ADVERTISEMENT

ದುರಸ್ತಿ ಕಾಣದೆ ಹದಗೆಟ್ಟಿವೆ ಉಡುಪಿ ರಸ್ತೆಗಳು: ವಾಹನ ಸವಾರರಿಗೆ ನಿತ್ಯ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:47 IST
Last Updated 1 ಜನವರಿ 2026, 7:47 IST
ಉಡುಪಿ ನಗರದ ತೆಂಕಪೇಟೆ ವಾರ್ಡ್‌ನ ಕೊಳದಪೇಟೆ ರಸ್ತೆಯ ದುರವಸ್ಥೆ
ಉಡುಪಿ ನಗರದ ತೆಂಕಪೇಟೆ ವಾರ್ಡ್‌ನ ಕೊಳದಪೇಟೆ ರಸ್ತೆಯ ದುರವಸ್ಥೆ   

ಉಡುಪಿ: ಮಳೆಗಾಲ ಮುಗಿದು ತಿಂಗಳುಗಳು ಕಳೆದು, ಪರ್ಯಾಯ ಮಹೋತ್ಸವ ಸಮೀಪಿಸಿದರೂ ನಗರದ ರಸ್ತೆಗಳ ದುರಸ್ತಿ ಕಾರ್ಯ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಪರ್ಯಾಯ ಮೆರವಣಿಗೆ ನಡೆಯುವ ಜೋಡುಕಟ್ಟೆ ರಸ್ತೆ, ಕೊಳದ ಪೇಟೆ, ಮಿತ್ರಾ ಆಸ್ಪತ್ರೆ ರಸ್ತೆ, ಅಂಬಲಪಾಡಿಯಿಂದ ಬ್ರಹ್ಮಗಿರಿ ಕಡೆಗೆ ಸಾಗವ ರಸ್ತೆ ಸೇರಿದಂತೆ ಬಹುತೇಕ ಮುಖ್ಯ ರಸ್ತೆಗಳು, ಒಳ ರಸ್ತೆಗಳಲ್ಲಿ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಡಿಸೆಂಬರ್‌ ತಿಂಗಳಲ್ಲಿ ಪ್ರವಾಸಿಗರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದು, ರಸ್ತೆಗಳ ಅವ್ಯವಸ್ಥೆಯಿಂದ ಬಸವಳಿದಿದ್ದರು. ಮಲ್ಪೆ ಬೀಚ್‌ ಬಳಿಯ ರಸ್ತೆಗಳೂ ತೀರಾ ಹದಗೆಟ್ಟಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗಿತ್ತು. ಜೊತೆಗೆ ಅಂಬಲಪಡಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯಲ್ಲಿ ನಿತ್ಯ ವಾಹನ ದಟ್ಟಣೆ ಉಂಟಾಗುತ್ತಿದೆ.

ADVERTISEMENT

ಅಂಬಲಪಾಡಿ ಬೈಪಾಸ್‌ನಿಂದ ಬ್ರಹ್ಮಗಿರಿಯ ಕಡೆಗೆ ತೆರಳುವ ರಸ್ತೆ ತೀರಾ ಹದಗೆಟ್ಟು ವರ್ಷ ಕಳೆದರೂ ಅದಕ್ಕೆ ತೇಪೆ ಕಾರ್ಯ ನಡೆಸಲೂ ಸಂಬಂಧಪಟ್ಟವರು ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಜನವರಿ 18 ರಂದು ಕೃಷ್ಣ ಮಠದಲ್ಲಿ ಶಿರೂರು ಪರ್ಯಾಯ ಮಹೋತ್ಸವವು ನಡೆಯಲಿದ್ದು, ಜಿಲ್ಲೆಯಿಂದ ಹಾಗೂ ವಿವಿಧೆಡೆಯಿಂದ ಸಾವಿರಾರು ಭಕ್ತರು ಬರಲಿದ್ದಾರೆ. ಹದಗೆಟ್ಟಿರುವ ರಸ್ತೆಗಳಿಂದಾಗಿ ಅವರಿಗೆ ತೊಂದರೆಯಾಗಲಿದೆ. ರಸ್ತೆ ಹೊಂಡಗಳಿಂದಾಗಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸವಾರಿಯು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದೂ ಅಳಲು ತೋಡಿಕೊಳ್ಳುತ್ತಾರೆ.

ಈ ಬಾರಿ ವಿಪರೀತ ಮಳೆ ಸುರಿದ ಕಾರಣ ನಗರ ವ್ಯಾಪ್ತಿಯ ಹಲವು ರಸ್ತೆಗಳು ತೀರಾ ಹದಗೆಟ್ಟಿದ್ದವು. ಕೆಲವು ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ನಡೆದರೂ ಸಮರ್ಪಕ ದುರಸ್ತಿ ಕಾರ್ಯ ನಡೆದಿಲ್ಲ ಎಂಬುದು ಜನರ ಆರೋಪವಾಗಿದೆ.

