ADVERTISEMENT

ಉಡುಪಿ–ಶಿವಮೊಗ್ಗ ಸಂಚಾರಕ್ಕೆ ತಾತ್ಕಾಲಿಕ ತಡೆ

ಆಗುಂಬೆ ಮಾರ್ಗವಾಗಿ ತೆರಳದ ಕೆಎಸ್‌ಆರ್‌ಟಿಸಿ: ಮಧ್ಯಾಹ್ನದ ಬಳಿಕ ತೆರಳಿದ ಖಾಸಗಿ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 19:20 IST
Last Updated 11 ಆಗಸ್ಟ್ 2019, 19:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಡುಪಿ ಹಾಗೂ ಶಿವಮೊಗ್ಗ ನಡುವಿನ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಭಾನುವಾರ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು.

ಪ್ರತಿದಿನ ಉಡುಪಿ ಡಿಪೋದಿಂದ ಆಗುಂಬೆ ಮಾರ್ಗವಾಗಿ 10 ಬಸ್‌ಗಳು ಹೊರಡುತ್ತಿದ್ದವು. ಆದರೆ, ತೀರ್ಥಹಳ್ಳಿ ಸಮೀಪ ಸೇತುವೆ ಕುಸಿದಿರುವ ಪರಿಣಾಮ ಆಗುಂಬೆ ಘಾಟಿ ಮಾರ್ಗವಾಗಿ ಚಲಿಸಬೇಕಿದ್ದ ಬಸ್‌ಗಳು ತೆರಳಲಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಭಾರಿ ಮಳೆಯಾಗಿದ್ದರಿಂದ ರಸ್ತೆಗಳು ಹಾಳಾಗಿವೆ. ಹಾಗಾಗಿ, ಹೊಸನಗರ, ಆಯನೂರು ಮಾರ್ಗವಾಗಿ ಬಸ್‌ಗಳನ್ನು ಓಡಿಸುವ ಕುರಿತು ಚಿಂತನೆ ನಡೆಯುತ್ತಿದೆ. ಪ್ರಯಾಣಿಕರ ಹಿತದೃಷ್ಟಿಯಿಂದ ರಸ್ತೆ ಹಾಗೂ ಸೇತುವೆಗಳ ದುರಸ್ತಿ ಬಳಿಕ ಬಸ್‌ಗಳನ್ನು ಓಡಿಸಲಾಗುವುದು ಎಂದುಅಧಿಕಾರಿಗಳು ಸ್ಪಷ್ಟಪಡಿಸಿದರು.

ADVERTISEMENT

ಭಾನುವಾರ ಉಡುಪಿಯಿಂದ ಹೈದ್ರಾಬಾದ್‌ಗೆ ತೆರಳಬೇಕಿದ್ದ ಬಸ್‌ ಕೂಡ ಓಡಲಿಲ್ಲ. ಪ್ರತಿದಿನ ಉಡುಪಿಯಿಂದ 40ಕ್ಕೂ ಹೆಚ್ಚು ಬಸ್‌ಗಳು ವಿವಿಧ ಜಿಲ್ಲೆಗಳು ಹಾಗೂ ನೆರೆಯ ರಾಜ್ಯಗಳ ಮಧ್ಯೆ ಸಂಚರಿಸುತ್ತವೆ. 11 ಬಸ್‌ಗಳನ್ನು ಹೊರತುಪಡಿಸಿ ಉಳಿದ ಬಸ್‌ಗಳ ಸೇವೆಗೆ ಅಡ್ಡಿಯಾಗಲಿಲ್ಲ ಎಂದು ಮಾಹಿತಿ ನೀಡಿದರು.

ರೋಗಿಗಳಿಗೆ ತೊಂದರೆ:ಪ್ರತಿದಿನ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಬರುತ್ತಾರೆ. ಬಹುತೇಕ ವಾಹನಗಳು ಶಿವಮೊಗ್ಗ–ತೀರ್ಥಹಳ್ಳಿ–ಆಗುಂಬೆ–ಮಾರ್ಗವಾಗಿಯೇ ಮಣಿಪಾಲಕ್ಕೆ ಬರುತ್ತಿದ್ದವು. ರಸ್ತೆ ಸಂಪರ್ಕ ಕಡಿತದಿಂದಾಗಿ ರೋಗಿಗಳಿಗೆ ತೊಂದರೆಯಾಗಿತ್ತು.

ಆದರೆ, ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್‌ಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎನ್ನಲಾಗಿದೆ. ರೋಗಿಗಳು ಶಿವಮೊಗ್ಗದಿಂದ ಆಯನೂರು, ಹೊಸನಗರ ಮಾರ್ಗವಾಗಿ ಮಣಿಪಾಲಕ್ಕೆ ಬರುತ್ತಿದ್ದಾರೆ.

ಖಾಸಗಿ ಬಸ್‌ ಸಂಚಾರ ಆರಂಭ:ಉಡುಪಿಯಿಂದ ಶಿವಮೊಗ್ಗಕ್ಕೆ ಸಂಚರಿಸುವ ಖಾಸಗಿ ಬಸ್‌ಗಳು ಭಾನುವಾರ ಮಧ್ಯಾಹ್ನದ ಬಳಿಕ ಓಡಾಟ ಆರಂಭಿಸಿವೆ. ಮಳೆ ಕ್ಷೀಣವಾಗಿರುವುದರಿಂದ ಆಗುಂಬೆ ಮಾರ್ಗವಾಗಿಯೇ ಬಸ್‌ಗಳು ಸಂಚರಿಸುತ್ತಿವೆ ಎಂದು ಬಸ್ ಮಾಲೀಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.