ಬಾಪುಗೌಡ ಪಾಟೀಲ
ಮುಂಡಗೋಡ: ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಕಳೆದ ಆರು ತಿಂಗಳಿಂದ ವಿಚಾರಣೆಗೆ ಹಾಜರಾಗದಿರುವುದರಿಂದ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರ ಪುತ್ರ ಬಾಪುಗೌಡ ಪಾಟೀಲ ಅವರನ್ನು ಇಲ್ಲಿನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿದ್ದಾರೆ.
ಬಾಪುಗೌಡ ಪಾಟೀಲ ವೃತ್ತಿಯಲ್ಲಿ ವಕೀಲ ಆಗಿದ್ದಾರೆ. 2011ರಲ್ಲಿ ಎ.ಎಸ್.ಐ ಮೇಲಿನ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿ, ಅದರಲ್ಲಿ ಬಾಪುಗೌಡ ಪಾಟೀಲ ಸೇರಿದಂತೆ 15 ಜನರ ವಿರುದ್ಧ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸತತವಾಗಿ ನ್ಯಾಯಾಲಯಕ್ಕೆ ಗೈರಾದ ಹಿನ್ನೆಲೆಯಲ್ಲಿ, ವಾರಂಟ್ ಜಾರಿಯಾಗಿದ್ದರಿಂದ ಇಲ್ಲಿನ ಪೊಲೀಸರು ದಸ್ತಗಿರಿ ಮಾಡಿ ಶನಿವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.