
ಉಡುಪಿ: ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದರೂ ಪ್ರವಾಸಿಗರ ಸುರಕ್ಷತೆಗೆ ಸಂಬಂಧಪಟ್ಟವರು ಆದ್ಯತೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ.
ಸಮುದ್ರದಲ್ಲಿ, ಹಿನ್ನೀರು ಪ್ರದೇಶಗಳಲ್ಲಿ ನೀರಿನಲ್ಲಿ ಮುಳುಗಿ ಪ್ರವಾಸಿಗರು ಮೃತರಾಗುವ ಘಟನೆಗಳು ನಡೆದಾಗ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಚರ್ಚೆಗಳು ಮುನ್ನಲೆಗೆ ಬರುತ್ತವೆ. ಬಳಿಕ ಅದು ತಣ್ಣಗಾಗುತ್ತದೆ.
ಕೆಲ ದಿನಗಳ ಹಿಂದೆ ಕೋಡಿಬೇಂಗ್ರೆ ಅಳಿವೆ ಬಾಗಿಲಿನಲ್ಲಿ ಪ್ರವಾಸಿಗರ ದೋಣಿಯೊಂದು ಮಗುಚಿ ಮೂವರು ಮೃತಪಟ್ಟಿದ್ದರು. ಪ್ರವಾಸಿಗರನ್ನು ಕರೆದೊಯ್ದಿದ್ದ ದೋಣಿಯನ್ನು ನೋಂದಣಿ ಮಾಡಿಸಿಲ್ಲ ಎಂಬ ವಿಚಾರ ಅನಂತರ ತಿಳಿದು ಬಂದಿದೆ. ಕೂಡಲೇ ಎಚ್ಚೆತ್ತ ಜಿಲ್ಲಾಡಳಿತ, 45 ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಿಂದ ದೋಣಿಗಳನ್ನು ನೋಂದಣಿ ಮಾಡಬೇಕೆಂದು ಆದೇಶಿಸಿದೆ. ನಿರ್ಲಕ್ಷ್ಯ ಆರೋಪದಲ್ಲಿ ದೋಣಿ ಚಾಲಕರನ್ನೂ ಪೊಲೀಸರು ಬಂಧಿಸಿದ್ದರು.
ಜಿಲ್ಲೆಯ ವಿವಿಧೆಡೆ ನೋಂದಣಿಯಾಗದ ನೂರಾರು ದೋಣಿಗಳು ಪ್ರವಾಸಿಗರನ್ನು ಜಲವಿಹಾರಕ್ಕೆ ಕೊಂಡೊಯ್ಯುತ್ತಿವೆ. ಇಂತಹ ದೋಣಿಗಳಲ್ಲಿ ಯಾವುದೇ ಸುರಕ್ಷತಾ ಮಾನದಂಡಗಳನ್ನೂ ಪಾಲಿಸುವುದಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ.
ಕೋಡಿಬೇಂಗ್ರೆಯಲ್ಲಿ ನಡೆದ ದೋಣಿ ದುರಂತದಲ್ಲಿ ಪ್ರವಾಸಿಗರ ಪ್ರಾಣಾಪಾಯವಾಗಲು ಲೈಫ್ ಜಾಕೆಟ್ ಧರಿಸದಿರುವುದೇ ಕಾರಣ ಎಂದೂ ಸ್ಥಳೀಯರು ಹೇಳಿದ್ದಾರೆ. ಪ್ರವಾಸಿಗರನ್ನು ಕರೆಯೊಯ್ಯುವ ದೋಣಿಯವರು ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸುವಂತೆ ಪ್ರವಾಸಿಗರಿಗೆ ಸೂಚಿಸುವುದಿಲ್ಲ ಎಂದೂ ಜನರು ದೂರುತ್ತಾರೆ.
