ಹೆಬ್ರಿ: ‘ಬೇಸಿಗೆ ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಿನನಿತ್ಯ ತಂದೆ–ತಾಯಿ, ಗುರು ಹಿರಿಯರನ್ನು ಗೌರವಿಸುವುದು, ಪ್ರಕೃತಿಗೆ ಗೌರವ ಕೊಡುವ ಪರಿಪಾಠ ನಮ್ಮದಾದಾಗ ಬದುಕು ಸಾರ್ಥಕವಾಗುತ್ತದೆ’ ಎಂದು ಧಾರ್ಮಿಕ ಚಿಂತಕ ಪ್ರಕಾಶ್ ಮಲ್ಪೆ ಹೇಳಿದರು.
ಈಶಪ್ರಿಯತೀರ್ಥ ಶ್ರೀಪಾದರ ಸಂಕಲ್ಪದಂತೆ ಅದಮಾರು ಮಠದ ಶ್ರೀವಿಬುಧೇಶತೀರ್ಥ ಚಾರಿಟಬಲ್ ಟ್ರಸ್ಟ್ ಮೂಲಕ ಶಾಂತಿನಿಕೇತನದ ವಿದ್ಯಾರ್ಥಿಗಳಿಗೆ ನಡೆದ ಮೌಲ್ಯಯುತ ‘ಸಂಸ್ಕಾರ ಶಿಕ್ಷಣ ಬೇಸಿಗೆ ಶಿಬಿರದ’ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧಾರ್ಮಿಕ ಚಿಂತಕ ಓಂಪ್ರಕಾಶ್ ಭಟ್ ಮಾತನಾಡಿ, ‘ಜ್ಞಾನ, ಭಕ್ತಿಯಿಂದ ಭಾರತ ವಿಶ್ವಗುರುವಾಗಲು ಸಾಧ್ಯವಿದೆ. ರೈತರು, ಸೈನಿಕರು, ಪ್ರಕೃತಿ ಹಾಗೂ ಗೋವಿಗೆ ನಾವು ಯಾವಾಗಲೂ ಗೌರವ ಸೂಚಿಸಬೇಕು’ ಎಂದರು.
ಅದಮಾರು ಮಠದ ವತಿಯಿಂದ ಶಿಬಿರಾರ್ಥಿಗಳಿಗೆ ಪುಸ್ತಕ, ಸ್ವಾಮೀಜಿಯವರ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು. ಹೆತ್ತವರನ್ನು ಸನ್ಮಾನಿಸಲಾಯಿತು.
ಶಾಂತಿನಿಕೇತನ ವಿದ್ಯಾರ್ಥಿ ಘಟಕದ ಚೈತನ್ಯ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರದ ಗುರುಗಳಾದ ವಾಣಿ, ಲಲಿತ ಕೆ., ಮೋಹನ್ ರಾವ್, ಸುಕುಮಾರ್, ದೀಪ ಗೋವಿಂದ ರಾಜ್, ಕೆ. ಗುರುರಾಜ್ ಭಟ್, ರೂಪ ಒಂಪ್ರಕಾಶ್ ಭಟ್, ಒಂಪ್ರಕಾಶ್ ಭಟ್, ವ್ಯವಸ್ಥಾಪಕ ಗೋವಿಂದರಾಜು ಅವರಿಗೆ ಶಾಂತಿನಿಕೇತನದ ವತಿಯಿಂದ ಗೌರವಿಸಲಾಯಿತು. ಓಂಪ್ರಕಾಶ್ ಭಟ್ ಸ್ವಾಗತಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.