ನಗರದ ಮಿತ್ರಾ ಆಸ್ಪತೆ ರಸ್ತೆಯು ತೀರಾ ಹದಗೆಟ್ಟಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ನಗರ ಸೇರಿದಂತೆ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳೂ ನಡೆಯುತ್ತಿರುವುದರಿಂದಲೂ ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

ನಗರದ ಪ್ರಮುಖ ರಸ್ತೆಗಳಾದ ಕಿನ್ನಿಮುಲ್ಕಿ, ಬೀಡಿನ ಗುಡ್ಡೆ, ಒಳಕಾಡು ರಸ್ತೆ ಹಾಗೂ ಮಣಿಪಾಲದ ಹಲವು ರಸ್ತೆಗಳಲ್ಲಿ ಬೃಹತ್‌ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರಿಗೆ ಗೋಳು ತಪ್ಪಿಲ್ಲ.

ಪ್ರತಿವರ್ಷವೂ ಮಳೆಗಾಲ ಮುಗಿದ ಕೂಡಲೇ ರಸ್ತೆಗಳ ದುರಸ್ತಿ ನಡೆಸಬೇಕೆಂದು ಜನರು ಆಗ್ರಹಿಸಿದರೂ ಸಂಬಂಧಪಟ್ಟವರು ಅದಕ್ಕೆ ಗಮನ ನೀಡುವುದಿಲ್ಲ ಈ ಕಾರಣಕ್ಕೆ ರಸ್ತೆಗಳು ಸಂಪೂರ್ಣ ಹದಗೆಟ್ಟು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಕೃಷ್ಣಮಠ‌ದ ಬಳಿಯ ರಸ್ತೆಯೊಂದರ ಡಾಂಬರು ಕಿತ್ತು ಹೋಗಿರುವುದು

‘ನಗರಸಭೆಯಿಂದ ದುರಸ್ತಿ’

‘ನಗರದ ಹದಗೆಟ್ಟಿರುವ ರಸ್ತೆಗಳನ್ನು ಪರ್ಯಾಯಕ್ಕೂ ಮುನ್ನ ದುರಸ್ತಿಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದು ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದರು. ‘ರಾಜಾಂಗಣ ರಸ್ತೆ ಕಟ್ಟೆ ಆಚಾರ್ಯ ರಸ್ತೆ ಜೋಡು ಕಟ್ಟೆ ರಸ್ತೆ ಸೇರಿದಂತೆ ಪರ್ಯಾಯ ಮೆರವಣಿಗೆ ಸಾಗುವ ರಸ್ತೆಗಳನ್ನು ಜನವರಿ 6 ರೊಳಗೆ ನಗರಸಭೆಯ ನಿಧಿಯಿಂದಲೇ ದುರಸ್ತಿಗೊಳಿಸಲಾಗುವುದು. ಜೊತೆಗೆ ನಗರದ ಇತರ ರಸ್ತೆಗಳನ್ನೂ ದುರಸ್ತಿಗೊಳಿಸಲಾಗುವುದು’ ಎಂದೂ ಅವರು ಹೇಳಿದರು.

‘ಆಸ್ಪತ್ರೆಗೆ ತೆರಳುವವರಿಗೂ ತೊಂದರೆ‘

‘ಡಿಸೆಂಬರ್‌ ಜನವರಿ ತಿಂಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಾರೆಂದು ಗೊತ್ತಿದ್ದರೂ ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗಿಲ್ಲ. ಪರ್ಯಾಯದ ವೇಳೆ ನಗರಸಭೆಯ ವತಿಯಿಂದ ₹50 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು. ವಿದ್ಯುತ್ ದೀಪಾಲಂಕಾರವನ್ನು ದಾನಿಗಳ ಮೂಲಕ ಮಾಡಿಸಿ ಆ ಹಣವನ್ನು ರಸ್ತೆಗಳ ದುರಸ್ತಿಗೆ ಬಳಸಿದರೆ ಅನುಕೂಲವಾಗಲಿದೆ’ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಿಳಿಸಿದರು. ‘ನಗರದ ರಸ್ತೆಗಳು ಹದಗೆಟ್ಟಿರುವುದರಿಂದ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ತೆರಳುವವರಿಗೆ ಹಾಗೂ ಆಂಬುಲೆನ್ಸ್‌ಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ನಗರಸಭೆ ಹಾಗೂ ಜಿಲ್ಲಾಡಳಿತವು ರಸ್ತೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.