ADVERTISEMENT

ಶಿರಸಿ | ಅಂಗನವಾಡಿ: ಸಿಗದ ನಿವೇಶನ ಒಪ್ಪಿಗೆ ಪತ್ರ

ರಾಜೇಂದ್ರ ಹೆಗಡೆ
Published 27 ನವೆಂಬರ್ 2025, 4:53 IST
Last Updated 27 ನವೆಂಬರ್ 2025, 4:53 IST
ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಶಾಲಾ ಆವರಣದಲ್ಲಿ ಶಿರಸಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾಲಿ ನಿವೇಶನ ಗುರುತಿಸಿರುವುದು
ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಶಾಲಾ ಆವರಣದಲ್ಲಿ ಶಿರಸಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾಲಿ ನಿವೇಶನ ಗುರುತಿಸಿರುವುದು   

ಶಿರಸಿ: ಶಾಲಾ ಕೊಠಡಿಗಳು ಹಾಗೂ ಸಮುದಾಯ ಭವನದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಾಲಾ ಆವರಣಗಳಲ್ಲಿ ಗುರುತಿಸಿರುವ ನಿವೇಶನಗಳಿಗೆ ವರ್ಷಗಳು ಕಳೆದರೂ ಶಿಕ್ಷಣ ಇಲಾಖೆ ಈವರೆಗೆ ಒಪ್ಪಿಗೆ ನೀಡಿಲ್ಲ. ಇದರಿಂದ ಪುಟ್ಟ ಮಕ್ಕಳು ಸೌಲಭ್ಯ ಕೊರತೆಯ ನಡುವೆ ಇರುವಂತಾಗಿದೆ.

‘ತಾಲ್ಲೂಕಿನ 50ಕ್ಕೂ ಹೆಚ್ಚು ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಇದರಿಂದ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಲು ಇಲಾಖೆಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಶಾಲಾ ಆವರಣದಲ್ಲಿ ನಿವೇಶನ ಗುರುತಿಸಿ, ಒಪ್ಪಿಗೆ ನೀಡುವಂತೆ ಕೋರಲಾಗಿತ್ತು. ಆದರೆ ನಿವೇಶನ ನೀಡಲು ಈವರೆಗೆ ಇಲಾಖೆ ಮುಂದಾಗಿಲ್ಲ’ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಗಳ ದೂರಾಗಿದೆ.

‘ಕಳೆದೆರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಜತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನಡೆಸಿದ ವಿಡಿಯೋ ಸಂವಾದ ಸಭೆಗಳಲ್ಲಿ ಶಾಲೆಯಲ್ಲಿ ಅಂಗನವಾಡಿ ಕೇಂದ್ರ ನಡೆಸಲು ಕೊಠಡಿ ಖಾಲಿ ಇದ್ದಲ್ಲಿ, ಆ ಕೊಠಡಿ ನೀಡಲು ಹಾಗೂ ಕೊಠಡಿಗಳು ಖಾಲಿ ಇಲ್ಲದಿದ್ದಲ್ಲಿ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಹಾಗೂ ಸ್ಥಳಾವಕಾಶ ಇಲ್ಲದಿದ್ದಲ್ಲಿ ಶಾಲಾ ಕಟ್ಟಡದ ಮೇಲೆ ಅಂಗನವಾಡಿ ಕಟ್ಟಡ ನಿರ್ಮಿಸಲು ಸೂಚನೆ ನೀಡಲಾಗಿತ್ತು. ಇದರನ್ವಯ ಸೂಕ್ತ ಕ್ರಮವಹಿಸಲು ಹಾಗೂ ಈ ಬಗ್ಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಶಿಕ್ಷಣ ಇಲಾಖೆಯವರು ಸಂಪೂರ್ಣ ಸಹಕಾರ ನೀಡುವಂತೆ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಆ ಸುತ್ತೋಲೆ ಕೇವಲ ಸುತ್ತೋಲೆಗಷ್ಟೇ ಸೀಮಿತವಾಗಿದ್ದು, ಅನುಷ್ಠಾನ ಆಗಿಲ್ಲ’ ಎನ್ನುತ್ತಾರೆ ಅವರು. 

ADVERTISEMENT

‘ಶಿರಸಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಕೊಠಡಿಗಳಲ್ಲಿ ನಡೆಯುತ್ತಿರುವ ಗ್ರಾಮೀಣ 11, ನಗರ 1 ಮತ್ತು ಸಮುದಾಯ ಭವನದಲ್ಲಿ ನಡೆಯುತ್ತಿರುವ ಗ್ರಾಮೀಣ 1, ನಗರ 1 ಒಟ್ಟು 14 ಅಂಗನವಾಡಿ ಕೇಂದ್ರಗಳಿಗೆ ಈಗಾಗಲೇ ಶಾಲಾ ಆವರಣದಲ್ಲಿ ನಿವೇಶನ ಗುರುತಿಸಿ, ಆ ಶಾಲೆಗಳಿಂದ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಲಭ್ಯವಿದೆ ಎಂದು ಶಾಲಾಭಿವೃದ್ಧಿ ಸಮಿತಿ ಒಪ್ಪಿ ಠರಾವು ಮಾಡಲಾಗಿತ್ತು. ಅದರಂತೆ ಈ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಮಂಜೂರಾತಿಗಾಗಿ ಜಿಲ್ಲಾ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕಾಗಿ ಶಿಕ್ಷಣ ಇಲಾಖೆಯಿಂದ ನಿವೇಶನಕ್ಕೆ ಸಂಬಂಧಿಸಿದಂತೆ ಒಪ್ಪಿಗೆ ಪತ್ರದ ಅವಶ್ಯಕತೆ ಇದ್ದು, ನಿವೇಶನದ ಒಪ್ಪಿಗೆ ಪತ್ರ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿತ್ತು. ಹಲವು ಬಾರಿ ಪತ್ರ ವ್ಯವಹಾರ ನಡೆಸಿದ್ದರೂ ಈವರೆಗೆ ಸೂಕ್ತ ಸ್ಪಂದನೆ ಇಲ್ಲ’ ಎಂದು ಸಿಡಿಪಿಒ ನಂದಕುಮಾರ ಹೇಳಿದರು. 

