ADVERTISEMENT

ಶಿರಸಿ | ಬಾಳೆ ಬೆಳೆ ಪ್ರದೇಶ ಇಳಿಕೆ: ಅನ್ಯ ಬೆಳೆಗಳತ್ತ ವಾಲಿದ ಬೆಳೆಗಾರರು

ಅಸ್ಥಿರ ದರ, ನಿರ್ವಹಣೆಗೆ ಸಮಸ್ಯೆ

ರಾಜೇಂದ್ರ ಹೆಗಡೆ
Published 15 ಆಗಸ್ಟ್ 2025, 6:37 IST
Last Updated 15 ಆಗಸ್ಟ್ 2025, 6:37 IST
ಶಿರಸಿಯ ಬನವಾಸಿಯಲ್ಲಿ ಬೆಳೆದ ಬಾಳೆಗೊನೆ ಕಟಾವಿಗೆ ಬಂದಿರುವುದು
ಶಿರಸಿಯ ಬನವಾಸಿಯಲ್ಲಿ ಬೆಳೆದ ಬಾಳೆಗೊನೆ ಕಟಾವಿಗೆ ಬಂದಿರುವುದು   

ಶಿರಸಿ: ಬೇಡಿಕೆಗೆ ತಕ್ಕಷ್ಟು ಪೂರೈಕೆಯಿಲ್ಲದ ಕಾರಣ ಬಾಳೆಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಲಭಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಬಾಳೆ ಬೆಳೆಯುವ ಪ್ರದೇಶ ಅರ್ಧಕ್ಕಿಂತ ಹೆಚ್ಚು ಇಳಿಮುಖವಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 9 ಸಾವಿರ ರೈತರು ಬಾಳೆ ಕೃಷಿ ಮಾಡುತ್ತಿದ್ದಾರೆ. ಬಹುತೇಕ ಅತಿ ಸಣ್ಣ ಬೆಳೆಗಾರರಾಗಿದ್ದು, ಮನೆ ಬಳಕೆಗೆ ಆಗಿ, ಮಿಕ್ಕಿದ ಉತ್ಪನ್ನವನ್ನು ಮಾರುಕಟ್ಟೆಗೆ ತರುವವರಾಗಿದ್ದಾರೆ. ಬನವಾಸಿ, ಮುಂಡಗೋಡ ಭಾಗದ ರೈತರು ದೊಡ್ಡ ಪ್ರಮಾಣದಲ್ಲಿ ಬಾಳೆ ಕೃಷಿಯಲ್ಲಿ ತೊಡಗಿದ್ದಾರೆ.

‘ಎರಡು ವರ್ಷಗಳಿಂದ ಬಾಳೆ ಕೃಷಿಯ ಮೇಲಿನ ಆಸಕ್ತಿ ತೀರಾ ಕಡಿಮೆಯಾಗಿದ್ದು, ಬಾಳೆಯ ಜಾಗದಲ್ಲಿ ಅನ್ಯ ಬೆಳೆಗಳು ತಳವೂರಿವೆ. ಹೀಗಾಗಿ ಉತ್ಪನ್ನ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ತೀವ್ರವಾದ ಹಿನ್ನೆಲೆ ಹೆಚ್ಚಿನ ಧಾರಣೆ ಲಭ್ಯವಾಗುತ್ತಿದೆ’ ಎಂಬುದಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

‘2023–24ರಲ್ಲಿ ಜಿಲ್ಲೆಯಲ್ಲಿ ಒಟ್ಟು 7,260 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿತ್ತು. 2024–25ರಲ್ಲಿ ಈ ಪ್ರಮಾಣ ಅಂದಾಜು 3 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. 2025–26ನೇ ಸಾಲಲ್ಲಿ ಈ ಪ್ರಮಾಣ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ. ಬಾಳೆಯ ಬದಲು ಅಡಿಕೆ, ಶುಂಠಿ, ಅನಾನಸ್, ಮೆಕ್ಕೆಜೋಳ ಪ್ರದೇಶ ಹೆಚ್ಚಿರುವುದು ಬಾಳೆ ಪ್ರದೇಶ ಗಣನೀಯ ಇಳಿಕೆಗೆ ಕಾರಣವಾಗಿದೆ’ ಎಂಬುದು ಅವರು ನೀಡುವ ಮಾಹಿತಿ.  

