ADVERTISEMENT

ಶಾಂತಿ ಸಂದೇಶ ಸಾರುವ ಭಾರತ: ನ್ಯಾ.ಅಬ್ದುಲ್ ನಝೀರ್ ಪ್ರತಿಪಾದನೆ

ಶ್ರೀಕೃಷ್ಣ ಮಠದಲ್ಲಿ ನಡೆದ ವಿಶ್ವಶಾಂತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:46 IST
Last Updated 14 ಡಿಸೆಂಬರ್ 2025, 7:46 IST
ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಅವರನ್ನು ಪುತ್ತಿಗೆ ಶ್ರೀಗಳು ಸನ್ಮಾನಿಸಿದರು
ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಅವರನ್ನು ಪುತ್ತಿಗೆ ಶ್ರೀಗಳು ಸನ್ಮಾನಿಸಿದರು   

ಉಡುಪಿ: ‘ಭಾರತ ದೇಶವು ಸದಾ ಶಾಂತಿಯ ಸಂದೇಶವನ್ನು ಸಾರುತ್ತಿದೆ. ಶಾಂತಿ ಎಂದರೆ ಕೇವಲ ಸಂಘರ್ಷ ನಡೆಯದಿರುವುದಲ್ಲ, ಬದಲಾಗಿ ಪರಸ್ಪರ ಗೌರವ, ಸಹಕಾರವೂ ಇರಬೇಕಾಗುತ್ತದೆ’ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು.

ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವಶಾಂತಿ ಸಮಾವೇಶದಲ್ಲಿ ಅವರು ಮಾತನಾಡಿ, ಇಂದಿನ ಸಂಘರ್ಷಭರಿತ ಜಗತ್ತಿನಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ. ಪರಸ್ಪರ ಸಹಕಾರದಿಂದ ಮುನ್ನಡೆದರೆ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಮಧ್ವಾಚಾರ್ಯರ ಉಪದೇಶಗಳು ಮತ್ತು ಅಷ್ಟಮಠಗಳ ಪರಂಪರೆಗಳು ಒಟ್ಟಾಗಿ ಉಡುಪಿಯನ್ನು ಭಕ್ತಿ, ತತ್ತ್ವ ಚಿಂತನೆ ಮತ್ತು ಸಾಂಸ್ಕೃತಿಕ ಏಕತೆಯ ದೀಪಸ್ತಂಭವನ್ನಾಗಿ ರೂಪಿಸಿವೆ. ಭಗವದ್ಗೀತೆಯ ಸಂದೇಶವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಪುತ್ತಿಗೆ ಶ್ರೀಗಳ ಪ್ರಯತ್ನ ಅಪಾರ ಎಂದರು.

ADVERTISEMENT

ಸುಮಾರು ಎಂಟು ಶತಮಾನಗಳಿಗೂ ಅಧಿಕ ಕಾಲದಿಂದ ಈ ಪುಣ್ಯಭೂಮಿಯು ಆಧ್ಯಾತ್ಮಿಕ ಜ್ಞಾನ, ಸಾಂಸ್ಕೃತಿಕ ಸೌಹಾರ್ದತೆಯನ್ನು ಪಸರಿಸುತ್ತ ಬಂದಿದೆ. ಉಡುಪಿ ಕೇವಲ ಒಂದು ಪಟ್ಟಣವಲ್ಲ. ಇದು ಭಾರತದ ಆಧ್ಯಾತ್ಮಿಕ ದೃಷ್ಟಿಕೋನದ ಜೀವಂತ ಪರಂಪರೆಯಾಗಿದೆ ಎಂದು ಹೇಳಿದರು.

ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಶ್ರೀಪಾದರು, ಅಮೆರಿಕದ ವರ್ಲ್ಡ್‌ ರಿಲೀಜಿಯಸ್‌ ಫಾರ್‌ ಪೀಸ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಲಿಯಂ ಎಫ್‌. ವಿಂಡ್ಲೆ, ‘ಒನ್‌ ವರ್ಲ್ಡ್‌ ಒನ್‌ ಫ್ಯಾಮಿಲಿ’ ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಮಾತನಾಡಿದರು.

ಉಡುಪಿ ಶ್ರೀಕೃಷ್ಣ ದೇವಾಲಯದ ಸಾಂಸ್ಕೃತಿಕ ಸಿರಿ, ಕಲ್ಚರಲ್‌ ಹೆರಿಟೇಜ್‌ ಆಫ್‌ ಉಡುಪಿ ಶ್ರೀಕೃಷ್ಣಮಠ, ಸರ್ವಮೂಲ ಭಾವಪರಿಚಯ, ಗೀತಾಮೃತಸಾರ ಪುಸ್ತಕಗಳ ಲೋಕಾರ್ಪಣೆ ನಡೆಯಿತು.

ಶ್ರೀಸತ್ಯಸಾಯಿ ಲೋಕ ಸೇವಾ ಗುರುಕುಲಮ್ ಕುಲಾಧಿಪತಿ ಬಿ.ಎನ್. ನರಸಿಂಹ ಮೂರ್ತಿ, ಲೇಖಕರಾದ ಸುರೇಶ್ ಪುತ್ತಿಗೆ, ಕವಿತಾ ಪಾಲಿಮಾರ್, ಚೂಡಾಮಣಿ ನಂದಗೋಪಾಲ್, ದಿವ್ಯಾಶ್ರೀ ಮಂಜುನಾಥ್, ಅರುಣಾ ಕೆ.ಆರ್, ಗೋಮತಿ ನಾಥನ್, ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಭಾಗವಹಿಸಿದ್ದರು. ರೋಹಿತ್ ಚಕ್ರತೀರ್ಥ ನಿರೂಪಿಸಿದರು.

‘ಸಂಕುಚಿತ ಚಿಂತನೆ ಬೇಡ’

ಜಗತ್ತು ಇಂದು ಸಂಕುಚಿತ ಚಿಂತನೆಯ ಅಡಿಯಲ್ಲಿ ಸಾಗುತ್ತಿದೆ. ಸೀಮಾರಹಿತವಾದ ಚಿಂತನೆ ಅಡಿಯಲ್ಲಿ ಸಾಗಿದರೆ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದರು. ಜಗತ್ತು ಉಳಿಯಬೇಕಾದರೆ ಸಜ್ಜನರ ರಕ್ಷಣೆಯಾಗಬೇಕು ಮತ್ತು ದುರ್ಜನರಿಗೆ ಶಿಕ್ಷೆ ಆಗಬೇಕು ಎಂದು ಕೃಷ್ಣ ತನ್ನ ಸಂದೇಶದಲ್ಲಿ ಹೇಳಿದ್ದಾನೆ. ಇಂದು ಜಗತ್ತು ತಲ್ಲಣಗೊಂಡಿದೆ ಮತ್ತು ಅಶಾಂತಿಯಿಂದ ಸಾಗುತ್ತಿದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಸೌಹಾರ್ದತೆ ವಿಶ್ವಾಸ ಹಾಗೂ ವಿನಯತೆ ಅಗತ್ಯ. ವಿಶ್ವಶಾಂತಿಯ ಕಹಳೆ ಮೂಡಿಸಬೇಕೆಂಬ ಉದ್ದೇಶದಿಂದ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.