ಉಡುಪಿ: ನಿತ್ಯ ಮೀನುಗಾರಿಕಾ ಚಟುವಟಿಕೆ ನಡೆಯುವ ಮಲ್ಪೆಯ ಮೀನುಗಾರಿಕಾ ಬಂದರು ಮತ್ತು ಸದಾ ಪ್ರವಾಸಿಗರು ಭೇಟಿ ನೀಡುವ ಬೀಚ್ ಹಾಗೂ ಪರಿಸರದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.
ಟ್ರಾಲಿಂಗ್ ನಿಷೇಧ ಜಾರಿಯಲ್ಲಿರುವ ಕಾರಣ ಮಲ್ಪೆ ದಕ್ಕೆಯಲ್ಲಿ ನೂರಾರು ಯಾಂತ್ರೀಕೃತ ಬೋಟ್‌ಗಳನ್ನು ನಿಲುಗಡೆ ಮಾಡಲಾಗಿದೆ. ಈ ಬೋಟ್‌ಗಳನ್ನು ನಿಲ್ಲಿಸಿರುವ ಸ್ಥಳದಲ್ಲಿ, ಹೊಳೆ ನೀರಿನಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲಿಗಳು, ತ್ಯಾಜ್ಯಗಳು ತೇಲುತ್ತಿವೆ.
ದಕ್ಕೆಯ ಒಳಗೂ ಕೆಲವೆಡೆ ಕಸ ಎಸೆದಿರುವುದರಿಂದ ಗಬ್ಬು ನಾರುತ್ತಿದೆ. ದಕ್ಕೆಯ ಸುತ್ತಮುತ್ತಲಿನ ಪ್ರದೇಶದಲ್ಲೂ ಸಮರ್ಪಕವಾಗಿ ಕಸ ವಿಲೇವಾರಿಯಾಗದೆ ತ್ಯಾಜ್ಯ ರಾಶಿ ಬಿದ್ದಿದೆ ಎಂದು ಸ್ಥಳೀಯರು ದೂರುತ್ತಾರೆ.
ಇದೀಗ ನಾಡ ದೋಣಿ ಮೀನುಗಾರಿಕೆ ಚುರುಕುಗೊಂಡಿರುವುದರಿಂದ ದಕ್ಕೆಯಲ್ಲಿ ಮತ್ತೆ ಮೀನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆ ಗರಿಗೆದರಿದೆ. ದಿನನಿತ್ಯ ನೂರಾರು ಗ್ರಾಹಕರು ಮೀನು ಖರೀದಿಸಲು ಬರುತ್ತಿದ್ದಾರೆ. ಆದರೆ, ದಕ್ಕೆಯ ಕೆಲವು ಕಡೆಗೆ ಸ್ವಚ್ಛತೆಗೇ ಧಕ್ಕೆ ಇರುವುದರಿಂದ ಜನರು ಮೂಗು ಮುಚ್ಚಿ ನಡೆಯಬೇಕಾದ ಪರಿಸ್ಥಿತಿ ಇದೆ.
ದಕ್ಕೆಯೊಳಗಿನಿಂದ ಪ್ರತಿದಿನ ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕು, ಚರಂಡಿಗಳು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ತೆರೆದ ಚರಂಡಿಗಳು ಗಬ್ಬು ನಾರುತ್ತಿದ್ದು ಸಾಂಕ್ರಾಮಿಕ ರೋಗ ಆಹ್ವಾನಿಸುತ್ತಿವೆ.
ಸ್ವಚ್ಛತೆ ಕೊರತೆ ಇರುವ ಬಗ್ಗೆ ಹಾಗೂ ಹಲವು ಸಮಸ್ಯೆಗಳ ಬಗ್ಗೆ ಪದೇ ಪದೇ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮೀನುಗಾರರು.
