ADVERTISEMENT

ಉಡುಪಿ | ವಾಹನ ದಟ್ಟಣೆ: ಬೇಕಿದೆ ಶಾಶ್ವತ ಪರಿಹಾರ

ನವೀನ್‌ಕುಮಾರ್‌ ಜಿ.
Published 30 ಡಿಸೆಂಬರ್ 2024, 6:49 IST
Last Updated 30 ಡಿಸೆಂಬರ್ 2024, 6:49 IST
ಡಾ.ಅರುಣ್‌ ಕೆ.
ಡಾ.ಅರುಣ್‌ ಕೆ.   

ಉಡುಪಿ: ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ, ವಾಹನಗಳ ಸಂಖ್ಯೆ ಮಿತಿ ಮೀರುತ್ತಿದ್ದರೂ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕೆಲವು ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆಯಿಂದ ನಿತ್ಯ ಜನರು ಬವಣೆ ಪಡುವಂತಾಗಿದೆ.

ಪ್ರತಿವರ್ಷ ಕ್ರಿಸ್‌ಮಸ್‌ ರಜೆ ಬಂತೆಂದರೆ ವಾಹನ ದಟ್ಟಣೆ ಸಮಸ್ಯೆ ತಾರಕಕ್ಕೇರುತ್ತದೆ. ಆಗ ಕೆಲ ದಿನಗಳ ಮಟ್ಟಿಗೆ ಬದಲಿ ಸಂಚಾರ ಮಾರ್ಗವನ್ನು ಸೂಚಿಸಲಾಗುತ್ತದೆ. ಆದರೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎಂಬುದು ನಗರದ ಜನರ ಅಳಲು.

ಕಲ್ಸಂಕ ಜಂಕ್ಷನ್‌, ಕರಾವಳಿ ಬೈಪಾಸ್‌, ಅಂಬಾಗಿಲು, ಕಿನ್ನಿಮುಲ್ಕಿ, ಸಂತೆಕಟ್ಟೆ ಮೊದಲಾದೆಡೆ ವಾರಾಂತ್ಯಗಳಲ್ಲಿ ಹೆಚ್ಚು ವಾಹನ ದಟ್ಟಣೆ ಕಂಡು ಬರುತ್ತದೆ. ಅದರಲ್ಲೂ ಕಲ್ಸಂಕ ಜಂಕ್ಷನ್‌ನಲ್ಲಿ ಜನರು ವಾಹನ ದಟ್ಟಣೆಯಿಂದ ನಿತ್ಯ ಗೋಳು ಅನುಭವಿಸಬೇಕಾಗಿದೆ. ಕಲ್ಸಂಕ ಜಂಕ್ಷನ್‌ನಲ್ಲಿ ಸಿಗ್ನಲ್‌ ದೀಪಗಳಿದ್ದರೂ ಅವುಗಳು ಕಾರ್ಯನಿರ್ವಹಿಸುತ್ತಿಲ್ಲ. ಜೊತೆಗೆ ಸಿಗ್ನಲ್‌ ದೀಪಗಳಿಗಾಗಿ ಬೃಹದಾಕಾರದ ಕಂಬಗಳನ್ನು ಅಳವಡಿಸಿದ್ದು, ಅವುಗಳು ಜಾಹೀರಾತು ಫಲಕ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿವೆ.

ADVERTISEMENT

ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶ್ರೀಕೃಷ್ಣ ಮಠಕ್ಕೆ ದಿನನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಹೀಗೆ ಬರುವ ಭಕ್ತರ ವಾಹನಗಳು ಕಲ್ಸಂಕ ಜಂಕ್ಷನ್‌ನಲ್ಲಿ ತಿರುವು ಪಡೆದು ತೆರಳಬೇಕಾಗಿದೆ. ಈ ಕಾರಣಕ್ಕೆ ಇಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ.

ಕಲ್ಸಂಕ ಜಂಕ್ಷನ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲದೆ ಇರುವುದು ಕೂಡ ಹೆಚ್ಚಿನ ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಜನರು. ಅಲ್ಲಿ ಪೊಲೀಸರು ಕಾರ್ಯ ನಿರ್ವಹಿಸಿದರೂ ವಾಹನ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.

