
ಉಡುಪಿ: ಜಿಲ್ಲೆಯಲ್ಲಿ ಬತ್ತದ ಎರಡನೇ ಬೆಳೆಗೆ ಬದಲಾಗಿ ತರಕಾರಿ ಮತ್ತು ಕಲ್ಲಂಗಡಿ ಹಣ್ಣು ಬೆಳೆಯುವವರ ಸಂಖ್ಯೆ ಅಧಿಕವಿದ್ದು, ಇದೀಗ ಕಲ್ಲಂಗಡಿ ಬೆಳೆಗೆ ಶಿಲೀಂಧ್ರ ರೋಗ ತೀವ್ರವಾಗಿ ಕಾಡುತ್ತಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಬೈಂದೂರು ಭಾಗದಲ್ಲಿ ಹೆಚ್ಚಾಗಿ ಕಲ್ಲಂಗಡಿ ಬೆಳೆಗೆ ಶಿಲೀಂಧ್ರ ರೋಗ ಬಾಧೆ ಉಂಟಾಗಿದ್ದು, ಈಗಾಗಲೇ ಕಟಾವಿಗೆ ಬಂದಿರುವ ಕಲ್ಲಂಗಡಿ ಬೆಳೆಗೆ ಕಂಟಕ ತರುತ್ತಿದೆ.
ಶಿಲೀಂಧ್ರ ಸೋಂಕಿನಿಂದಾಗಿ ಬಳ್ಳಿಗಳು ಒಣಗಿ ಹೋಗುತ್ತಿವೆ. ಅದರಿಂದ ಇಳುವರಿ ಕುಸಿತವಾಗುವುದರ ಜೊತೆಗೆ ಬಳ್ಳಿಯೇ ಸತ್ತು ಹೋಗುತ್ತಿದೆ ಎನ್ನುತ್ತಾರೆ ರೈತರು.
ಈ ಬಾರಿ ತರಕಾರಿ ಬೆಳೆಯಲ್ಲೂ ರೋಗ ಕಾಣಿಸಿಕೊಂಡಿದ್ದರೂ ಕಲ್ಲಂಗಡಿ ಬೆಳೆಗೆ ಅತೀ ಹೆಚ್ಚು ಬಾಧಿಸಿದೆ. ಇನ್ನೇನು ಕಟಾವಿಗೆ ಸಿದ್ಧವಾಗುತ್ತಿರುವ ಸಂದರ್ಭದಲ್ಲಿ ಹೊಲಗಳಲ್ಲಿ ಕಲ್ಲಂಗಡಿ ಬಳ್ಳಿಗಳೇ ಸತ್ತು ಹೋಗುತ್ತಿರುವುದರಿಂದ ನಷ್ಟ ಉಂಟಾಗಿದೆ ಎನ್ನುತ್ತಾರೆ ಕೃಷಿಕರು.
ಕೆಲವೇ ದಿನಗಳಲ್ಲಿ ಕಟಾವು ಆರಂಭವಾಗಲಿರುವುದರಿಂದ ಬಳ್ಳಿಗಳಿಗೆ ಔಷಧಿ ಸಿಂಪಡಿಸಿಲ್ಲ. ಈ ಬಾರಿ ಅತಿಯಾದ ಚಳಿಯ ವಾತಾವರಣವಿತ್ತು ಅದರಿಂದಲೂ ರೋಗ ಬಾಧೆ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ.
ಒಂದೊಂದು ಬಳ್ಳಿಗಳಲ್ಲಿ ಕಾಣಿಸಿಕೊಳ್ಳುವ ರೋಗವು ಶೀಘ್ರವಾಗಿ ಹೊಲವಿಡೀ ಹರಡುತ್ತಿದೆ. ಈ ರೋಗ ಬಾಧಿಸಿರುವುದರಿಂದ ಕಲ್ಲಂಗಡಿ ಹಣ್ಣುಗಳ ಬೆಳವಣಿಗೆಯೂ ಕುಂಠಿತವಾಗಿತ್ತಿದೆ ಎಂದು ತಿಳಿಸಿದ್ದಾರೆ.
‘ಈಗಾಗಲೇ ಕೆಲವೆಡೆ ಕಲ್ಲಂಗಡಿ ಕಟಾವು ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇಳುವರಿ ಭಾರೀ ಕುಸಿತವಾಗಿದೆ. ಬೈಂದೂರು ಭಾಗದಲ್ಲಿ ಹೆಚ್ಚಿನ ರೈತರಿಗೆ ನಷ್ಟ ಉಂಟಾಗಿದೆ. ಹೂಮಿಡಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ರೋಗ ತಗುಲಿರುವ ಕಾರಣ ಕಲ್ಲಂಗಡಿ ಹಣ್ಣು ಬೆಳವಣಿಗೆಯಾಗಿಲ್ಲ’ ಎನ್ನುತ್ತಾರೆ ನಾಗೂರಿನ ರೈತ ಸುಧಾ ಬಳೆಗಾರ್.
