ADVERTISEMENT

ಭೂಮಿ ಪಾಲಾಗುತ್ತಿರುವ ಅಡಿಕೆ ಮಿಳ್ಳೆ, ಅಧಿಕ ಉಷ್ಣಾಂಶದ ಪರಿಣಾಮ ಬೆಳೆಗೆ ಹಾನಿ

ಗಣಪತಿ ಹೆಗಡೆ
Published 30 ಏಪ್ರಿಲ್ 2022, 19:31 IST
Last Updated 30 ಏಪ್ರಿಲ್ 2022, 19:31 IST
ಅಡಿಕೆ ಮಿಳ್ಳೆಗಳು ಉದುರಿ ಬರಿದಾಗಿರುವ ಸಿಂಗಾರ
ಅಡಿಕೆ ಮಿಳ್ಳೆಗಳು ಉದುರಿ ಬರಿದಾಗಿರುವ ಸಿಂಗಾರ   

ಶಿರಸಿ: ಸೆಖೆಯ ಬೇಗುದಿಗೆ ಮಲೆನಾಡು ಪ್ರದೇಶವೂ ಕಂಗೆಟ್ಟು ಹೋಗಿದ್ದು ಅಡಿಕೆ ತೋಟಗಳು ಒಣಗುತ್ತಿವೆ. ಅಧಿಕ ಉಷ್ಣಾಂಶದ ಪರಿಣಾಮ ಅಡಿಕೆ ಮಿಳ್ಳೆಗಳು ಉದುರತೊಡಗಿರುವುದು ರೈತರನ್ನು ಚಿಂತೆಗೆ ತಳ್ಳಿದೆ.

ಒಂದು ಕಾಲದಲ್ಲಿ ತಂಪು ಪ್ರದೇಶ ಎಂದು ಕರೆಯಿಸಿಕೊಳ್ಳುತ್ತಿದ್ದ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿಯೂ ಬಿಸಿಲ ಝಳ ಹೆಚ್ಚಿದೆ. ಸರಾಸರಿ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ದಾಟಿದೆ. ವಾತಾವರಣದ ಆರ್ದೃತೆಯೂ ಅಧಿಕಗೊಂಡ ಪರಿಣಾಮ ಹಸಿರಾಗಿದ್ದ ಅಡಿಕೆ ಮರಗಳು ಸೊರಗುತ್ತಿವೆ.

ತಾಲ್ಲೂಕಿನ ಬನವಾಸಿ, ಜಡ್ಡಿಗದ್ದೆ, ಬಂಡಲ ಸೇರಿದಂತೆ ವಿವಿಧೆಡೆ ಮತ್ತು ಅಕ್ಕಪಕ್ಕದ ತಾಲ್ಲೂಕುಗಳ ನೂರಾರು ಎಕರೆಯಷ್ಟು ಪ್ರದೇಶದಲ್ಲಿ ಅಡಿಕೆ ಮಿಳ್ಳೆಗಳು ಉದುರಿ ಬೀಳಲಾರಂಭಿಸಿದೆ. ಬೆರಳೆಣಿಕೆಯಷ್ಟು ರೈತರು ಉದುರು ಸಮಸ್ಯೆ ತಡೆಯಲು ಔಷಧ ಸಿಂಪಡಿಸುತ್ತಿದ್ದಾರೆ.

ADVERTISEMENT

‘ಜನವರಿ ವೇಳೆಯಲ್ಲೂ ಅಕಾಲಿಕ ಮಳೆಗೆ ಮಿಳ್ಳೆಗಳು ಉದುರಿದ್ದವು. ಕಳೆದ ಎರಡು ವಾರದಿಂದ ಈಚೆಗೆ ಸಮಸ್ಯೆ ಬಿಗಡಾಯಿಸಿದೆ. ಪ್ರತಿ ಮರದ ಬುಡದಲ್ಲಿ ರಾಶಿ ರಾಶಿ ಮಿಳ್ಳೆಗಳ ರಾಶಿ ಕಾಣಸಿಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಫಸಲು ಕೈಗೆ ಸಿಗುವುದೇ ಅನುಮಾನವಿದೆ’ ಎಂದು ಸಮಸ್ಯೆ ವಿವರಿಸುತ್ತಾರೆ ರೈತ ಸಂತೋಷ್ ಕಲಕರಡಿ.

‘ಉದುರು ಸಮಸ್ಯೆ ನಿಯಂತ್ರಣಕ್ಕೆ ತರಲು ಕಷ್ಟವಾಗಿದೆ. ಹಲವು ರೈತರ ತೋಟಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ತಲುಪಿವೆ. ಬಿಸಿಲ ಝಳ ಈ ಬಾರಿ ವಿಪರೀತ ಹೆಚ್ಚಳವಾಗಿರುವ ಕಾರಣ ಕೃಷಿ ಚಟುವಟಿಕೆಗೂ ಕಾರ್ಮಿಕರು ದೊರೆಯುವ ಸ್ಥಿತಿ ವಿರಳವಾಗಿದೆ’ ಎಂದು ಹೇಳಿದರು.

‘ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಮೀರಿದ ಬಳಿಕ ಸಾಮಾನ್ಯವಾಗಿ ಅಡಿಕೆ ಮಿಳ್ಳೆಗಳು ಉದುರಲು ಆರಂಭಿಸುತ್ತವೆ. ಬಿಸಿಲು, ಮೋಡ ಕವಿದ ವಾತಾವರಣ, ಆಗಾಗ ಮಳೆ ಬೀಳುವುದರಿಂದಲೂ ಹವಾಮಾನ ವೈಪರಿತ್ಯಗೊಂಡು ಇಂತಹ ಸಮಸ್ಯೆ ಉದ್ಭವಿಸುತ್ತಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ.

‘ಮಿಳ್ಳೆ ಉದುರುವ ಸಮಸ್ಯೆ ತಪ್ಪಿಸಲು ಔಷಧ ಸಿಂಪಡಿಸುವುದರಿಂದ ಜೇನುಹುಳುಗಳ ಸಾವಿಗೆ ಕಾರಣವಾಗುತ್ತದೆ. ಇದರಿಂದ ಪರಾಗಸ್ಪರ್ಶ ಕ್ರಿಯೆಗೆ ಅಡ್ಡಿಯಾಗಿ ಮುಂದಿನ ವರ್ಷದ ಇಳುವರಿ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಔಷಧ ಸಿಂಪಡಣೆ ಬದಲು ತೋಟವನ್ನು ತಂಪಾಗಿಟ್ಟುಕೊಳ್ಳಲು ರೈತರು ಆದ್ಯತೆ ನೀಡಬೇಕು, ಹೆಚ್ಚು ನೀರಾವರಿ ಸೌಲಭ್ಯ ಕಲ್ಪಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

-----------

ಮೇ ಮೊದಲ ಅಥವಾ ಎರಡನೆ ವಾರದಲ್ಲಿ ರೈತರು ಬೋರ್ಡೊ ದ್ರಾವಣ ಸಿಂಪಡಣೆ ಆರಂಭಿಸಬಹುದು. ಇದರಿಂದ ಅಡಿಕೆ ಮಿಳ್ಳೆಗಳನ್ನು ಉಳಿಸಿಕೊಳ್ಳಬಹುದು.

ಸತೀಶ ಹೆಗಡೆ,ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.