ಇದೀಗ ವರ್ಷಾಂತ್ಯ ಸಂದರ್ಭದಲ್ಲಿ ನಗರಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ಮಾರ್ಗ ಬದಲಾವಣೆ ಮಾಡಲಾಗಿದೆ. ಅದರಿಂದ ಕಲ್ಸಂಕದಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ ಬೇರೆಡೆಗೆ ಸ್ಥಳಾಂತರಗೊಂಡಿದೆಯೇ ವಿನಾಃ ಸಮಸ್ಯೆಗೆ ಪರಿಹಾರ ದೊರಕಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಕಕಾಲಕ್ಕೆ ಕಾಮಗಾರಿಗಳು ನಡೆಯುತ್ತಿರುವುದರಿಂದಲೂ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಸಂತೆಕಟ್ಟೆಯಲ್ಲಿ ಓವರ್‌ಪಾಸ್‌ ಕಾಮಗಾರಿ ಇನ್ನೂ ನಡೆಯುತ್ತಿರುವುದರಿಂದ ಅಲ್ಲೂ ಆಗಾಗ ವಾಹನ ದಟ್ಟಣೆ ಉಂಟಾಗುತ್ತಿದೆ. ಜೊತೆಗೆ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ಇನ್ನಷ್ಟು ಅಧ್ವಾನವಾಗಿದೆ.

ಆದಿ ಉಡುಪಿಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಮಲ್ಪೆ ಕಡೆಗೆ ತೆರಳುವ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿರುವ ನಡುವೆಯೇ ಅಂಬಲಪಾಡಿಯಲ್ಲೂ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗಿದೆ. ಈ ಕಾರಣಕ್ಕೆ ಮಲ್ಪೆ ಕಡೆಯಿಂದ ಮೀನು ಹೇರಿಕೊಂಡು ಬರುವ ಲಾರಿಗಳು, ಪ್ರವಾಸಿಗರ ವಾಹನಗಳಿಂದಾಗಿ ವಾಹನ ದಟ್ಟಣೆ ಉಂಟಾಗುತ್ತಿದೆ.

ಅಂಬಲಪಾಡಿಯಲ್ಲಿ ಎಲ್ಲಾ ವಾಹನಗಳು ಸರ್ವಿಸ್‌ ರಸ್ತೆಯಲ್ಲೇ ಸಾಗಿ ಕರಾವಳಿ ಬೈಪಾಸ್‌ಗೆ ಬರಬೇಕಾಗಿದೆ. ಈ ಕಾರಣಕ್ಕೆ ಕರಾವಳಿ ಬೈಪಾಸ್‌ನಲ್ಲಿ ವಾಹನಗಳು ಉದ್ದನೆಯ ಸಾಲು ಪ್ರತಿ ದಿನ ಕಂಡು ಬರುತ್ತಿದೆ.

ನಗರದಲ್ಲಿ ಕಂಡುಬರುವ ವಾಹನ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಜನೆ ರೂಪಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ಉಡುಪಿಯ ಕಲ್ಸಂಕ ಸಮೀಪ ವಾಹನಗಳ ಸಾಲು
ಕಲ್ಸಂಕ ಜಂಕ್ಷನ್‌ನಲ್ಲಿ ಸ್ಥಾಪಿಸಿರುವ ಟ್ರಾಫಿಕ್‌ ಸಿಗ್ನಲ್‌ ದೀಪಗಳು ಕೆಟ್ಟುಹೋಗಿವೆ. ಅವುಗಳನ್ನು ದುರಸ್ತಿಗೊಳಿಸುವಂತೆ ನಾವು ನಗರಸಭೆಗೆ ಮನವಿ ಮಾಡಿದ್ದೇವೆ
ಡಾ.ಅರುಣ್‌ ಕೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಕಲ್ಸಂಕದಲ್ಲಿ ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಅದು ನಿರ್ಮಾಣವಾದರೆ ವಾಹನ ದಟ್ಟಣೆ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗಬಹುದು
ಪ್ರಭಾಕರ ಪೂಜಾರಿ ನಗರಸಭೆ ಅಧ್ಯಕ್ಷ
ದಿನನಿತ್ಯ ವಾಹನ ದಟ್ಟಣೆಯಿಂದಾಗಿ ಬಾಡಿಗೆ ಮಾಡುವುದೇ ದುಸ್ತರವಾಗಿದೆ. ಈಗ ಅಂಬಲಪಾಡಿಯಲ್ಲೂ ಕಾಮಗಾರಿ ಆರಂಭಿಸಿರುವುದರಿಂದ ಸುತ್ತಿ ಬಳಸಿ ಹೋಗಬೇಕಾಗಿದೆ
ವಿವೇಕ್‌ ರಿಕ್ಷಾ ಚಾಲಕ
ಏಕ ಕಾಲಕ್ಕೆ ರಸ್ತೆ ಮೇಲ್ಸೇತುವೆ ಕಾಮಗಾರಿಗಳನ್ನು ಆರಂಭಿಸಿರುವುದರಿಂದ ಸಮಸ್ಯೆಯಾಗಿದೆ. ಈಗಾಗಲೇ ಆರಂಭಿಸಿರುವ ಕಾಮಗಾರಿಗಳು ಕುಂಟುತ್ತಾ ಸಾಗಿದೆ. ಜನರ ಬವಣೆ ಹೇಳತೀರದು
ಸುಬ್ರಹ್ಮಣ್ಯ ಕಿದಿಯೂರು ನಿವಾಸಿ