‘ಈ ಬಾರಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆಯೂ ಇದೆ, ಉತ್ತಮ ದರವೂ ಇದೆ. ಆದರೆ, ರೋಗದಿಂದಾಗಿ ಇಳುವರಿ ಕುಸಿತವಾಗಿ ರೈತರಿಗೆ ನಷ್ಟ ಉಂಟಾಗಿದೆ. ಬಳ್ಳಿಯಿಂದ ಕಾಯಿಗಳು ಉದುರಿ ಹೋಗಿವೆ. ಈ ಬಾರಿ ಕಪ್ಪು ಕಲ್ಲಂಗಡಿ ಕೆ.ಜಿಗೆ ₹16ರಿಂದ ₹17 ಇದೆ. ನಾಮಧಾರಿ ತಳಿಯ ಕಲ್ಲಂಗಡಿಗೆ ಕೆ.ಜಿಗೆ ₹14 ರಿಂದ ₹15 ಇದೆ’ ಎನ್ನುತ್ತಾರೆ ಅವರು.
‘ಕಲ್ಲಂಗಡಿ ಹಣ್ಣು ಕಟಾವಿಗೆ ಬರಲು 70 ದಿವಸ ಬೇಕು. ಆದರೆ, ಈ ಬಾರಿ ತಡವಾಗಿ ಹೂಮಿಡಿಯಾಗಿದ್ದರಿಂದ ಇನ್ನೂ ಹಲವೆಡೆ ಕಟಾವು ಆರಂಭವಾಗಿಲ್ಲ’ ಎಂದೂ ಅವರು ವಿವರಿಸಿದರು.
ಪ್ರತಿ ವರ್ಷ 1 ಎಕರೆ ಬೆಳೆಯಲ್ಲಿ 12 ಟನ್‌ವರೆಗೆ ಕಲ್ಲಂಗಡಿ ಹಣ್ಣು ಸಿಗುತ್ತಿತ್ತು. ಈ ಸಲ ಎಕರೆಗೆ 4ರಿಂದ 5 ಟನ್ ಅಷ್ಟೇ ಇಳುವರಿ ಬಂದಿದೆಸುಧಾ ಬಳೆಗಾರ್ ಕಲ್ಲಂಗಡಿ ಬೆಳೆಗಾರ
‘ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು’: ‘ಜಿಲ್ಲೆಯ ವಿವಿಧೆಡೆ ಕಲ್ಲಂಗಡಿ ಬೆಳೆಗೆ ಸೊರಗು ರೋಗ ಮತ್ತು ಅಂಟು ಕಾಂಡದ ರೋಗ ಬಾಧಿಸಿದೆ. ಹವಾಮಾನ ವೈಪರೀತ್ಯ ಬಳ್ಳಿಗಳಿಗೆ ನೀರಾವರಿ ನಿರ್ವಹಣೆ ಮಾಡುವುದರಲ್ಲೂ ಏರಿಳಿತ ಉಂಟಾದರೂ ಈ ರೋಗಗಳು ಬರುವ ಸಾಧ್ಯತೆ ಇದೆ’ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೀಟ ಶಾಸ್ತ್ರಜ್ಞ ರೇವಣ್ಣ ರೇವಣ್ಣನವರ್ ತಿಳಿಸಿದ್ದಾರೆ. ‘ಬಳ್ಳಿಗಳ ಬೇರಿನ ಜಾಗದಲ್ಲಿ ಅತಿಯಾದ ತೇವಾಂಶ ಇದ್ದರೆ ಶಿಲೀಂಧ್ರ ರೋಗಗಳು ಬೇಗ ಕಾಡುತ್ತವೆ. ಒಂದು ಬಳ್ಳಿಯಲ್ಲಿ ರೋಗ ಕಾಣಿಸಿಕೊಂಡರೆ ಸಸ್ಯ ಹೇನು ಮತ್ತು ಕೆಲವು ಕೀಟಗಳಿಂದಾಗಿ ಇಡೀ ಹೊಲದಲ್ಲಿರುವ ಬಳ್ಳಿಗಳಿಗೆ ಹರಡುತ್ತದೆ’ ಎಂದು ಅವರು ಹೇಳಿದ್ದಾರೆ. ‘ರೋಗ ಬಾಧೆಯ ಬಗ್ಗೆ ತೋಟಗಾರಿಕಾ ಇಲಾಖೆಯವರು ಮಾಹಿತಿ ನೀಡಿದ್ದಾರೆ. ತಜ್ಞರೊಂದಿಗೆ ಶೀಘ್ರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.