ಮಲ್ಪೆ ಬೀಚ್‌ನಲ್ಲಿ ಕಸದ ರಾಶಿ: ಮಳೆಗಾಲ ಆರಂಭಗೊಂಡು ಕಡಲು ಪ್ರಕ್ಷುಬ್ಧವಾಗುತ್ತಿದ್ದಂತೆ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರು ಕಡಲಿಗಿಳಿಯದಂತೆ ತಡಬೇಲಿ ಹಾಕಲಾಗಿದೆ. ಆದರೆ, ಸಮುದ್ರದ ತೆರೆಗಳು ದಡಕ್ಕೆ ತಂದೆಸೆದ ಕಸಕಡ್ಡಿಗಳು ಈ ತಡೆಬೇಲಿಯ ಸಮೀಪ ಸಂಗ್ರಹಗೊಂಡು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿವೆ.
ಪ್ಲಾಸ್ಟಿಕ್ ಬಾಟಲಿ, ಥರ್ಮೊಕೋಲ್, ಬಲೆಗಳಿಗೆ ಕಟ್ಟುವ ಪ್ಲಾಸ್ಟಿಕ್ ವಸ್ತುಗಳು, ಸಿಯಾಳದ ಚಿಪ್ಪು ಸೇರಿದಂತೆ ರಾಶಿ ರಾಶಿ ಕಸ ಬೀಚ್‌ನಲ್ಲಿ ಸಂಗ್ರಹಗೊಂಡಿದ್ದು, ಅವುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಜತೆಗೆ ಬೀಚ್‌ನ ಅಂದಗೆಡಿಸುತ್ತಿವೆ.
ಮಲ್ಪೆ ದಕ್ಕೆಯಿಂದ ಬೀಚ್ ಕಡೆಗೆ ಸಂಪರ್ಕಿಸುವ ರಸ್ತೆಯ ಬದಿ ಸಮುದ್ರ ತೀರದಲ್ಲಿ ಕೆಲವೆಡೆ ಮುರಿದುಹೋದ ದೋಣಿಗಳನ್ನು ಹಾಗೆಯೇ ಬಿಟ್ಟಿದ್ದು, ಅವುಗಳಲ್ಲೂ ಮಳೆ ನೀರು ಸಂಗ್ರಹಗೊಳ್ಳುತ್ತಿದೆ.
ಮಲ್ಪೆ ಬೀಚ್‌ಗೆ ಮಳೆಗಾಲದಲ್ಲಿಯೂ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಮತ್ತು ಸ್ಥಳೀಯರ ಹಿತದೃಷ್ಟಿಯಿಂದ ಕಸ ತೆರವಿಗೆ ಸಂಬಂಧಪಟ್ಟವರು ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಮಲ್ಪೆ ಬೀಚ್‌ನ ನಿರ್ವಹಣೆಯನ್ನು ಈಗ ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದೆ. ಕಡಲಿನಿಂದ ದಡಕ್ಕೆ ಬಿದ್ದಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವುದಾದರೆ ನಗರಸಭೆಯಿಂದ ಸಹಕಾರ ನೀಡುವುದಾಗಿ ತಿಳಿಸಿದ್ದೇವೆ. ಸ್ವಚ್ಛತೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದುಮಹಾಂತೇಶ ಹಂಗರಗಿ ನಗರಸಭೆ ಪೌರಾಯುಕ್ತ
‘ಡೆಂಗಿ ಪ್ರಕರಣ: ಕಳೆದ ವರ್ಷಕ್ಕಿಂತ ಕಡಿಮೆ’
