ADVERTISEMENT

ಉಡುಪಿ | ಬೀದಿನಾಯಿ ಸಮಸ್ಯೆ: ಪರಿಹಾರ ಕಂಡುಕೊಳ್ಳಿ-ನಗರಸಭೆ ಸದಸ್ಯೆ ಸುಮಿತ್ರಾ

ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:37 IST
Last Updated 30 ಆಗಸ್ಟ್ 2025, 6:37 IST
ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿದರು
ಸಾಮಾನ್ಯ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿದರು   

ಉಡುಪಿ: ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು, ಮಕ್ಕಳು ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಾಯಿಗಳಿಗೆ ಆಹಾರ ಹಾಕುವವರ ಜೊತೆಗೂ ಸಭೆ ನಡೆಸಿ ಚರ್ಚಿಸಬೇಕು ಎಂದು ನಗರಸಭೆ ಸದಸ್ಯೆ ಸುಮಿತ್ರಾ ನಾಯಕ್‌ ಹೇಳಿದರು.

ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಅದಕ್ಕೆ ದನಿಗೂಡಿಸಿದ ಕೃಷ್ಣರಾವ್‌ ಕೊಡಂಚ, ನಾಯಿಗಳನ್ನು ಪ್ರತ್ಯೇಕ ಜಾಗದಲ್ಲಿ ಬಿಡಲು ಎಲ್ಲಿ ಜಾಗ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ADVERTISEMENT

ಅದಕ್ಕೆ ಉತ್ತರಿಸಿದ ಅಧಿಕಾರಿಗಳು ನಾಯಿಗಳನ್ನು ಪ್ರತ್ಯೇಕ ಸ್ಥಳದಲ್ಲಿ ಬಿಡಲು 1 ಎಕ್ರೆ ಜಾಗ ಬೇಕು. ಅವುಗಳಿಗೆ ಆಹಾರ ನೀಡುವುದು ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಅಂದಾಜು ₹1 ಕೋಟಿ ಖರ್ಚಾಗುತ್ತದೆ ಎಂದರು.

ಬೀದಿ ನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ಹಾಕಲಾಗುತ್ತಿದೆ. ಬೀದಿ ನಾಯಿಗಳ ಸಮಸ್ಯೆ ಗಂಭೀರವಾಗಿದ್ದು, ಈ ಕುರಿತು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಕೃಷ್ಣರಾವ್‌ ಕೊಡಂಚ ಹೇಳಿದರು.

ಬಿ ಖಾತೆ, ಇ ಖಾತೆ ಸಮಸ್ಯೆಗಳಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು. ‌ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಇ ಆಸ್ತಿ ಮತ್ತು ಕಾವೇರಿ ತಂತ್ರಾಂಶಗಳನ್ನು ಸಂಯೋಜಿಸಿದ ಬಳಿಕ ಸರ್ವರ್‌ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಬಿ ಖಾತಾ, ಇ ಖಾತಾ ವಿತರಣೆಯಲ್ಲಿ ಸೆಪ್ಟೆಂಬರ್‌ 1ರಿಂದ ಯಾವುದೇ ತೊಂದರೆಯಾಗಬಾರದು ಎಂದು ಹೇಳಿದರು.

ನಗರಸಭೆ ವ್ಯಾಪ್ತಿಯಲ್ಲಿ ದಾಖಲೆಗಳಲ್ಲಿಲ್ಲದ ರಸ್ತೆಗಳನ್ನು ಗುರುತಿಸುವ ವಿಚಾರವನ್ನು ಕೆಲವು ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಶಾಸಕ ಯಶ್‌ಪಾಲ್‌ ಸುವರ್ಣ, ನಗರಸಭೆ ಕಾಮಗಾರಿ ನಡೆಸಿರುವ ರಸ್ತೆಗಳನ್ನು ನಗರಸಭೆಯ ರಸ್ತೆ ಎಂಬುದಾಗಿಯೇ ನಿರ್ಣಯ ಅಂಗೀಕರಿಸುವ ಎಂದರು.