ಹೊಳೆಗಳಲ್ಲಿ ಮೀನುಗಾರಿಕೆಗೆ ಬಳಸುವ ಸಣ್ಣ ದೋಣಿಗಳಲ್ಲೂ ಅದರ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರವಾಸಿಗರನ್ನು ತುಂಬಿಕೊಂಡು ಹೋಗಲಾಗುತ್ತದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಇನ್ನು ಬೀಚ್‌ಗಳಲ್ಲಿ ಸಮುದ್ರಕ್ಕಿಳಿಯುವ ಪ್ರವಾಸಿಗರು ಹೆಚ್ಚು ಆಳದವರೆಗೆ ಇಳಿದರೂ ಯಾರೂ ತಡೆಯುವುದಿಲ್ಲ ಎಂದೂ ಸಾರ್ವಜನಿಕರು ತಿಳಿಸಿದ್ದಾರೆ.
ಜಿಲ್ಲೆಯ ವಿವಿಧೆಡೆ ಹಿನ್ನೀರು ಪ್ರದೇಶ, ನದಿಗಳಲ್ಲೂ ದೋಣಿ, ತೆಪ್ಪ ವಿಹಾರದ ಸೌಲಭ್ಯಗಳಿದ್ದು, ಅಲ್ಲಿಗೂ ಬಹಳಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಪ್ರವಾಸೋದ್ಯಮ ಇಲಾಖೆಯಿಂದ ನೇಮಕವಾಗುವ ಲೈಫ್ ಗಾರ್ಡ್ ಸಿಬ್ಬಂದಿ ಕೇವಲ ಬೀಚ್‌ಗಳಲ್ಲಷ್ಟೇ ಕಾರ್ಯ ನಿರ್ವಹಿಸುತ್ತಾರೆ. ನದಿ, ಹಿನ್ನೀರು ಪ್ರದೇಶದಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಗಮನ ಹರಿಸುವವರೇ ಇಲ್ಲ ಎನ್ನುತ್ತಾರೆ ಸಾರ್ವಜನಿಕರು.
ಕೋಡಿಬೇಂಗ್ರೆ ಅಳಿವೆಬಾಗಿಲಿನಲ್ಲಿ ದುರಂತ ಸಂಭವಿಸಿದ ಬಳಿಕವೂ ಬೋಟ್‌ನವರು ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ಮಲ್ಪೆ ಬೀಚ್‌ನಲ್ಲೂ ಸಮುದ್ರದಲ್ಲಿ ಸಣ್ಣಬೋಟ್‌ಗಳಲ್ಲಿ ವಿಹಾರ ನಡೆಸುವವರು ಲೈಫ್ ಜಾಕೆಟ್‌ಗಳನ್ನು ಧರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಲ್ಪೆ ಬೀಚ್‌ಗೆ ಬರುವ ಕೆಲವು ಪ್ರವಾಸಿಗರು ಸಮುದ್ರದ ಆಳದವರೆಗೂ ಹೋಗುತ್ತಾರೆ. ಅವರನ್ನೂ ಯಾರು ತಡೆಯುವ ಕೆಲಸ ಮಾಡುತ್ತಿಲ್ಲ ಎಂದೂ ದೂರಿದ್ದಾರೆ.
ಎಲ್ಲಾ ದೋಣಿಗಳು ಮೀನುಗಾರಿಕಾ ಇಲಾಖೆಯಲ್ಲಿ ನೋಂದಣಿಯಾಗಬೇಕು. ಪ್ರವಾಸಿಗರನ್ನು ಕರೆದೊಯ್ಯುವ ಉದ್ದೇಶದ ದೋಣಿಗಳು ಪ್ರವಾಸೋದ್ಯಮ ಇಲಾಖೆಯಲ್ಲೂ ನೋಂದಣಿ ಮಾಡಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ. ಸೂಚಿಸಿದ್ದಾರೆ. ‘ಕುಂದಾಪುರದಲ್ಲಿ ದೋಣಿ ಮಾಲೀಕರ ಜೊತೆ ಸಭೆ ನಡೆಸಿ ಪ್ರವಾಸಿಗರಿಗೆ ಕಡ್ಡಾಯವಾಗಿ ಲೈಫ್ ಜಾಕೆಟ್ ಕೊಡುವಂತೆ ಜಾಗೃತಿ ಮೂಡಿಸಿದ್ದೇವೆ. ಕರಾವಳಿ ಕಾವಲು ಪೊಲೀಸ್‌ನವರೂ ನೋಂದಣಿಯಾಗದ ದೋಣಿಗಳ ಬಗ್ಗೆ ನಿಗಾ ವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.
ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳೆಸಬೇಕೆಂಬ ಮಹಾದಾಸೆ ಸ್ಥಳೀಯರಲ್ಲೂ ಇದೆ. ಸರ್ಕಾರದ ಮುಂದೆ ಕೂಡ ಬೇಡಿಕೆಗಳನ್ನು ಮಂಡಿಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರವಾಗಲಿ ಜಿಲ್ಲಾಡಳಿತವಾಗಲಿ ಪ್ರವಾಸಿಗರ ಜೀವರಕ್ಷಣೆ ಬಗ್ಗೆ ಹೆಚ್ಚು ಗಮನಹರಿಸದೆ ಇರುವುದು ಇತ್ತೀಚಿನ ಹಲವು ಪ್ರಕರಣಗಳಲ್ಲಿ ಕಂಡುಬಂದಿದೆ ಎಂದು ನಿವೃತ್ತ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಹೊರಗಿನಿಂದ ಬರುವ ಪ್ರವಾಸಿಗರಿಗೆ ಸಮರ್ಪಕವಾಗಿ ಮಾಹಿತಿ ನೀಡಿ ಎಚ್ಚರಿಸುವ ಮಾರ್ಗದರ್ಶಕರು ಇಲ್ಲದೆ ಇರುವುದರಿಂದಾಗಿ ಇಂತಹ ಘಟನೆಗಳು ಸಂಭವಿಸಲು ಕಾರಣವಾಗಿದೆ. ಜಿಲ್ಲಾಡಳಿತದ ಒಪ್ಪಿಗೆ ಪತ್ರವಿಲ್ಲದೆ ಅನಧಿಕೃತವಾಗಿ ಹೇೂಂ ಸ್ಟೇ ಜೊತೆಗೆ ಸಮುದ್ರ ಕಿನಾರೆಯಲ್ಲಿ ಸಣ್ಣಪುಟ್ಟ ಬೇೂಟ್‌ಗಳನ್ನು ಇಟ್ಟುಕೊಂಡು ಪ್ರವಾಸಿಗರನ್ನು ಸೆಳೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು. ದೋಣಿ ದುರಂತವು ಕರಾವಳಿಯ ಪ್ರವಾಸೋದ್ಯಮದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಬಹುದು. ಹಾಗಾಗಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಇಂತಹ ಘಟನೆಗಳು ನಡೆಯದಂತೆ ಹೆಚ್ಚಿನ ಗಮನಹರಿಸಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.
ನಾವು ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ಪಡೆದೇ ಬೋಟಿಂಗ್ ನಡೆಸುತ್ತಿದ್ದೇವೆ. ಮಕ್ಕಳು ಸೇರಿದಂತೆ ಎಲ್ಲರಿಗೂ ಕಡ್ಡಾಯವಾಗಿ ಲೈಫ್ ಜಾಕೆಟ್ ಕೊಟ್ಟು ಅವರು ಅದನ್ನು ಧರಿಸಿದ ನಂತರವೇ ಬೋಟ್‌ನಲ್ಲಿ ಕರೆದೊಯ್ಯುತ್ತೇವೆ ಮತ್ತು ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತೇವೆ. ಆದರೆ ಕೆಲವರು ಪರವಾನಗಿ ಪಡೆಯದೆ ಪ್ರವಾಸಿಗರನ್ನು ಬೋಟಿಂಗ್‌ಗೆ ಕರೆದೊಯ್ಯುತ್ತಿದ್ದು ಅದರಿಂದ ನಮಗೂ ಕೆಟ್ಟ ಹೆಸರು ಬರುತ್ತಿದೆ ಎನ್ನುತ್ತಾರೆ ಉಪ್ಪೂರಿನ ಪ್ರವಾಸಿ ಬೋಟ್ ಮಾಲೀಕ ಶೇಖರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.