ಈ ಬಾರಿ ಡೆಂಗಿ ಪ್ರಕರಣವು ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಮಲ್ಪೆ ಪ್ರದೇಶದಲ್ಲೂ ಈ ಬಾರಿ ಅಧಿಕ ಪ್ರಕರಣಗಳು ದಾಖಲಾಗಿಲ್ಲ. ಈ ವರ್ಷ ಇದುವವರೆಗೆ ಹೊರಗಿನಿಂದ ಬಂದವರೂ ಸೇರಿ 160ರಿಂದ 170 ಡೆಂಗಿ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ತಿಳಿಸಿದರು. ಮಲ್ಪೆ ಬೀಚ್‌ನಲ್ಲಿ ಮೀನುಗಾರಿಕಾ ದೋಣಿಗಳಿಗೆ ಕಟ್ಟುತ್ತಿದ್ದ ಟೈರ್‌ಗಳಲ್ಲಿ ಮಳೆ ನೀರು ನಿಂತು ಡೆಂಗಿ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿತ್ತು. ಈಗ ಬಗ್ಗೆ ಪದೇ ಪದೇ ಸಭೆ ನಡೆಸಿ ಮೀನುಗಾರರಿಗೆ ಮನವರಿಕೆ ಮಾಡಿದ್ದು ಈಗ ದೋಣಿಗಳಲ್ಲಿ ಟೈರ್ ಬದಲಿಗೆ ಹಗ್ಗಗಳನ್ನು ಕಟ್ಟುತ್ತಿದ್ದಾರೆ. ಮೀನುಗಾರಿಕಾ ದೋಣಿಗಳ ಟ್ಯಾಂಕ್‌ಗಳನ್ನೂ ಮುಚ್ಚಲು ಸೂಚಿಸಿದ್ದೇವೆ ಎಂದೂ ಅವರು ಹೇಳಿದರು.
‘ಸ್ವಚ್ಛತೆಗಿಲ್ಲ ಆದ್ಯತೆ’
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸ್ವಚ್ಛತೆ ಎಂಬುದು ಕಾಣದಾಗಿದೆ. ಬಂದರಿನ ನಿರ್ವಹಣೆಯನ್ನು ಸಂಘ ಸಂಸ್ಥೆಗಳಿಗೆ ಕೊಡಿ ಎಂದರೂ ಕೊಡದೆ ಟೆಂಡರ್ ಕರೆಯದೆ ಹಿಂದೆ ನಿರ್ವಹಣೆ ಮಾಡುತ್ತಿದ್ದವರಿಗೆ ನೀಡಲಾಗಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ತಿಳಿಸಿದ್ದಾರೆ. ಬಂದರಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತೇವೆ ಸಮರ್ಪಕ ಶೌಚಾಲಯ ವ್ಯವಸ್ಥೆ ಮಾಡುತ್ತೇವೆ ಎಂದು ಸಂಬಂಧಪಟ್ಟವರು ಭರವಸೆ ನೀಡಿದ್ದಾರೆಯೇ ವಿನಾ ಅದು ಜಾರಿಗೆ ಬಂದಿಲ್ಲ. ಇದರಿಂದ ಮೀನುಗಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಅವರು ಹೇಳಿದರು.
‘ನಿರ್ವಹಣೆದಾರರಿಗೆ ಕಟ್ಟುನಿಟ್ಟಿನ ಸೂಚನೆ’
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಿರ್ವಹಣೆ ಗುತ್ತಿಗೆ ಪಡೆದಿರುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ದಕ್ಕೆಯೊಳಗೆ ಎಲ್ಲೂ ನೀರು ಕಟ್ಟಿನಿಲ್ಲದಂತೆ ಎಚ್ಚರ ವಹಿಸಲೂ ಸೂಚಿಸಿದ್ದೇವೆ ಎಂದು ಮೀನುಗಾರಿಕಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜ ತಿಳಿಸಿದ್ದಾರೆ. ಬೋಟ್‌ಗಳಲ್ಲಿ ಟೈರ್ ಬಳಸುವ ಪ್ರವೃತ್ತಿ ಈಗ ಶೇ 90ರಷ್ಟು ಕಡಿಮೆಯಾಗಿದೆ. ದಕ್ಕೆಯಲ್ಲಿ ನಿಲುಗಡೆಯಾಗಿರುವ ಬೋಟ್‌ಗಳಲ್ಲೂ ಸ್ವಚ್ಛತೆ ಕಾಪಾಡುವಂತೆ ಮೀನುಗಾರರಿಗೆ ಸೂಚನೆ ನೀಡಿದ್ದೇವೆ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.