
ಮಟಪಾಡಿ (ಬ್ರಹ್ಮಾವರ): ‘ಅಂದಿನ ಸಂಪ್ರದಾಯ, ಲಯಬದ್ಧವಾದ ಕುಣಿತ, ವೇಷಭೂಷಣ, ಎಲ್ಲವೂ ಇಂದಿನ ಯಕ್ಷಗಾನದಲ್ಲಿ ಮರೆಯಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಪೀಳಿಗೆಯದ್ದು’ ಎಂದು ಯಕ್ಷಗಾನ ವಿದ್ವಾಂಸ ಬಿರ್ತಿ ಬಾಲಕೃಷ್ಣ ಗಾಣಿಗ ಹೇಳಿದರು.
ಮಟಪಾಡಿ ದಿ.ಗುರು ವೀರಭದ್ರ ನಾಯಕ್ ಸ್ಮಾರಕ ರಂಗಮಂಟಪದಲ್ಲಿ ಶನಿವಾರ ಮಟಪಾಡಿಯ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿಯ ವಜ್ರ ಮಹೋತ್ಸವ ಪ್ರಯುಕ್ತ ನಡೆದ ಯಕ್ಷೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಸ್ತೆಗಳಿಲ್ಲದ ದಾರಿಯಲ್ಲಿ, ಲಾಟಿನ್ ದೀಪದೊಂದಿಗೆ ಸಂಚರಿಸಿ ತೊಡಗಿಕೊಂಡಿದ್ದ ತೋನ್ಸೆ ಕಾಂತಪ್ಪ ಮಾಸ್ತರರ ಕಾಲದ ಯಕ್ಷಗಾನಕ್ಕೂ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ಎರಡು ತಿಟ್ಟುಗಳ ಹಾರಾಡಿ ರಾಮ ಗಾಣಿಗರು, ಮಟಪಾಡಿ ವೀರಭದ್ರ ನಾಯಕರು ರಾಷ್ಟ್ರಪ್ರಶಸ್ತಿಯಿಂದ ಗೌರವಿತರಾದವರು. ಹೀಗೆ ಮಟಪಾಡಿ ಯಕ್ಷಗಾನಕ್ಕೆ ಪ್ರಸಿದ್ಧ ಎಂದರು.
ಜ್ಯೋತಿಷಿ ಸಾಮಗ ನರಸಿಂಹ ಆಚಾರ್ಯ ಮಟಪಾಡಿ ಮಾತನಾಡಿ, ಅಂದು ಹಿರಿಯ ಕಲಾವಿದರು ಹಾಕಿದ್ದ ಹೆಜ್ಜೆ ಮಟಪಾಡಿಯಲ್ಲಿ ಇಂದಿಗೂ ನಿರಂತರವಾಗಿ ಮುನ್ನಡೆಯುತ್ತಿದೆ. ವೀರಭದ್ರ ನಾಯಕರ ಪರಂಪರೆಯಲ್ಲಿ ಬಂದ ಬಹುತೇಕರು ಗುರುಗಳಾಗಿದ್ದಾರೆ. ಇದು ಸದಾ ಮುಂದುವರಿಯಲಿ ಎಂದು ಹಾರೈಸಿದರು.
ಸಂಘದ ಗೌರವಾಧ್ಯಕ್ಷ, ಬಿಎಸ್ಎನ್ಎಲ್ ನಿವೃತ್ತ ಮಹಾಪ್ರಬಂಧಕ ಎಂ. ಚಂದ್ರಶೇಖರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉದ್ಯಮಿಗಳಾದ ಕೆ.ಪಿ. ಇಬ್ರಾಹಿಂ ಮಟಪಾಡಿ, ವಿಶ್ವನಾಥ ಶೆಟ್ಟಿ ಮಟಪಾಡಿ, ಸಂಘದ ಗುರು ಪ್ರತೀಶ ಕುಮಾರ್, ಶ್ರೀನಿಕೇತನ ಪ್ರೌಢಶಾಲೆ ಮುಖ್ಯಶಿಕ್ಷಕಿ ಶ್ಯಾಮಲಾ, ಸಂಘದ ಅಧ್ಯಕ್ಷ ರಾಘವೇಂದ್ರ ಗಾಣಿಗ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಆಚಾರ್ಯ, ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ಗಾಣಿಗ ಭಾಗವಹಿಸಿದ್ದರು. ಚೇತನ್ ಪೂಜಾರಿ ಮಟಪಾಡಿ ಸ್ವಾಗತಿಸಿದರು. ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಮಹೇಂದ್ರ ಆಚಾರ್ಯ ಹೆರಂಜೆ ನಿರೂಪಿಸಿದರು.
ಗುರುವನ್ನು ಸ್ಮರಿಸಿ ಮುನ್ನಡೆಯುವ ಸಂಘ ಯಶಸ್ಸಿನತ್ತ ಸಾಗುತ್ತದೆ. ಅದರಂತೆ ಅರ್ಥಪೂರ್ಣವಾಗಿ ಮುನ್ನಡೆಯುತ್ತಿರುವ ಮಟಪಾಡಿ ಸಂಸ್ಥೆಯ ಕಾರ್ಯ ಶ್ಲಾಘನೀಯ.- ದಿನಕರ ಹೇರೂರು, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ
ಇಂದು ಪ್ರಶಸ್ತಿ ಪ್ರದಾನ
ವಜ್ರಮಹೋತ್ಸವದ ಸಮಾರೋಪ ಸಮಾರಂಭ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ (ಫೆ. 22) ಸಂಜೆ 7ಕ್ಕೆ ನಡೆಯಲಿದೆ. ಪ್ರಸಾಧನ ಕಲಾವಿದ ಶಾಂತರಾಮ ಆಚಾರ್ಯ ಅವರಿಗೆ ವಜ್ರ ಮಹೋತ್ಸವ ಪ್ರಶಸ್ತಿ ಪುಂಡು ವೇಷಧಾರಿ ರಘು ಮಡಿವಾಳ ಮಂದಾರ್ತಿ ಅವರಿಗೆ ದಿ.ಗುರು ಮಟಪಾಡಿ ವೀರಭದ್ರ ನಾಯಕ್ ಸ್ಮಾರಕ ಪ್ರಶಸ್ತಿಧ ಸ್ತ್ರೀ ವೇಷಧಾರಿ ಮೊಳಹಳ್ಳಿ ಕೃಷ್ಣ ನಾಯ್ಕ ಅವರಿಗೆ ದಿ.ವೇದಮೂರ್ತಿ ಮಟಪಾಡಿ ಶ್ರೀನಿವಾಸ ಕಲ್ಕೂರ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.