ಮಲ್ಪೆಯಲ್ಲಿ ಕೊಳಚೆ ನೀರಿನ ಸಮಸ್ಯೆ ಇದ್ದು ಸಾವರ್ಜನಿಕರಿಗೆ ತೊಂದರೆಯಾಗುತ್ತಿರುವ ವಿಚಾರವನ್ನೂ ಸದಸ್ಯರು ಸಭೆಯ ಗಮನಕ್ಕೆ ತಂದರು. ಸುಬ್ರಹ್ಮಣ್ಯ ನಗರದಲ್ಲಿ ಕೊಳಚೆ ನೀರಿನಿಂದಾಗಿ ಬಾವಿಗಳ ನೀರು ಕಲುಷಿತವಾಗುವ ಸಮಸ್ಯೆ ಪರಿಹಾರವಾಗಿಲ್ಲ ಎಂದು ಸದಸ್ಯೆ ಜಯಂತಿ ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ದುರ್ಗಾಪ್ರಸಾದ್‌ ಭಾಗವಹಿಸಿದ್ದರು.

ಸಿಟಿ ಬಸ್‌ ನಿಲ್ದಾಣದಲ್ಲಿ ಬೀದಿ ದೀಪವಿಲ್ಲದೆ ಜನರಿಗೆ ಸಮಸ್ಯೆಯಾಗುತ್ತಿದೆ. ಅಲ್ಲಿ ಹೈಮಾಸ್ಟ್‌ ದೀಪ ಅಳವಡಿಸಬೇಕು
ಸುರೇಶ್‌ ಶೆಟ್ಟಿ ಬನ್ನಂಜೆ ಸದಸ್ಯ
ಮಲ್ಪೆ ಬೀಚ್‌ನ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದೆ. ಬೀಚ್‌ನಲ್ಲಿ ರಾಶಿ ರಾಶಿ ಕಸ ಬಿದ್ದಿದ್ದರೂ ಸ್ವಚ್ಛತೆಗೆ ಮುಂದಾಗಿಲ್ಲ
ಲಕ್ಷ್ಮಿ ಕೊಳ ಸದಸ್ಯೆ

ಪೌರಾಯುಕ್ತರ ಗೈರಿಗೆ ಅಸಮಾಧಾನ ಸಾಮಾನ್ಯ ಸಭೆಯಲ್ಲಿ ನಗರಸಭೆ ಪೌರಾಯುಕ್ತರು ಗೈರಾಗಿದ್ದಕ್ಕೆ ಸದಸ್ಯ ವಿಜಯ್‌ ಕೊಡವೂರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಗ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ ಮೂರು ದಿನಗಳ ತರಬೇತಿಗಾಗಿ ಪೌರಾಯುಕ್ತರು ತೆರಳಿದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ವಿಜಯ್‌ ಕೊಡವೂರು ಸಭೆಯಲ್ಲಿ ಹಲವು ವಿಷಯಗಳಿಗೆ ಪೌರಾಯುಕ್ತರೇ ಉತ್ತರ ನೀಡಬೇಕಾಗುತ್ತದೆ. ಅವರೇ ಗೈರಾದರೆ ಹೇಗೆ. ಹಾಗೇನಾದರೂ ಅನಿವಾರ್ಯವಿದ್ದರೆ ಸಭೆಯ ದಿನಾಂಕ ಬದಲಿಸಬಹುದಿತ್ತಲ್ವಾ ಎಂದು ಪ್ರಶ್ನಿಸಿದರು.

‘ರಾತ್ರಿ 11ರವರೆಗೂ ಅಂಗಡಿ ತೆರೆಯಲು ಅವಕಾಶ’ ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದು ಈಗ 10 ಗಂಟೆಗೆ ಹೋಟೆಲ್‌ ಅಂಗಡಿಗಳನ್ನು ಬಂದ್‌ ಮಾಡಬೇಕಾಗಿರುವುದರಿಂದ ಅವರಿಗೆ ತೊಂದರೆಯಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ರಾತ್ರಿ 11 ಗಂಟೆವರೆಗೂ ಅಂಗಡಿ ಹೋಟೆಲ್‌ಗಳಿಗೆ ಅವಕಾಶ ನೀಡಲು ಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕೆಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು. ಅದಕ್ಕೆ ಸದಸ್ಯರು ಸಮ್ಮತಿ ಸೂಚಿಸಿದರು. ಮಲ್ಪೆ ಬೀಚ್‌ಗೆ ಭೇಟಿ ನೀಡುವ ಸ್ಥಳೀಯರಿಂದ ಪಾರ್ಕಿಂಗ್‌ ಶುಲ್ಕ ಪಡೆಯಬಾರದು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ ಎಂದೂ ಶಾಸಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.