ADVERTISEMENT

ಆಧಾರ್ ಕಾರ್ಡ್ ತಿದ್ದುಪಡಿ, ನವೀಕರಣ: ಅನಾರೋಗ್ಯ ಪೀಡಿತರಿಗೆ ಮನೆ ಬಾಗಿಲಲ್ಲೇ ಸೇವೆ

ಎಡಿಸಿ ಸಾಜಿದ್ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 14:20 IST
Last Updated 21 ಫೆಬ್ರುವರಿ 2025, 14:20 IST
ಕಾರವಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಜಿಲ್ಲಾಮಟ್ಟದ ಆಧಾರ್ ಉಸ್ತುವಾರಿ ಸಮಿತಿ ಸಭೆ ನಡೆಸಿದರು
ಕಾರವಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರು ಜಿಲ್ಲಾಮಟ್ಟದ ಆಧಾರ್ ಉಸ್ತುವಾರಿ ಸಮಿತಿ ಸಭೆ ನಡೆಸಿದರು   

ಕಾರವಾರ: ‘ಅನಾರೋಗ್ಯಕ್ಕೆ ತುತ್ತಾದವರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ಅಥವಾ ಆಧಾರ್ ಕಾರ್ಡ್ ನವೀಕರಣ ಮಾಡಿಕೊಡಲು ನೆರವಾಗಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್‌ ಮುಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಆಧಾರ್ ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು,‌ ‘ಕಾರಣಾಂತರಗಳಿಂದ ಮನೆಯಿಂದ ಹೊರಬರಲು ಆಗದಿದ್ದವರಿಗೆ ಸರ್ಕಾರದ ಯೋಜನೆಗಳು ತಲುಪಲು ಆಧಾರ್ ಕಾರ್ಡ್ ಅಗತ್ಯವಿದೆ. ಅವರಿಗೆ ಮನೆ ಬಾಗಿಲಲ್ಲೇ ಸೇವೆ ಒದಗಿಸಲು ವಿಶೇಷ ಅಭಿಯಾನ ನಡೆಸಬಹುದು’ ಎಂದರು.

‘ಅಂಚೆ ಇಲಾಖೆಯಲ್ಲಿ ಆಧಾರ್ ಕಾರ್ಡ್ ಮಾಡುವ ಸೌಲಭ್ಯವನ್ನು ಈಗಾಗಲೇ ಒದಗಿಸಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಕಿಟ್‌ಗಳನ್ನು ನೀಡಲಾಗಿದೆ. ಅಂಚೆ ಇಲಾಖೆಯ ಸಿಬ್ಬಂದಿ ಅಂಚೆ ವಿತರಣೆಗೆ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಅವರ ಮೂಲಕವೇ ಜಿಲ್ಲೆಯಲ್ಲಿ ಹಾಸಿಗೆ ಪೀಡಿತರಿಗೆ ಆಧಾರ್ ಕಾರ್ಡ್ ಮಾಡಿ ಕೊಡುವ ವ್ಯವಸ್ಥೆ ಮಾಡಬಹುದು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ 98 ಸಾವಿರಕ್ಕೂ ಹೆಚ್ಚು ಆಧಾರ್ ಕಾರ್ಡ್‌ಗಳಿಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡುವ ಕಾರ್ಯವು ಬಾಕಿ ಇದೆ. ಆದಷ್ಟು ತ್ವರಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕೆಲವೇ ಬ್ಯಾಂಕ್ ಶಾಖೆಗಳಲ್ಲಿ ಹೊಸ ಆಧಾರ್ ಕಾರ್ಡ್, ನವೀಕರಣ ಮತ್ತು ತಿದ್ದುಪಡಿ ಮಾಡುವ ಕಾರ್ಯ  ಮಾಡುತ್ತಿದ್ದು, ಇವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿನ ಶಾಖೆಗಳಲ್ಲಿ ವಿಸ್ತರಿಸಿ’ ಎಂದು ಸೂಚಿಸಿದರು.

‘ಆಧಾರ್ ಕಾರ್ಡ್ ಅಪ್‍ಡೇಟ್ ಮಾಡುವ ಕುರಿತು ಆಧಾರ್ ಕೇಂದ್ರದಿಂದ ಮೊಬೈಲ್‌ಗಳಿಗೆ ಯಾವುದೇ ರೀತಿಯ ಲಿಂಕ್ ಸಂದೇಶಗಳನ್ನು ಕಳಹಿಸುವುದಿಲ್ಲ. ಸೈಬರ್ ವಂಚಕರು ಇದೇ ನೆಪವಾಗಿಟ್ಟು ಜನರಿಗೆ ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜನರಿಗೆ ಸರಿಯಾದ ತಿಳಿವಳಿಕೆ ನೀಡಿ’ ಎಂದು ಸಲಹೆ ನೀಡಿದರು.

‘ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ತಿದ್ದುಪಡಿಗೆ ನೇರವಾಗಿ ಆಧಾರ್ ಪೋರ್ಟಲ್‍ನಲ್ಲಿ ಅವರೇ ಅಗತ್ಯ ದಾಖಲೆಗಳನ್ನು ನೀಡಿ, 10 ದಿನಗಳ ಒಳಗೆ ನವೀಕರಣಗೊಂಡ ಕಾರ್ಡ್ ಪಡೆಯಬಹುದು’ ಎಂದು ಆಧಾರ್ ಜಿಲ್ಲಾ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಭಾರತಿ ವಸಂತ್, ಯುಐಡಿಎಐ ಬೆಂಗಳೂರು ಕೇಂದ್ರದ ಸಹಾಯಕ ಮೆನೇಜರ್ ಚೇತನ್, ಇತರ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.