ADVERTISEMENT

ಬ್ರಹ್ಮಾವರ: ವಾಹನ ಸವಾರರ ಪರದಾಟ, ಪಾದಚಾರಿಗಳ ಸಂಕಟ

ಬ್ರಹ್ಮಾವರದ ಕೊಕ್ಕರ್ಣೆ ಕೆಳಪೇಟೆಯ ರಸ್ತೆಗಳಲ್ಲಿ ಪೈಪ್‌ ಅಳವಡಿ ಕಾಮಗಾರಿ: ಹೊಂಡಗಳದೇ ಕಾರುಬಾರು

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 14:14 IST
Last Updated 28 ಜುಲೈ 2023, 14:14 IST
ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆ ಕೆಳಪೇಟೆಯ ರಸ್ತೆಯ ಸ್ಥಿತಿ
ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆ ಕೆಳಪೇಟೆಯ ರಸ್ತೆಯ ಸ್ಥಿತಿ   

ಬ್ರಹ್ಮಾವರ: ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ತಾಲ್ಲೂಕಿನ ಕೊಕ್ಕರ್ಣೆ ಕೆಳಪೇಟೆಯ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸವಾರರು ಪರದಾಡುತ್ತ ಮುಂದೆ ಸಾಗಬೇಕಾದ ಪರಿಸ್ಥಿತಿ ಒಂದೆಡೆಯಾದರೆ ಪಾದಾಚಾರಿಗಳು ಕೆಸರು ನೀರಿನ ಅಭಿಷೇಕದ ನಡುವೆ ಸಾಗುವ ಪರಿಸ್ಥಿತಿ ಇನ್ನೊಂದೆಡೆ. ಇಂಥ ಸ್ಥಿತಿಯಿಂದಾಗಿ ಗ್ರಾಮದ ಜನರ ಆಕ್ರೋಶ ಹೆಚ್ಚಾಗಿದೆ.

ಮಂದಾರ್ತಿ, ಕಾಡೂರು ಕೊಕ್ಕರ್ಣೆ ಮಾರ್ಗವಾಗಿ ನಡೂರು ಸೇರಿದಂತೆ ನಾಲ್ಕೂರು, ಸಂತೆಕಟ್ಟೆ, ಹೆಬ್ರಿ, ಬ್ರಹ್ಮಾವರ ಸಂಪರ್ಕಿಸುವ ಪ್ರಮುಖ ರಸ್ತೆ ಇದು. ಸ್ಥಳೀಯರ ವಿರೋಧದ ನಡುವೆಯೂ ಇಲ್ಲಿ ವಾರಾಹಿ ಕುಡಿಯುವ ನೀರು ಸಾಗಿಸುವುದಕ್ಕಾಗಿ ಪೈಪ್‌ ಅಳವಡಿಸುವುದಕ್ಕಾಗಿ ರಸ್ತೆಯ ಬದಿಯನ್ನು ಅಗೆಯಲಾಗಿದೆ. ಅಸಮರ್ಪಕ ಕಾಮಗಾರಿಯಿಂದಾಗಿ ಇಲ್ಲಿ ಹೊಂಡ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ರಸ್ತೆ ಹಾಳಾದ ನಂತರ ಜನಪ್ರತಿನಿಧಿಗಳ ಸೂಚನೆಯ ಮೇರೆಗೆ ವಾರಾಹಿ ಕಾಮಗಾರಿಯ ಗುತ್ತಿಗೆದಾರರು ಹೊಂಡ ಮುಚ್ಚಲು ಕಾಂಕ್ರೀಟ್‌ ಮಿಕ್ಸ್‌, ಜಲ್ಲಿ ಮತ್ತು ಕಲ್ಲುಗಳನ್ನು ಹಾಕಿದ್ದಾರೆ. ಭಾರಿ ಮಳೆಗೆ ಜಲ್ಲಿ–ಕಲ್ಲು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ. ಚರಂಡಿ ವ್ಯವಸ್ಥೆಯೂ ಸರಿ ಇಲ್ಲದ ಕಾರಣ ಮಳೆನೀರು ರಸ್ತೆಯಲ್ಲೇ ಹರಿಯುತ್ತಿದೆ. ಕಿರಿದಾದ ರಸ್ತೆಯ ಬದಿಯಲ್ಲಿ ಕೆಲವರು ವಾಹನ ನಿಲ್ಲಿಸಿ ಹೋಗುವುದರಿಂದಾಗಿ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂದು ಜನರು ದೂರಿದ್ದಾರೆ.

ADVERTISEMENT

ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆ ದುರಸ್ತಿ ಬಗ್ಗೆ ಗಮನಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ  ವಾಹನ ಸವಾರರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.