುದು ಟ್ರಸ್ಟ್‌ನ ಗುರಿ. ಇಲ್ಲಿ ಭೂಮಾಲೀಕರ ಹಾಗೂ ಟ್ರಸ್ಟ್‌ ಮಧ್ಯೆ ಒಪ್ಪಂದ ಇರುವುದಿಲ್ಲ. ಭೂಮಿ ಕೊಟ್ಟವರಿಗೆ ಗೇಣಿಯನ್ನು ನೀಡುವುದಿಲ್ಲ. ಬದಲಾಗಿ, ಭೂಮಿಯನ್ನು ಕೃಷಿ ಮಾಡಲು ಹಸನು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು ಶಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.