ADVERTISEMENT

ಕನ್ನಡ ಮಣ್ಣಿನಲ್ಲಿ ಜನಪದ ಪರಿಷೆ

ಕದಂಬೋತ್ಸವಕ್ಕೆ ಕಲಾ ಮೆರವಣಿಗೆ ಮೆರುಗು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 12:11 IST
Last Updated 8 ಫೆಬ್ರುವರಿ 2020, 12:11 IST

ಬನವಾಸಿ: ಸುಗ್ಗಿ ಕುಣಿತ, ಗೊಂಡರ ನೃತ್ಯ, ಬೇಡರ ವೇಷ, ಕೀಲು ಕುದುರೆ, ಕರಡಿ ಮೇಳ, ಡಮಾಮಿ, ಗುಮಟೆಪಾಂಗ್, ಪುರವಂತಿಕೆ, ಟಿಬೆಟನ್ ನೃತ್ಯ ಹೀಗೆ ಜನಪದ ನೃತ್ಯ ಪ್ರಕಾರಗಳ ಪರಿಷೆಯೇ ನೆರೆದಿತ್ತು.

ಕದಂಬರು ಆಳಿದ ನಾಡಿನಲ್ಲಿ ಶನಿವಾರ ನಡೆದ ಸಾಂಸ್ಕೃತಿಕ ಮೆರವಣಿಗೆ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಕನ್ನಡ ಮಣ್ಣಿನ ಜನಪದ ಕಲೆಗಳ ಕಂಪು ಬೀರಿತು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಕಲಾ ತಂಡಗಳು, ಡೊಳ್ಳು ವಾದ್ಯಗಳ ನಾದ ಮಾರ್ದನಿಸಿತು.

ಕಾರವಾರದ ಸಿಂಹ ಕುಣಿತ ತಂಡ, ಬ್ರಹ್ಮದೇವ ಗುಮಟೆಪಾಂಗ್ ತಂಡ, ಮುಂಡಗೋಡ ಟಿಬೆಟನ್ನರ ಸಿಂಹ ನೃತ್ಯ, ಮನೋಜ ಪಾಲೇಕರ ತಂಡದ ರೂಪಕ, ಚನ್ನಬಸಪ್ಪ ಅವರ ವೀರಗಾಸೆ ಕೊರವಂತರ, ಜೊಯಿಡಾ– ಹಳಿಯಾಳದಿಂದ ಬಂದಿದ್ದ ಸಿದ್ದಿ, ಡಮಾಮಿ, ಲಮಾಣಿ, ಗೌಳಿಗರ ತಂಡದ ನೃತ್ಯ ಒಂದೆಡೆಯಾದರೆ, ಭಟ್ಕಳದ ಗೊಂಡರ ನೃತ್ಯ, ಹೊನ್ನಾವರದ ಹಗಣ ಹೀಗೆ ಒಂದೆರಡಲ್ಲ, ಒಂದೇ ಕಲಾ ಪ್ರಕಾರದ ಹಲವಾರು ತಂಡಗಳು ಸಾಂಪ್ರದಾಯಿಕ ವೇಷ ತೊಟ್ಟು ಸಾಗುತ್ತಿದ್ದರೆ, ಹಾದಿ–ಬೀದಿಯಲ್ಲಿ ನಿಂತವರು ನಿಬ್ಬೆರಗಾಗಿ ನೋಡಿದರು.

ADVERTISEMENT

ಮಧುಕೇಶ್ವರ ದೇವಾಲಯದಿಂದ ಒಂದು ಕಿ.ಮೀ ದೂರದವರೆಗೆ ಎತ್ತ ತಿರುಗಿದರೂ, ಕಲೆಯ ಬಲೆಯೇ ಕಣ್ಣಿಗೆ ಬೀಳುತ್ತಿತ್ತು. ಶಾಲಾ ಮಕ್ಕಳ ಸಮವಸ್ತ್ರ ತಂಡ, ಸ್ಕೈಟ್ಸ್‌–ಗೈಡ್ಸ್, ಸೇವಾದಳ ತಂಡಗಳು ಶಿಸ್ತಿನ ಹೆಜ್ಜೆ ಹಾಕಿದವು.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕಲಾ ಮೆರವಣಿಗೆಗೆ ಚಾಲನೆ ನೀಡಿದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವರಾಜ ದೊಡ್ಮನಿ, ಉಷಾ ಹೆಗಡೆ, ರೂಪಾ ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಇದ್ದರು.

ಮಧುಕೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆ ಬನವಾಸಿ ಬೀದಿಗಳಲ್ಲಿ ಸಾಗಿ ಪಂಪ ವೃತ್ತದ ಮೂಲಕ ಕದಂಬೋತ್ಸವ ಮೈದಾನಕ್ಕೆ ತಲುಪಿ ಸಮಾಪ್ತಿಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.