ADVERTISEMENT

ಚಳಿಯಿಂದ ಪಾರಾಗಲು 22 ಸಾವಿರ ಕಿ.ಮೀ ಪ್ರಯಾಣ ಮಾಡುತ್ತೆ ಅಮುರ್ ಫಾಲ್ಕನ್ ಪಕ್ಷಿ!

ಕಾರವಾರದ ಕೈಗಾ ಸುತ್ತಮುತ್ತ ಕಾಣಿಸಿಕೊಂಡ ‘ಅಮುರ್ ಫಾಲ್ಕನ್’

ಸದಾಶಿವ ಎಂ.ಎಸ್‌.
Published 10 ನವೆಂಬರ್ 2022, 5:07 IST
Last Updated 10 ನವೆಂಬರ್ 2022, 5:07 IST
ಕಾರವಾರ ತಾಲ್ಲೂಕಿನ ಕೈಗಾ ಟೌನ್‌ಶಿಪ್ ಬಳಿ ನ.7ರಂದು ಕಂಡುಬಂದ ‘ಅಮುರ್ ಫಾಲ್ಕನ್’ ಹಕ್ಕಿ. ಚಿತ್ರ: ಸೂರಜ್ ಪ್ರಕಾಶ್
ಕಾರವಾರ ತಾಲ್ಲೂಕಿನ ಕೈಗಾ ಟೌನ್‌ಶಿಪ್ ಬಳಿ ನ.7ರಂದು ಕಂಡುಬಂದ ‘ಅಮುರ್ ಫಾಲ್ಕನ್’ ಹಕ್ಕಿ. ಚಿತ್ರ: ಸೂರಜ್ ಪ್ರಕಾಶ್   

ಕಾರವಾರ: ಇದು 100ರಿಂದ 150 ಗ್ರಾಂ ತೂಕದ ಪುಟ್ಟ ಹಕ್ಕಿ. ಆದರೆ, ಹಾರುವ ಸಾಮರ್ಥ್ಯ ಅದ್ಭುತ. ಘೋರ ಚಳಿಯಿಂದ ತಪ್ಪಿಸಿಕೊಳ್ಳಲು 22 ಸಾವಿರ ಕಿಲೋಮಿಟರ್ ದೂರವನ್ನು ಪ್ರತಿವರ್ಷ ಕ್ರಮಿಸುತ್ತದೆ. ತನ್ನ ಪರ್ಯಟನೆಯನ್ನು ಮುಂದುವರಿಸಿರುವ ಹಕ್ಕಿಯು, ಈಗ ಕಾರವಾರದ ಗ್ರಾಮೀಣ ಭಾಗದಲ್ಲಿ ಕಂಡುಬಂದಿದೆ!

ಗಿಡುಗನ ಜಾತಿಗೆ ಸೇರಿದ ಈ ಬೇಟೆಗಾರ ಪಕ್ಷಿಗೆ ‘ಅಮುರ್ ಫಾಲ್ಕನ್’ ಎಂದು ಹೆಸರು. ಭಾರತದ ಪೂರ್ವ ಭಾಗದಲ್ಲಿರುವ ಮಂಗೋಲಿಯಾ, ಚೀನಾ ಮತ್ತು ರಷ್ಯಾ ದೇಶದ ಹುಲ್ಲುಗಾವಲುಗಳು ಇದರ ಸಾಮಾನ್ಯ ಆವಾಸಸ್ಥಾನ. ಅಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಮಹಾ ವಲಸೆಗೆ ತಂಡದ ಸಮೇತ ಸಿದ್ಧವಾಗುತ್ತದೆ. ಆಫ್ರಿಕಾ ಖಂಡದ ವಿವಿಧ ದೇಶಗಳಿಗೆ ಹಾರಿ ಹೋಗಿ ಒಂದಷ್ಟು ದಿನ ಕಳೆದು, ಚಳಿಗಾಲ ಮುಗಿದ ಬಳಿಕ ಪುನಃ ತಮ್ಮ ವಾಸ ಸ್ಥಳಗಳಿಗೆ ಮರಳುತ್ತವೆ.

ಹಾಗೆ ಅವು ಸಾಗುತ್ತ ಭಾರತದ ಮೂಲಕ ಹಾದುಹೋಗುತ್ತವೆ. ನಾಗಾಲ್ಯಾಂಡ್‌ನಲ್ಲಿ ಒಂದಷ್ಟು ದಿನ ವಿಶ್ರಾಂತಿ ಪಡೆದು ದಕ್ಷಿಣದತ್ತ ಪ್ರಯಾಣಿಸುತ್ತವೆ. ಈಚಿನ ವರ್ಷಗಳಲ್ಲಿ ಕಾರವಾರದ ಸುತ್ತಮುತ್ತ ಕೂಡ ಕಾಣಿಸಿಕೊಳ್ಳುವುದನ್ನು ಪಕ್ಷಿ ವೀಕ್ಷಕರು ಗುರುತಿಸಿದ್ದಾರೆ.

