ADVERTISEMENT

ಉಡುಪಿ| ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತದಾನ ಅಗತ್ಯ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:43 IST
Last Updated 26 ಜನವರಿ 2026, 7:43 IST
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು
ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು   

ಉಡುಪಿ: ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕರ ಹಕ್ಕು ಮತ್ತು ಕರ್ತವ್ಯ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಭಾನುವಾರ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾರದರ್ಶಕ ಮತದಾನ ಪ್ರಕ್ರಿಯೆಗಾಗಿ ಚುನಾವಣಾ ಆಯೋಗವು ನಾಗರಿಕ ಸ್ನೇಹಿ ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಮತದಾನವು ಐಚ್ಛಿಕವಾಗಿದ್ದು, ಹೆಚ್ಚು ಜನರು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್ ಮಾತನಾಡಿ, ಸ್ವಾತಂತ್ರ್ಯ ಸೇನಾನಿಗಳ ಬಲಿದಾನದಿಂದ ದೇಶವು ಗುಲಾಮಗಿರಿಯಿಂದ ಮುಕ್ತವಾಯಿತು. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವವನ್ನು ಸಂವಿಧಾನದ ಮೂಲಕ ಪಡೆದುಕೊಂಡು ಮತದಾನದ ಅಧಿಕಾರವನ್ನು ಗಳಿಸಿದ್ದೇವೆ ಎಂದು ಹೇಳಿದರು.

ಜನ ಪ್ರತಿನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡಲು ನಾವು ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕು. ನಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡಬಾರದು ಎಂದರು.

ರಾಜು ಪೂಜಾರಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿವಪ್ರಸಾದ್ ಶೆಟ್ಟಿ ಅವರು ಎಸ್.ಐ.ಆರ್ ಕುರಿತು ಮಾಹಿತಿ ನೀಡಿದರು.

ಉತ್ತಮವಾಗಿ ಕಾರ್ಯ ನಿರ್ವಹಿಸಿದ ಐವರು ಬಿಎಲ್‌ಒಗಳನ್ನು ಹಾಗೂ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯವನ್ನು ನಿರ್ವಹಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಕೆ.ಎಸ್.ಜ್ಯೋತಿಶ್ರೀ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯ್ಕ ಉಪಸ್ಥಿತರಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸ್ವಾಗತಿಸಿದರು. ಗಂಗಾಧರ್ ಕೆ. ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.