ಮುಂಡಗೋಡ ತಾಲ್ಲೂಕಿನ ಟಿಬೆಟನ್ ಕ್ಯಾಂಪ್ ನಂ.1 ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದ ಎದುರಿಗೆ ಕಿರುಚಿತ್ರದ ಕಲಾವಿದರು ನೃತ್ಯ ಮಾಡುತ್ತಿರುವುದು
ಮುಂಡಗೋಡ: ನಿರಾಶ್ರಿತರಾದ ಬಿಕ್ಕುಗಳು ಇಲ್ಲಿ ನೆಲೆ ಕಂಡುಕೊಂಡ ನಂತರ, ಬೌದ್ಧ ಧರ್ಮದ ಪರಂಪರೆ, ಶಿಕ್ಷಣವನ್ನು ಮುಂದುವರೆಸಲು ನಿರ್ಮಾಣ ಮಾಡಿರುವ ಬೌದ್ಧ ಮಂದಿರಗಳು, ಶಿಕ್ಷಣ ಕೇಂದ್ರಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ತಾಲ್ಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.1ರ ‘ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರ’ ದೇಶ, ವಿದೇಶಗಳ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳವಾಗಿದ್ದರೇ, ಬೌದ್ಧ ಧರ್ಮ ಪ್ರಶಿಕ್ಷಣಾರ್ಥಿಗಳಿಗೆ ಕಲಿಕಾ ಕೇಂದ್ರವಾಗಿದೆ.
ಹತ್ತಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಮಂದಿರ ಟಿಬೆಟಿಯನ್ ಕ್ಯಾಂಪ್‌ನ ಪ್ರವೇಶ ದ್ವಾರದಲ್ಲಿ ಸಿಗುವ ಮೊದಲ ಧಾರ್ಮಿಕ ಕೇಂದ್ರವೂ ಆಗಿದೆ. ಹತ್ತು ವರ್ಷದ ಕಿರಿಯ ಬಿಕ್ಕುವಿನಿಂದ ಹಿಡಿದು 70 ವರ್ಷದ ಹಿರಿಯ ಬಿಕ್ಕುಗಳು ಬೌದ್ಧ ಅಧ್ಯಯನದಲ್ಲಿ ತೊಡಗಿರುವುದನ್ನು ಇಲ್ಲಿ ಕಾಣಬಹುದು.
‘ನಿರಾಶ್ರಿತರಾಗಿ ಬಂದ ನಂತರ 1970ರ ದಶಕದ ಆರಂಭದಲ್ಲಿ ಆರಂಭಗೊಂಡ ಬೌದ್ಧ ಮಂದಿರದಲ್ಲಿ ಆರಂಭದಲ್ಲಿ 160ರಷ್ಟು ಬಿಕ್ಕುಗಳು ಬೌದ್ಧ ಧರ್ಮದ ಕಲಿಕೆಯಲ್ಲಿ ತೊಡಗಿದ್ದರು. ದಶಕಗಳು ಉರುಳಿದಂತೆ ಬೌದ್ಧ ಅಧ್ಯಯನ ಮಾಡುವ ಬಿಕ್ಕುಗಳ ಸಂಖ್ಯೆಯೂ ಹೆಚ್ಚಿತು. ಇದರಿಂದ ಮೊನ್ಯಾಸ್ಟರಿಯ ಪ್ರಾರ್ಥನಾ ಸ್ಥಳವೂ ವಿಸ್ತರಿಸಿಕೊಂಡು ಹೊಸ ರೂಪ ಪಡೆಯಿತು. ಧಾರ್ಮಿಕ ಮುಖಂಡ ದಲೈಲಾಮಾ ಅವರಿಂದ ವಿಸ್ತಾರಗೊಂಡ ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರವು 2001ರಲ್ಲಿ ಉದ್ಘಾಟನೆಗೊಂಡಿದೆ. ಪ್ರತಿ ವರ್ಷ ಈ ಬೌದ್ಧ ಮಂದಿರದಲ್ಲಿ ಬೌದ್ಧ ಧರ್ಮದ ಅತ್ಯುನ್ನತ ಪದವಿ ‘ಗೆಶೆ ಲಾರ್ಮಪಾ’ ಪಡೆದುಕೊಂಡು, ಬಿಕ್ಕುಗಳು ಬೌದ್ಧ ಧರ್ಮದ ಪರಂಪರೆ ಉಳಿಸುವ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ ಹಿರಿಯ ಬಿಕ್ಕು ಜಂಪಾ ಲೋಬ್ಸಂಗ್.
