ADVERTISEMENT

ಅಂಕೋಲಾ | ಕೇಣಿ ಬಂದರು ನಿರ್ಮಾಣಕ್ಕೆ ವಿರೋಧ: ಬಂದ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:50 IST
Last Updated 26 ನವೆಂಬರ್ 2025, 4:50 IST
ವಾಣಿಜ್ಯ ಬಂದರು ವಿರೋಧಿಸಿ ಅಂಕೋಲಾ ಪಟ್ಟಣ ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಪಟ್ಟಣದಲ್ಲಿ ಅಂಗಡಿ, ಮುಂಗಟ್ಟು ಬಂದ್ ಮಾಡಿ ಬಂದ್‌ಗೆ ಬೆಂಬಲ ಸೂಚಿಸಲಾಯಿತು
ವಾಣಿಜ್ಯ ಬಂದರು ವಿರೋಧಿಸಿ ಅಂಕೋಲಾ ಪಟ್ಟಣ ಬಂದ್‌ಗೆ ಕರೆ ನೀಡಿದ ಹಿನ್ನೆಲೆ ಪಟ್ಟಣದಲ್ಲಿ ಅಂಗಡಿ, ಮುಂಗಟ್ಟು ಬಂದ್ ಮಾಡಿ ಬಂದ್‌ಗೆ ಬೆಂಬಲ ಸೂಚಿಸಲಾಯಿತು   

ಅಂಕೋಲಾ: ತಾಲ್ಲೂಕಿನ ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವಋತು ಆಳಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಮಂಗಳವಾರ ಒಂದು ವರ್ಷವಾದ ಹಿನ್ನೆಲೆ ಕರೆ ನೀಡಿದ್ದ ಅಂಕೋಲಾ ಬಂದ್ ಯಶಸ್ವಿಯಾಯಿತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಯೋಜನೆ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಜನರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜೈಹಿಂದ್ ವೃತ್ತದಲ್ಲಿ ಪ್ರತಿಭಟನೆ ಸಭೆ ನಡೆಸಲಾಯಿತು.

ಬಂದರು ನಿರ್ಮಾಣ ವಿರೋಧಿ ಹೋರಾಟ ಸಮಿತಿಯ ಪ್ರಮುಖ ಸಂಜೀವ ಬಲೇಗಾರ ಮಾತನಾಡಿ, ‘ಕಳೆದೊಂದು ವರ್ಷದಿಂದ ವಿವಿಧ ಹಂತದ ಪ್ರತಿಭಟನೆ ಮಾಡುತ್ತಾ ಬಂದಿದ್ದು, ತಹಶೀಲ್ದಾರ್ ಕಚೇರಿ ಎದುರು 14 ದಿನಗಳಿಂದ ಧರಣಿ ಹಮ್ಮಿಕೊಂಡಿದ್ದೆವು. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ಬಂದು ನಮಗೆ ಬೆಂಬಲ ಸೂಚಿಸಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್, ‘ಸಾಕಷ್ಟು ಯೋಜನೆಗಳು ಜಿಲ್ಲೆಯ ಬಹು ಭಾಗವನ್ನು ಆವರಿಸಿಕೊಂಡಿದೆ. ಈಗ ಮತ್ತೆ ಖಾಸಗಿ ಬಂದರು ನಿರ್ಮಾಣಕ್ಕೆ ಮುಂದಾಗಿದ್ದು ಇದನ್ನು ಯಾವುದೇ ಕಾರಣಕ್ಕೂ ಆಗಲು ಬಿಡುವುದಿಲ್ಲ’ ಎಂದರು.

ಕಡಲಜೀವಶಾಸ್ತ್ರಜ್ಞ ವಿ.ಎನ್.ನಾಯಕ, ‘ಕೇಣಿಯಲ್ಲಿ ಬಂದರು ನಿರ್ಮಾಣವಾದರೆ ಹಳ್ಳಿಗಳು ಮಾತ್ರ ಸಮಸ್ಯೆಗೆ ಸಿಲುಕುವುದಿಲ್ಲ. ಪಶ್ಚಿಮ ಘಟ್ಟಗಳಿಗೂ ಹಾನಿಯಾಗುತ್ತದೆ’ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ ಮಾತನಾಡಿ, ‘ಈ ಯೋಜನೆ ಜಾರಿಗೊಂಡರೆ ಇಡೀ ಕರಾವಳಿ ಸೇರಿದಂತೆ ಅಂಕೋಲಾ ತಾಲ್ಲೂಕು ನಾಶವಾಗುತ್ತದೆ’ ಎಂದರು.

ಪ್ರತಿಭಟನೆ ತೀವ್ರತೆ ಹೆಚ್ಚುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸ್ಥಳಕ್ಕೆ ಆಗಮಿಸಿ ಹೋರಾಟಗಾರರೊಂದಿಗೆ ಚರ್ಚಿಸಿದರು.

ಮಾಜಿ ಸಚಿವ ಆನಂದ್ ಅಸ್ನೋಟಿಕರ್, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ, ಹನುಮಂತ ಗೌಡ, ಶಿವಮೊಗ್ಗ ರೈತ ಸಂಘದ ಅಧ್ಯಕ್ಷ ದಿನೇಶ, ರಾಜು ಹರಿಕಂತ್ರ, ಪ್ರಮೋದ ಬಾನಾವಳಿಕರ, ಹೂವಾ ಖಂಡೇಕರ, ಇತರರು ಪಾಲ್ಗೊಂಡಿದ್ದರು.

ಅಂಕೋಲಾದಲ್ಲಿ ಖಾಸಗಿ ಬಂದರು ವಿರೋಧಿಸಿ ಪಟ್ಟಣದ ಜೈಹಿಂದ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ
ಅಂಕೋಲಾದಲ್ಲಿ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು

ಪಟ್ಟಣದಲ್ಲಿ ಅಂಗಡಿಗಳು ಸಂಪೂರ್ಣ ಬಂದ್ ಜೈಹಿಂದ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ರಸ್ತೆಯಲ್ಲಿ ಅಣಕು ಶವವಿಟ್ಟು ಆಕ್ರೋಶ

ಸಚಿವ ಸಂಸದರ ವಿರುದ್ಧ ಆಕ್ರೋಶ
‘ಮೀನುಗಾರ ಸಮಾಜದ ಕೋಟಾದಲ್ಲಿ ಸಚಿವ ಸ್ಥಾನ ಪಡೆದ ಮಂಕಾಳ ವೈದ್ಯ ಇದುವರೆಗೂ ನಮ್ಮ ಸಮಸ್ಯೆಯನ್ನು ಆಲಿಸುವ ಬದಲಾಗಿ ಈ ಯೋಜನೆಯ ಬಗ್ಗೆ ಮುಖ್ಯಮಂತ್ರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ನಿರಂತರ ಪ್ರತಿಭಟನೆ ನಡೆಸುತ್ತಿದ್ದರೂ ಅಹವಾಲು ಆಲಿಸಲು ಬಂದಿಲ್ಲ. ನದಿ ಜೋಡಣೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಕಣಿ ಬಂದರು ಹೋರಾಟಕ್ಕೆ ಬೆಂಬಲವಾಗಿ ನಿಂತಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.