
ಉಡುಪಿ: ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ 68ನೇ ವಾರ್ಷಿಕೋತ್ಸವವು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳರ ಅಧ್ಯಕ್ಷತೆಯಲ್ಲಿ ಈಚೆಗೆ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಜರುಗಿತು.
ಕಡೆಕಾರು ಶ್ರೀನಿವಾಸ ಹೆಗ್ಡೆ ಅವರಿಗೆ ನಿಡಂಬೂರು ಬೀಡು ಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಯಕ್ಷಗಾನ ಮಂಡಳಿಗೆ ನೀಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಉದ್ಯಾವರ ಬೊಳ್ಜೆಯ ಶ್ರೀಬ್ರಹ್ಮಬೈದರ್ಕಳ ಯಕ್ಷಗಾನ ಕಲಾ ಮಂಡಳಿಗೆ ಪ್ರದಾನ ಮಾಡಲಾಯಿತು.
ಕಲಾವಿದ ಬೇಳಂಜೆ ಜಯಂತ ನಾಯ್ಕ ಅವರಿಗೆ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ, ಯಕ್ಷಗಾನ ಕಲಾವಿದ ಶಿವಪಾಲನ್ ಅವರಿಗೆ ಕಪ್ಪೆಟ್ಟು ಬಾಬು ಶೆಟ್ಟಿಗಾರ ಪ್ರಶಸ್ತಿ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಸ್ತ್ರೀ ವೇಷಧಾರಿ ಹಾರಾಡಿ ರಮೇಶ ಗಾಣಿಗ ಇವರಿಗೆ ನೀಡಿ ಗೌರವಿಸಲಾಯಿತು.
ನಿವೃತ್ತ ಶಿಕ್ಷಕ ಯು. ರಾಜಗೋಪಾಲ ಆಚಾರ್ಯ, ಉದ್ಯಮಿ ಪ್ರಸಾದ್‍ರಾಜ್ ಕಾಂಚನ್, ಹವ್ಯಾಸಿ ಯಕ್ಷಗಾನ ಕಲಾವಿದ ಸುಬ್ರಾಯ ಖಾಡಿಲ್ಕರ್ ಮುಖ್ಯ ಅತಿಥಿಗಳಾಗಿದ್ದರು.
ಮಂಡಳಿಯ ಅಧ್ಯಕ್ಷ ಅಜಿತ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎ. ಪ್ರವೀಣ ಉಪಾಧ್ಯ ಧನ್ಯವಾದ ಸಮರ್ಪಿಸಿದರು. ಬಳಿಕ ಮಂಡಳಿಯ ಬಾಲ ಕಲಾವಿದರಿಂದ ‘ದ್ರೌಪದಿ ಪ್ರತಾಪ’ ಮತ್ತು ಮಂಡಳಿಯ ಸದಸ್ಯರಿಂದ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.