
ಭಟ್ಕಳ: ಮುರುಡೇಶ್ವರದಲ್ಲಿ ಶಿವರಾತ್ರಿ ಪ್ರಯುಕ್ತ ಫೆಬ್ರುವರಿ 15ರಂದು ಸಂಜೆ 6 ಗಂಟೆಯಿಂದ ಬೆಳಗಿನ ಜಾವ 6 ಗಂಟೆ ವರೆಗೆ ಶಿವರಾತ್ರಿ ಜಾಗರಣೆ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಮುರುಡೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಮಧ್ಯಾಹ್ನ ಅಧಿಕಾರಿಗಳು ಮತ್ತು ಊರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಸರಕಾರದಿಂದ ಶಿವರಾತ್ರಿ ಜಾಗರಣೆ ಉತ್ಸವಕ್ಕೆ ₹ 50 ಲಕ್ಷ ಅನುದಾನ ಬಂದಿದೆ. ಈ ಸಲವೂ ಅನುದಾನ ಬರುವ ನಿರೀಕ್ಷೆ ಇದೆ ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಮಾತನಾಡಿ, ಶಿವರಾತ್ರಿ ಜಾಗರಣೆ ಉತ್ಸವವಕ್ಕೆ ಸಾರಿಗೆ, ವಸತಿ, ಸುರಕ್ಷತೆ, ಭದ್ರತೆ ಹಾಗೂ ಸ್ವಚ್ಛತೆಗೆ ಪ್ರಮುಖ ಆದ್ಯತೆ ಕೊಡಲಾಗಿದೆ ಎಂದರು. ಪ್ರಮುಖ ಕೃಷ್ಣ ನಾಯ್ಜ ಜಮೀನ್ದಾರ್ ಮಾತನಾಡಿ, ಸಚಿವರು ಮುರುಡೇಶ್ವರದ ಅಭಿವೃದ್ಧಿಗೆ ಮತ್ತು ಶಿವರಾತ್ರಿ ಜಾಗರಣೆ ಆಚರಣೆಗೆ ಖಾಯಂ ಸಮಿತಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು. ಹಿರಿಯ ಮುಖಂಡ ಎಸ್ ಎಸ್ ಕಾಮತ್ ಮಾತನಾಡಿ, ಶಿವರಾತ್ರಿ ಪೂರ್ವಭಾವಿಯಾಗಿ ಮುರುಡೇಶ್ವರದಲ್ಲಿ ಫೆ. 9 ರಂದು ಸ್ವಚ್ಛತಾ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದರು.
ಶಂಕರ ಭಟ್ರಹಿತ್ಲು ಮಾತನಾಡಿ, ಶಿವರಾತ್ರಿ ಜಾಗರಣೆ ಉತ್ಸವ ವರ್ಷಂಪ್ರತಿ ಆಚರಿಸಲು ಸಮಿತಿ ರಚಿಸಬೇಕೆಂದರು. ಇದಕ್ಕುತ್ತರಿಸಿದ ಸಚಿವರು ಕೂಡಲೇ ಎಲ್ಲಾ ಸಮಾಜದವರನ್ನೊಳಗೊಂಡ ಶಿವರಾತ್ರಿ ಜಾಗರಣೆ ಉತ್ಸವ ಸಮಿತಿ ರಚಿಸಿ ಇದನ್ನು ಶಿವರಾತ್ರಿ ಹಬ್ಬದ ಜಾಗರಣೆ ಉತ್ಸವದಂದು ಘೋಷಿಸುವುದಾಗಿ ಹೇಳಿದರು.
ಶಿವರಾತ್ರಿ ಜಾಗರಣೆಯ ಪೂರ್ವಭಾವಿಯಾಗಿ ಆಯೋಜಿಸಿರುವ ಕ್ರೀಡಾ ಚಟುವಟಿಕೆ, ಆದರ್ಶ ದಂಪತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಎಸ್ಪಿ ದೀಪನ್ ಎಂ ಎನ್, ಪ್ರವಾಸೋದ್ಯಮ ನಿರ್ದೇಶಕಿ ಮಂಗಳಗೌರಿ ಭಟ್, ಮುರುಡೇಶ್ವರ ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೇಶಕಿ ಪುಷ್ಪಲತಾ ವೈದ್ಯ, ಮಾವಳ್ಳಿ ಗ್ರಾಪಂ1ರ ಅಧ್ಯಕ್ಷೆ ನಯನಾ ನಾಯ್ಕ, ಮಾವಳ್ಳಿ ಗ್ರಾಪಂ 2ರ ಅಧ್ಯಕ್ಷೆ ನಾಗರತ್ನ ಪಡಿಯಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ಮಂಜುನಾಥ ನಾಯ್ಕ, ಗಜಾನನ ನಾಯ್ಕ, ಸುಬ್ರಾಯ ನಾಯ್ಕ, ನಾಗೇಶ ನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.