‘ವಾರದೊಳಗೆ ಸಭೆ’

ಕಲ್ಸಂಕದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದೊಡ್ಡದಾದ ವೃತ್ತ ನಿರ್ಮಿಸಲು ಯೋಜನಾ ವರದಿ ತಯಾರಿಸಲಾಗಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ಕರಾವಳಿ ಜಂಕ್ಷನ್‌ನಿಂದ ಕಲ್ಸಂಕ ಹಾದು ಹೋಗುವಂತೆ ಎಂಜಿಎಂ ಕಾಲೇಜಿನವರೆಗೆ ಫ್ಲೈ ಓವರ್ ನಿರ್ಮಿಸುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾರದೊಳಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಪೊಲೀಸರ ಸಭೆ ಕರೆದು ಯಾವುದು ಸೂಕ್ತ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು. ಫ್ಲೈಓವರ್‌ ಸೂಕ್ತ ಎಂದಾದರೆ ಯೋಜನಾ ವರದಿ ತಯಾರಿಸುವಂತೆ ಸೂಚನೆ ನೀಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

‘ರಸ್ತೆಯಲ್ಲಿ ವಾಹನ ನಿಲುಗಡೆಗೆ ಕಡಿವಾಣ ಹಾಕಿ’

ಕಲ್ಸಂಕದಿಂದ ಸಿಟಿ ಬಸ್‌ ನಿಲ್ದಾಣದವರೆಗೆ ಎರಡು ಬದಿ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಿದರೆ ವಾಹನ ದಟ್ಟಣೆ ಸಮಸ್ಯೆ ಅರ್ಧಕ್ಕರ್ಧ ಪರಿಹಾರವಾಗಬಹುದು. ಭವಿಷ್ಯದ ದೃಷ್ಟಿಯಿಂದ ಕಲ್ಸಂಕದಲ್ಲಿ ಮೇಲ್ಸೇತುವೆ ನಿರ್ಮಿಸುವುದು ಹೆಚ್ಚು ಸೂಕ್ತ. ಸಂಜೆ ಹೊತ್ತಿನಲ್ಲಿ ಬೀದಿ ಬದಿ ವ್ಯಾಪಾರಿಗಳು ಕೂಡ ರಸ್ತೆಯಲ್ಲೇ ಗಾಡಿಗಳನ್ನು ನಿಲ್ಲಿಸುವುದರಿಂದ ಕೂಡ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬನ್ನಂಜೆಯಿಂದ ಸಿಟಿ ಬಸ್‌ ನಿಲ್ದಾಣದವರೆಗಿನ ರಸ್ತೆಯಲ್ಲಿ ನಿಲುಗಡೆ ಇಲ್ಲದಿದ್ದರೂ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಕೂಡ ಸಮಸ್ಯೆಯಾಗುತ್ತಿದ್ದು ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.