‘ಗಾಡೆನ್ ಜಾಂಗತ್ಸೆ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಬೌದ್ಧ ಮಂದಿರದ ಒಳಗೆ ಇರುವ ಪ್ರಶಾಂತ ವಾತಾವರಣ, ನಗುಮೊಗದಲ್ಲಿ ಕುಳಿತಂತೆ ಕಾಣುವ ಬುದ್ಧನ ಎತ್ತರದ ಮೂರ್ತಿ, ಸುತ್ತಲೂ ಬೌದ್ಧ ಧರ್ಮದ ಪ್ರಸಾರಕರು, ವಿವಿಧ ಮೂರ್ತಿಗಳು ಒಂದು ಕ್ಷಣ ಸ್ಥಬ್ಧಗೊಳಿಸುವಂತೆ ಮಾಡುತ್ತವೆ. ಟಿಬೆಟಿಯನ್‌ರ ಕಲೆ ಮತ್ತು ಸಂಸ್ಕೃತಿಯು ಇಲ್ಲಿ ಮೇಳೈಸಿರುವುದನ್ನು ಕಾಣಬಹುದು’ ಎಂದು ಬೆಂಗಳೂರಿನ ಪ್ರವಾಸಿಗ ಎಚ್.ಪ್ರಶಾಂತ ಹೇಳಿದರು.
‘ಬೌದ್ಧ ಅಧ್ಯಯನ ಕೇಂದ್ರ ಅಥವಾ ಮಂದಿರದ ಪರಿಚಯವನ್ನು ಟಿಬೆಟನ್‌ರು ಸ್ಥಳೀಯ ಭಾಷೆಯಲ್ಲಿ ತಿಳಿಸಲು ಮುಂದಾದರೆ, ಪ್ರವಾಸಿಗರ ಸಂಖ್ಯೆ ದ್ವಿಗುಣವಾಗುತ್ತದೆ. ನಮ್ಮದೇ ನೆಲದಲ್ಲಿ ಮತ್ತೊಂದು ದೇಶದ ಕಲೆ, ಸಂಸ್ಕೃತಿಯನ್ನು ಕಣ್ಣಾರೆ ಕಾಣುವುದೇ ಒಂದು ಸೌಭಾಗ್ಯ’ ಎಂದು ಹೇಳಿದರು.
ಗಾಡೆನ್ ಜಾಂಗತ್ಸೆ ಬೌದ್ಧ ಮಂದಿರದ ಹೊರಾಂಗಣದಲ್ಲಿ ಅನೇಕ ಕಿರುಚಿತ್ರ ಕನ್ನಡ ಚಲನಚಿತ್ರಗಳ ಶೂಟಿಂಗ್ ಮಾಡಲಾಗಿದೆ. ಬೌದ್ಧ ಮಂದಿರದ ಎದುರಿಗೆ ಮಹಾತ್ಮಾ ಗಾಂಧೀಜಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಸುತ್ತಲೂ ವಿವಿಧ ಹೂವುಗಳನ್ನು ಬೆಳೆಸಲಾಗಿದೆ. ಕಿರು ಸೇತುವೆಯ ಮಾದರಿ ಅಲಂಕಾರಿಕ ಗಿಡಗಳು ಕಡಿಮೆ ಬಜೆಟ್‌ನ ಚಲನಚಿತ್ರ ಕಿರುಚಿತ್ರಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಆಗಾಗ ಇಲ್ಲಿ ಕಿರುಚಿತ್ರ ಚಲನಚಿತ್ರಗಳ ಶೂಟಿಂಗ್ ಸದ್ದಿಲ್ಲದೇ ನಡೆದಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.