ADVERTISEMENT

ಕಾಪು ಪುರಸಭೆ ಸಾಮಾನ್ಯ ಸಭೆ| ಎರಡು ದಿನಕ್ಕೊಮ್ಮೆ ನೀರು: ಸದಸ್ಯರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 2:08 IST
Last Updated 3 ಫೆಬ್ರುವರಿ 2026, 2:08 IST
ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು
ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು   

ಪಡುಬಿದ್ರಿ: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಪುರಸಭೆಯ ನಿರ್ಧಾರಕ್ಕೆ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಕುರ್ಕಾಲು ಅಣೆಕಟ್ಟೆಯಿಂದ ಪುರಸಭೆ ವ್ಯಾಪ್ತಿಗೆ ದಿನದ 24 ಗಂಟೆ ನೀರು ಪೂರೈಸುವ ಯೋಜನೆ ಅಸಮರ್ಪಕ ಅನುಷ್ಠಾನದಿಂದ ಬೇಸಿಗೆ ಆರಂಭದಲ್ಲಿಯೇ ಸಮಸ್ಯೆ ಎದುರಿಸುವಂತಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಈ ಹಿಂದೆ ಪೂರೈಸುತ್ತಿದ್ದ ಜಲಮೂಲಗಳ ನೀರು ಸರಬರಾಜು ಸಂಪರ್ಕವನ್ನು ಕಡಿತಗೊಳಿಸಿದ ಪರಿಣಾಮ ಜನ ನೀರಿಗೆ ಪರದಾಡುವಂತಾಗಿದೆ ಎಂದು ಸದಸ್ಯರು ದೂರಿದರು.

ನೀರಿನ ಹರಿಯುವಿಕೆ ವೇಗಗೊಳಿಸುವ ಸಲುವಾಗಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ನೀಲಕಂಠ ಮೇಸ್ತ ತಿಳಿಸಿದರು.

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿ ಬಳಕೆ ಇಲ್ಲದ 7 ತೆರೆದ ಬಾವಿ ಹಾಗೂ ಕೊಳವೆ ಬಾವಿಗಳ ನೀರಿನ ಮಾದರಿ ಪರೀಕ್ಷೆಗೆ ಪ್ರತಿ ತಿಂಗಳು ಹಣ ವೆಚ್ಚ ಮಾಡುವ ಬಗ್ಗೆ ಸದಸ್ಯ ಅನಿಲ್‌ಕುಮಾರ್ ಆಕ್ಷೇಪಿಸಿದರು. ಸಭೆ ನಿರ್ಣಯ ಕೈಗೊಂಡಲ್ಲಿ ನೀರಿನ ಮಾದರಿ ಪರೀಕ್ಷೆಯನ್ನು ಸ್ಥಗಿತಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಹಳೆ ಜಲಮೂಲಗಳ ಸಂಪರ್ಕ ಮರು ಜೋಡಣೆಗೆ ಯೋಜನೆ ರೂಪಿಸಿ ಅಗತ್ಯ ಅನುದಾನಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಮುಖ್ಯಾಧಿಕಾರಿ ಹೇಳಿದರು.

ಕಾಪು ಮಾರುಕಟ್ಟೆಯಲ್ಲಿ ನೀರಿನ ಸಮಸ್ಯೆಯಿದೆ. ಮೀನುಗಾರರು, ಕೋಳಿ ಅಂಗಡಿ, ಶೌಚಾಲಯ ನಿರ್ವಹಣೆಗೆ ಕಷ್ಟ ಎಂದು ಹೇಳುತ್ತಿದ್ದಾರೆ. ಎಲ್ಲರಿಗೂ ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ಅಮೀರುದ್ದೀನ್ ಹೇಳಿದರು. 

ಬಾಡಿಗೆ ಮನೆಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ. ಒಂದು ಡೋರ್ ನಂಬರ್‌ನಲ್ಲಿ 10–20 ಮನೆಗಳಿವೆ. ಕೆಲವು ಪರವಾನಗಿಯನ್ನೂ ಹೊಂದಿಲ್ಲ. ಇಲ್ಲಿ ಯಾರು ಬಂದು ಹೋಗುತ್ತಾರೆ ಎನ್ನುವುದೂ ತಿಳಿಯುತ್ತಿಲ್ಲ. ಈ ಬಗ್ಗೆ ಕಠಿಣ ಕ್ರಮ ಜಾರಿಯಾಗಬೇಕು ಎಂದು ಸದಸ್ಯರಾದ ಅನಿಲ್, ಕುಮಾರ್ ಮತ್ತು ಅಮೀರುದ್ದೀನ್ ಆಗ್ರಹಿಸಿದರು.

ಕಾಪುವಿನ ವಾರದ ಸಂತೆ ದಿನ ಗೂಡ್ಸ್ ವಾಹನಗಳನ್ನು ವ್ಯಾಪಾರಸ್ಥರು ರಾಷ್ಟ್ರೀಯ ಹೆದ್ದಾರಿ ಬಳಿಯ ಸರ್ವಿಸ್ ರಸ್ತೆಯಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಮುಂದೆ ಸಂತೆ ವೇಳೆ ಸುಂಕ ವಸೂಲಿ ಬಿಡ್‌ದಾರರೇ ಜವಾಬ್ದಾರಿ ವಹಿಸಿ ವಾಹನ ಸುಸ್ಥಿತಿಯಲ್ಲಿರಿಸಲು ಕ್ರಮ ವಹಿಸಬೇಕೆನ್ನುವ ನಿಬಂಧನೆಯೊಂದಿಗೆ ಟೆಂಡರ್ ಕರೆಯಲು ತೀರ್ಮಾನಿಸಲಾಯಿತು.

ಬಜೆಟ್ ಮಂಡಿಸುವಾಗ ಹೊಸ ರಸ್ತೆಗಳ ನಿರ್ಮಾಣಕ್ಕಿಂತಲೂ ಈಗಾಗಲೇ ಬಳಕೆಯಲ್ಲಿರುವ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆಯ ಬಗ್ಗೆ ಚರ್ಚೆ ನಡೆಸಬೇಕಿದೆ. ಅಧಿಕಾರಿಗಳು ಸದಸ್ಯರ ಭಾವನೆಗೆ ಸ್ಪಂದಿಸಿ, ಕಾಮಗಾರಿ ಪಟ್ಟಿ ರಚಿಸಬೇಕು. ಅಗತ್ಯ ಬಂದಲ್ಲಿ ಸ್ಥಳ ಸಮೀಕ್ಕೆ ನಡೆಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಲಹೆ ನೀಡಿದರು.

ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷೆ ಸರಿತಾ, ಸ್ಥಾಯಿ ಸಮಿತಿಯ ಅಧ್ಯಕ್ಷ ಕಿರಣ್ ಆಳ್ವ ಇದ್ದರು.

ಪುರಸಭೆ ವ್ಯಾಪ್ತಿಯಲ್ಲಿನ ನೀರು ಸರಬರಾಜು ಯೋಜನೆ ಸಂಬಂಧಿಸಿ ಇರುವ ಸಮಸ್ಯೆ ನಿವಾರಣೆ ಸಲುವಾಗಿ ಫೆ.9ರಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಸಭೆ ನಡೆಸಲು ನಿರ್ಧರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.