ಉಡುಪಿ: ಉಡುಪಿ ತಾಲ್ಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 17 ರಂದು ಎಂ.ಎಲ್. ಸಾಮಗ ಅವರ ಅಧ್ಯಕ್ಷತೆಯಲ್ಲಿ ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ ಎಂದು ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಅಂದು ಬೆಳಿಗ್ಗೆ 8.15 ರಿಂದ ರಾತ್ರಿ 8.15 ರವರೆಗೆ ಕಾರ್ಯಕ್ರಮ ನಡೆಯಲಿದೆ. ಮಲ್ಪೆಯ ಸಿಟಿಜನ್ ಸರ್ಕಲ್‌ನಿಂದ ಮೆರವಣಿಗೆಯೊಂದಿಗೆ ಸಮ್ಮೇಳನಾಧ್ಯಕ್ಷ ಎಂ.ಎಲ್. ಸಾಮಗ ಅವರನ್ನು ಸ್ವಾಗತಿಸಲಾಗುವುದು ಎಂದು ವಿವರಿಸಿದರು.
ಬೆಳಿಗ್ಗೆ 9.25 ಕ್ಕೆ ಧ್ವಜಾರೋಹಣ ಹಾಗೂ ಪರಿಷತ್ ಧ್ವಜಾರೋಹಣ ನಡೆಯಲಿದೆ. 9.30 ಕ್ಕೆ ನೃತ್ಯನಿಕೇತನ ಕೊಡವೂರು ಅವರಿಂದ ನೃತ್ಯ ಸಿಂಚನ ನಡೆಯಲಿದೆ. 9.50ಕ್ಕೆ ದಿ.ಕುರಾಡಿ ಸೀತಾರಾಮ ಅಡಿಗ ನೆನಪಿನ ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಸಾಹಿತಿ ಗಣನಾಥ್ ಎಕ್ಕಾರ್ ನೆರವೇರಿಸಲಿದ್ದಾರೆ. ನಂತರ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು ಕನ್ನಡದ ವಿಮರ್ಶಕ ಎಸ್. ಆರ್. ವಿಜಯಶಂಕರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಎಚ್. ಡುಂಡಿರಾಜ್ ಉಪಸ್ಥಿತರಿರುವರು. ಸಾಧಕರಾದ ಜಯನ್ ಮಲ್ಪೆ , ಸಿ. ಎಸ್. ರಾವ್, ವಿ.ಜಿ. ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ಹರಿಪ್ರಸಾದ್ ರೈ, ವಾದಿರಾಜ್ ಭಟ್, ವೆಂಕಟೇಶ್ ಪೈ, ವಿನಯ್ ಆಚಾರ್ಯ ಮುಂಡ್ಕೂರ್ ಇವರನ್ನು ಅಭಿನಂದಿಸಲಾಗುವುದು ಮತ್ತು ಇದೇ ಸಂದರ್ಭದಲ್ಲಿ ನಾಲ್ಕು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ ಎಂದರು.
ಯಕ್ಷ ಕವಿಗೋಷ್ಠಿ,ಯಕ್ಷಗಾನ, ದೃಶ್ಯ ಭಾಷೆ ಸಂಸ್ಕೃತಿ ಇದರ ಕುರಿತಾದ ವಿಚಾರಗೋಷ್ಠಿ ,ಸಮ್ಮೇಳನ ಅಧ್ಯಕ್ಷ ರೊಂದಿಗೆ ಮಾತುಕತೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸಮಾರೋಪ ಭಾಷಣವನ್ನು ಸಾಹಿತಿ ನಿಕೇತನ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಯಕ್ಷ ರಂಗಾಯಣ ಕಾರ್ಕಳ ಅವರಿಂದ ಕುಮಾರವ್ಯಾಸ ಭಾರತದ ವಿರಾಟ ಪರ್ವದಿಂದ ಆಯ್ದ ಭಾಗ ‘ಆರೊಡನೆ ಕಾದುವೆನು’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ತಾಲ್ಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ರಂಜಿನಿ ವಸಂತ್, ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಕೊಡವೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.