‘ತಾಲ್ಲೂಕಿನ ಜವಳಗುಂಡಿ, ಮಾವಿನಕೊಪ್ಪ, ಬಿಸಲಕೊಪ್ಪ (ಕಾನಗೋಡ), ನೇರ್ಲವಳ್ಳಿ, ರೇವಣಕಟ್ಟಾ 2, ಕೊಂಡಲಗಿ, ಮಾವಿನಜಡ್ಡಿ, ಹಳ್ಳಿಗದ್ದೆ, ಹೊನ್ನಳ್ಳಿಬೈಲ್, ಹಾರೇಪಾಲ, ಸಣ್ಣಳ್ಳಿ, ಸಹ್ಯಾದ್ರಿಕಾಲೋನಿ, ಬಿಸಲಕೊಪ್ಪ, ಭೀಮನಗುಡ್ಡದ ಅಂಗನವಾಡಿಗಳು ಶಾಲೆ, ಸಮುದಾಯ ಭವನದಲ್ಲಿ ನಡೆಯುತ್ತಿದ್ದು, ಪರ್ಯಾಯವಾಗಿ ಜಾಗ ಗುರುತಿಸಿ ಶಿಕ್ಷಣ ಇಲಾಖೆಗೆ ನೀಡಲಾಗಿತ್ತು’ ಎಂದು ಮಾಹಿತಿ ನೀಡಿದರು. 

14 ಜಾಗಕ್ಕೆ ಸಿಕ್ಕಿಲ್ಲ ಅನುಮತಿ  ವರ್ಷದಿಂದ ಸಿಗದ ಸ್ಪಂದನೆ  ಸೌಲಭ್ಯ ವಂಚಿತ ಮಕ್ಕಳು 

ನಿವೇಶನದ ಒಪ್ಪಿಗೆ ಪತ್ರ ಸಂಬಂಧ ಬಿಇಒ ನೇತೃತ್ವದಲ್ಲಿ ಚರ್ಚೆ ನಡೆಸಿ ಅಂತಿಮಗೊಳಿಸಲು ಈಗಾಗಲೇ ಸಭೆ ನಡೆಸಿ ಸೂಚಿಸಲಾಗಿದೆ
ಡಿ.ಆರ್.ನಾಯ್ಕ ಉಪನಿರ್ದೇಶಕ ಶಿರಸಿ ಶೈಕ್ಷಣಿಕ ಜಿಲ್ಲೆ
‘ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಲಿ’
‘ಸ್ವಂತ ಕಟ್ಟಡಗಳಲ್ಲಿ ಅಂಗನವಾಡಿ ನಡೆಸಲು ನಿವೇಶನವೇ ದೊಡ್ಡ ತಲೆನೋವಾಗಿದ್ದರಿಂದ ಶಾಲಾ ಕೊಠಡಿ ಸಭಾಭವನದಂಥ ಕಟ್ಟಡದಲ್ಲಿ ಕಲಿಯುವ ಮಕ್ಕಳಿಗೆ ಸೂಕ್ತ ಸೌಲಭ್ಯವೂ ಸಿಗುತ್ತಿಲ್ಲ. ದಶಕದಿಂದ ಒಂದೇ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿರುವ ಕೆಲ ಅಂಗನವಾಡಿಗಳು ಸುಣ್ಣ–ಬಣ್ಣದ ಭಾಗ್ಯವನ್ನೂ ಕಂಡಿಲ್ಲ. ಹೀಗಾಗಿ ಎಷ್ಟೋ ಕೇಂದ್ರಗಳು ಮಳೆಗಾಲದಲ್ಲಿ ಸೋರುತ್ತಿವೆ. ಕೆಲವೆಡೆ ನೀರಿಗೆ ನಲ್ಲಿ ಸಂಪರ್ಕ ಇಲ್ಲ. ಕೆಲವೆಡೆ ಮಕ್ಕಳಿಗೆ ಬಾಣಂತಿಯರಿಗೆ ಶುದ್ಧ ನೀರು ಸಿಗುತ್ತಿಲ್ಲ. ಶೌಚಾಲಯ ವ್ಯವಸ್ಥೆಯೂ ಅಷ್ಟಕಷ್ಟೇ ಎಂಬಂತಾಗಿದೆ. ತಕ್ಷಣ ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ಅನುಮತಿ ನೀಡಲು  ಶಿಕ್ಷಣ ಇಲಾಖೆಗೆ ಸೂಚನೆ ನೀಡಬೇಕು’ ಎಂಬುದು ಪಾಲಕರಾದ ಸುಬ್ರಾಯ ಹೆಗಡೆ ಸೋಮಶೇಖರ ನಾಯ್ಕ ಇನ್ನಿತರರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.