ADVERTISEMENT

ಕುದ್ರಿಗಿ: ಪುರಾತನ ಶಾಸನಗಳು ಪತ್ತೆ, ಜೈನಧರ್ಮದ ಅಧ್ಯಯನಕ್ಕೆ ಸಹಕಾರಿ

13ನೇ ಶತಮಾನದಲ್ಲಿ ರಚನೆಯಾಗಿರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 13:26 IST
Last Updated 22 ಜನವರಿ 2022, 13:26 IST
ಹೊನ್ನಾವರ ತಾಲ್ಲೂಕಿನ ಕುದ್ರಿಗಿಯಲ್ಲಿ ಈಚೆಗೆ ಪತ್ತೆಯಾದ ಪುರಾತನ ಶಾಸನ
ಹೊನ್ನಾವರ ತಾಲ್ಲೂಕಿನ ಕುದ್ರಿಗಿಯಲ್ಲಿ ಈಚೆಗೆ ಪತ್ತೆಯಾದ ಪುರಾತನ ಶಾಸನ   

ಕಾರವಾರ: ಪುರಾತನ, ಜೈನಧರ್ಮದ ಪಾದಪೀಠ ಶಾಸನ ಮತ್ತು ಮೂರು ನಿಶಧಿ ಶಾಸನಗಳು ಹೊನ್ನಾವರ ತಾಲ್ಲೂಕಿನ ಕುದ್ರಿಗಿಯಲ್ಲಿ ಪತ್ತೆಯಾಗಿವೆ. ಇವು 13ನೇ ಶತಮಾನದವು ಆಗಿರಬಹುದು ಎಂದು ಊಹಿಸಲಾಗಿದೆ.

ಹೊನ್ನಾವರದಿಂದ 27 ಕಿಲೋಮೀಟರ್ ದೂರದಲ್ಲಿರುವ ಗೇರುಸೊಪ್ಪೆ, ಐತಿಹಾಸಿಕ ಜೈನ ಕೇಂದ್ರ ಸಾಳುವ ರಾಜಮನೆತನದ ನಗಿರೆ ರಾಜ್ಯದ ರಾಜಧಾನಿಯಾಗಿತ್ತು. ಅಲ್ಲಿಂದ ಏಳು ಕಿಲೋಮೀಟರ್ ದೂರದಲ್ಲಿರುವ ಕುದ್ರಿಗಿ ಗ್ರಾಮವಿದೆ. ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಎಚ್.ಪಿ.ನಿತಿನ್ ಅವರು ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಕಂಡುಬಂದಿವೆ.

ಅವು ಕುದ್ರಿಗಿ ಗ್ರಾಮದ ಹೊಲದ ಮಧ್ಯೆ ಇರುವ ಜೈನ ಬಸದಿಯೊಂದರ ಅವಶೇಷಗಳ ನಡುವೆ ಪತ್ತೆಯಾಗಿವೆ. ಸುಮಾರು ಎರಡೂವರೆ ಅಡಿ ಎತ್ತರವಿದ್ದು, ಪರ್ಯಂಕಾಸನ ಭಂಗಿಯಲ್ಲಿರುವ ತೀರ್ಥಂಕರರ ಪಾದಪೀಠದಲ್ಲಿ ಒಂದು ಶಾಸನವಿದೆ. ತೀರ್ಥಂಕರರ ವಿಗ್ರಹ ಪ್ರಸ್ತುತ ಭಿನ್ನವಾಗಿದ್ದು, ಶಿರಭಾಗವಿಲ್ಲ. ತೀರ್ಥಂಕರರ ತಲೆಯ ಮೇಲಿದ್ದ ಮುಕ್ಕೊಡೆ, ಇಕ್ಕೆಲಗಳಲ್ಲಿರುವ ಆಕರ್ಷಕವಾದ ಚಾಮರಧಾರಿಗಳು ಧ್ವಂಸಗೊಂಡಿವೆ.

ADVERTISEMENT

‘ತೀರ್ಥಂಕರರ ಹಾಗೂ ಚಾಮರಧಾರಿಗಳ ಸುತ್ತ ಆಕರ್ಷಕವಾದ ಬಳ್ಳಿಗಳ ಕೆತ್ತನೆಗಳಿವೆ. ತೀರ್ಥಂಕರರ ಭುಜಗಳಲ್ಲಿ ತಲೆಯಿಂದ ಇಳಿಬಿಟ್ಟ ಗುಂಗುರು ಕೂದಲಿನ ರಚನೆಯಿದೆ. ಈ ಹಿನ್ನೆಲೆಯಲ್ಲಿ ವಿಗ್ರಹವು ಆದಿನಾಥ ತೀರ್ಥಂಕರರಂತೆ ಗೋಚರಿಸುತ್ತದೆ. ಪಾದಪೀಠ ಶಾಸನದಲ್ಲಿ ಮೂರು ಸಾಲುಗಳಿವೆ. ಶ್ರೀ ಮೂಲಸಂಘ ದೇಶಿಯ ಗಣ ಸಮಯಾಚರಣರ ಶಿಷ್ಯರ ತಂಗಿಯು ಬರೆಸಿ ಮಾಡಿಸಿದ ನಾರಣ ಜಿನ ಚೈತ್ಯಾಲಯ ಎಂದು ಬರೆಯಲಾಗಿದೆ’ ಎಂದು ನಿತಿನ್ ತಿಳಿಸಿದ್ದಾರೆ.

‘ಸಲ್ಲೇಖನ ವ್ರತ ಪಾಲಿಸಿ ಸಮಾಧಿ ಹೊಂದಿದವರ ನೆನಪಿಗಾಗಿ ಸ್ಥಾಪಿಸುವ ಶಾಸನವನ್ನು ‘ನಿಶಧಿ’ ಎನ್ನಲಾಗುತ್ತದೆ. ಈ ಬಸದಿಯ ಆವರಣದಲ್ಲಿ ಮೂರು ನಿಶಧಿಗಳು ಸಿಕ್ಕಿದ್ದು, ಸುತ್ತಮುತ್ತ ಜೈನಧರ್ಮದ ಆಚರಣೆಗಳು ಉಚ್ಛ್ರಾಯ ಸ್ಥಿತಿಯಲ್ಲಿ ಇತ್ತು ಎಂದು ನಿರ್ಧರಿಸಲು ಸಹಾಯಕವಾಗುತ್ತವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಈ ಶಾಸನಗಳನ್ನು ಹರಿಹರದ ಡಾ. ರವಿಕುಮಾರ್.ಕೆ.ನವಲಗುಂದ ಓದಿದ್ದಾರೆ. ಶಾಸನದ ಅಧ್ಯಯನಕ್ಕೆ ಸಿದ್ದಾಪುರದ ಭೋಜರಾಜ ಜೈನ್ ಸಹಕರಿಸಿದ್ದಾರೆ’ ಎಂದೂ ತಿಳಿಸಿದ್ದಾರೆ.

ನಿತಿನ್ ಅವರು ಜೈನ್‌ ಹೆರಿಟೇಜ್‌ ಸೆಂಟರ್ಸ್.ಕಾಂ ಎಂಬ ವೆನ್‌ಸೈಟ್‌ನ ಸ್ಥಾಪಕರಾಗಿದ್ದಾರೆ. ಕರ್ನಾಟಕದ ಜೈನ ಪರಂಪರೆಗೆ ಸಂಬಂಧಿಸಿದಂತೆ ‘ಜಿನಯಾತ್ರಾ’ ಎಂಬ ಕೃತಿಯನ್ನೂ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.