‘ಈ ಹಿಂದೆ ಬಾಳೆ ಬೆಳೆಗಾರರು ವಾಹನದ ಮೂಲಕ ಮಂಡಿಗೆ ತರುತ್ತಿದ್ದರು. ಕಳೆದ ವರ್ಷದಿಂದ ವ್ಯಾಪಾರಿಗಳೇ ಬೆಳೆಗಾರರ ಬಳಿ ತೆರಳಿ ಉತ್ಪನ್ನ ಖರೀದಿಸುವ ಸ್ಥಿತಿ ಬಂದಿದೆ. ಬೇಡಿಕೆ ಹೆಚ್ಚಿದ್ದರೂ ಉತ್ಪನ್ನ ಸಿಗದ ಕಾರಣ ರೈತರು ಹೇಳಿದ ದರ ನೀಡಿ ಖರೀದಿಸುವಂತಾಗಿದೆ’ ಎಂದು ಬಾಳೆಕಾಯಿ ವ್ಯಾಪಾರಿ ದಿನೇಶ ಹೇಳಿದರು.

‘ಅಡಿಕೆಗೆ ಸ್ಥಿರ ದರವಿದೆ. ಬಾಳೆಗೆ ಅಸ್ಥಿರ ಧಾರಣೆ, ಕೂಲಿ ಕಾರ್ಮಿಕರ ಕೊರತೆ ಉಂಟಾಗುತ್ತಿದೆ. ಇದರಿಂದ ಕೇವಲ ಬಾಳೆ ತೋಟ ಮಾಡುವ ರೈತರು ಅಡಿಕೆ ಕೃಷಿಯತ್ತ ವಾಲಿರುವುದು ಬಾಳೆ ಕ್ಷೇತ್ರ ಇಳಿಕೆಗೆ ಪ್ರಮುಖ ಕಾರಣ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಗಣೇಶ ಹೆಗಡೆ ವಿಶ್ಲೇಷಿಸಿದರು.

‘ಅತಿಯಾದ ಮಳೆಯ ಕಾರಣಕ್ಕೆ ಕಾಯಿಗಳು ಸರಿಯಾಗಿ ಬೆಳೆಯುವುದಿಲ್ಲ. ಹೀಗಾಗಿ ತೂಕದಲ್ಲಿ ನಷ್ಟವಾಗುತ್ತದೆ. ಮಂಗಗಳು, ಕಾಡು ಪ್ರಾಣಿಗಳ ಹಾವಳಿಯಿಂದ ಬಾಳೆಗೊನೆ ರಕ್ಷಿಸಿಕೊಳ್ಳುವುದೂ ಸವಾಲು. ಬಾಳೆ ಬೆಳೆ ಹೆಚ್ಚಿದ್ದಾಗ ಅದಕ್ಕೆ ದರ ಸಿಕ್ಕಿರಲಿಲ್ಲ. ಅಡಿಕೆ, ಶುಂಠಿ ಬೆಳೆದರೆ ಉತ್ತಮ ದರ ಸಿಗುತ್ತದೆ. ಇದು ಬಾಳೆ ಕೃಷಿಯಿಂದ ವಿಮುಖವಾಗಲು ಕಾರಣ’ ಎಂದು ರೈತ ಮಂಜುನಾಥ ಗೌಡರ್ ಹೇಳಿದರು.

ಬಾಳೆ ಬೆಳೆ ಇಳಿಮುಖವಾದ ಕಾರಣ ಉತ್ಪನ್ನದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಬಾಳೆಕಾಯಿಗೆ ಉತ್ತಮ ದರ ಲಭಿಸುತ್ತಿದೆ. ಹಬ್ಬಗಳ ಸಂದರ್ಭದಲ್ಲಿ ದರ ಇನ್ನಷ್ಟು ಏರಿಕೆಯಾಗಬಹುದು
ವಿನಾಯಕ ಶೇಟ್ ಬಾಳೆಕಾಯಿ ವರ್ತಕ 

ದರ ಏರಿಕೆ ಸಾಧ್ಯತೆ

‘ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆ ಕೆಜಿಗೆ ₹75 ರಸಬಾಳೆ ₹70 ಪಚ್ಚ ಬಾಳೆ ₹50 ಸಕ್ಕರೆ ಬಾಳೆ ₹35 ಜಿ–9 ₹30ರ ಆಸುಪಾಸು ದರದಲ್ಲಿ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ ₹8–₹10 ಹೆಚ್ಚಳವಾಗಿದೆ. ಹಬ್ಬಗಳ ಸಂದರ್ಭದಲ್ಲಿ ಈ ದರ ಏರಿಕೆಯಾಗಬಹುದು’ ಎನ್ನತ್ತಾರೆ ಚಿಲ್ಲರೆ ಮಾರಾಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.