ADVERTISEMENT

‘2016ರಲ್ಲಿ ಕಾರವಾರ ತಾಲ್ಲೂಕಿನ ಸುತ್ತಮುತ್ತ ಹುಲ್ಲುಗಾವಲು ಪ್ರದೇಶಗಳಲ್ಲಿ ಸುಮಾರು 20 ಪಕ್ಷಿಗಳು ಮೂರು ವಾರ ಬೀಡುಬಿಟ್ಟಿದ್ದವು. ಆಗ ಅರಬ್ಬಿಸಮುದ್ರದಲ್ಲಿ ಚಂಡಮಾರುತದ ಕಾರಣದಿಂದ ತಕ್ಷಣಕ್ಕೆ ಅವುಗಳಿಗೆ ಹಾರಾಟ ಮುಂದುವರಿಸಲು ಸೂಕ್ತ ವಾತಾವರಣ ಇದ್ದಿರಲಿಲ್ಲ. ನಂತರ ಪ್ರತಿವರ್ಷವೂ ಒಂದು, ಎರಡು ಹಕ್ಕಿಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಕೈಗಾ ಬರ್ಡರ್ಸ್ ತಂಡದ ಹವ್ಯಾಸಿ ಪಕ್ಷಿ ವೀಕ್ಷಕ ಹರೀಶ ಕೂಳೂರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವರ್ಷ ಮೊದಲ ಬಾರಿಗೆ ಕೈಗಾ ಟೌನ್‌ಶಿಪ್ ಬಳಿ ನ.7ರಂದು ಕಾಣಿಸಿಕೊಂಡಿದೆ. ಇನ್ನು ಎರಡು, ಮೂರು ವಾರಗಳಲ್ಲಿ ಬೇರೆ ಬೇರೆ ಕಡೆ ಕಾಣಿಸಿಕೊಳ್ಳಬಹುದು’ ಎಂದು ‘ಅಮುರ್ ಫಾಲ್ಕನ್’ ಅನ್ನು ಗುರುತಿಸಿದ ಸೂರಜ್ ಪ್ರಕಾಶ್ ಹೇಳಿದರು.

ಐದೂವರೆ ದಿನದಲ್ಲಿ ಹಾರಾಟ

‘ರೇಡಿಯೊ ಟ್ಯಾಗ್ ಅಳವಡಿಸಿದ್ದ ‘ಅಮುರ್ ಫಾಲ್ಕನ್’ ಹಕ್ಕಿಯೊಂದು ನಾಗಾಲ್ಯಾಂಡ್‌ನಿಂದ ಆಫ್ರಿಕಾ ಖಂಡದ ಸೋಮಾಲಿಯಾ ದೇಶಕ್ಕೆ ನಿರಂತರವಾಗಿ ಹಾರಾಟ ನಡೆಸಿದೆ. ಸುಮಾರು 5,600 ಕಿ.ಮೀ ಅಂತರವನ್ನು ಕೇವಲ ಐದೂವರೆ ದಿನಗಳಲ್ಲಿ ತಲುಪಿದ್ದು ದಾಖಲಾಗಿತ್ತು’ ಎಂದು ಹವ್ಯಾಸಿ ಪಕ್ಷಿ ವೀಕ್ಷಕ ಹರೀಶ ಕೂಳೂರು ತಿಳಿಸಿದರು.

‘2012ರವರೆಗೆ ನಾಗಾಲ್ಯಾಂಡ್‌ನ ಸುತ್ತಮುತ್ತ ಮಾಂಸಕ್ಕಾಗಿ ಈ ಹಕ್ಕಿಗಳನ್ನು ಬೇಟೆಯಾಡಲಾಗುತ್ತಿತ್ತು. ನಂತರ ಅಲ್ಲಿನ ರಾಜ್ಯ ಸರ್ಕಾರ ಮತ್ತು ವಿವಿಧ ಸಂಘಟನೆಗಳ ಪ್ರಯತ್ನದಿಂದಾಗಿ ಸ್ಥಳೀಯರಲ್ಲಿ ಅರಿವು ಮೂಡಿ ಬೇಟೆಯಾಡುವುದು ನಿಂತಿದೆ. ಹಾಗಾಗಿ ಪಶ್ಚಿಮ ಕರಾವಳಿಯಲ್ಲೂ ನೋಡಲು ಸಾಧ್ಯವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.