
ಭಟ್ಕಳ: ಪಟ್ಟಣದ ಪಾಲಿನ ಬ್ರ್ಯಾಂಡ್ ಸ್ಥಳ ಎನಿಸಿದ್ದ ‘ಶಂಸುದ್ದೀನ್ ವೃತ್ತ’ ಇನ್ನು ನೆನಪು ಮಾತ್ರ. 25 ವರ್ಷಗಳಿಂದ ಭಟ್ಕಳದ ಹೆಗ್ಗುರುತಿನ ಭಾಗವಾಗಿದ್ದ ವೃತ್ತ ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆಗೆ ಶನಿವಾರ ತೆರವುಗೊಂಡಿತು.
ಪಟ್ಟಣದ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗೆ ಪಟ್ಟಣದ ಪ್ರವೇಶದ್ವಾರದಂತೆ 25 ವರ್ಷಗಳ ಹಿಂದೆ ನಿರ್ಮಿಸಿದ್ದ ವೃತ್ತವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ವೃತ್ತದ ಕಮಾನು, ಗೋಲಗಳನ್ನು ತೆರವುಗೊಳಿಸುವುದನ್ನು ಕಂಡು ನೆರೆದಿದ್ದವರು ಭಾವುಕರಾದರು.
‘ಭಟ್ಕಳದ ಗುರುತಿಗೆ ಶಂಸುದ್ದೀನ್ ವೃತ್ತದ ಗೋಪುರ ತೋರಿಸುವುದು ವಾಡಿಕೆ ಎಂಬಂತೆ ಆಗಿತ್ತು. ವೃತ್ತದ ಮಧ್ಯದ ಗೋಪುರವನ್ನು ಸಂಪೂರ್ಣ ಒಡೆದು ಹಾಕಿ ತೆರವು ಮಾಡಲಾಗಿದೆ. ಪಟ್ಟಣದ ಹೆಗ್ಗುರುತುಗಳಲ್ಲಿ ಒಂದೆನಿಸಿದ್ದ ಸ್ಥಳ ಇನ್ನು ನೋಡಲು ಸಿಗದು’ ಎಂದು ಸ್ಥಳದಲ್ಲಿದ್ದವರೊಬ್ಬರು ಬೇಸರ ತೋಡಿಕೊಂಡರು.
ನಾಲ್ಕು ರಸ್ತೆ ಒಂದೆ ಕಡೆ ಸೇರುವ ಶಂಸುದ್ದೀನ್ ವೃತ್ತದಲ್ಲಿನ ಗೋಪುರ ರಸ್ತೆ ದಾಟುವ ಪಾದಚಾರಿಗಳಿಗೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತಿತ್ತು. ಭಟ್ಕಳದ ಪ್ರತಿಷ್ಠಿತ ಗೋಲ್ಡನ್ ಜುವೆಲ್ಲರ್ಸ್ ಆಭರಣ ಮಳಿಗೆ ಮಾಲಿಕರು ಅಂದಾಜು ₹12 ಲಕ್ಷ ವೆಚ್ಚದಲ್ಲಿ ಗೋಪುರ ನಿರ್ಮಿಸಿದ್ದರು. ತಮ್ಮ ಅಂಗಡಿಯ ಸಂಕೇತವಾಗಿ ಗೋಪುರದ ಮಧ್ಯದಲ್ಲಿ ವೃತ್ತಾಕಾರದ ಎರಡು ಬಳೆಗಳನ್ನು ಇರಿಸಿ ಸುತ್ತಲೂ ಲೈಟಿಂಗ್ ವ್ಯವಸ್ಥೆ ಕಲ್ಪಿಸಿದ್ದರು.
ಭಟ್ಕಳದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮೀಯರ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಆಯಾ ಸಮುದಾಯವರು ವೃತ್ತದ ಗೋಪುರವನ್ನು ಲೈಟಿಂಗ್ಸ್‌ನಿಂದ ಸಿಂಗರಿಸುತ್ತಿದ್ದರು.
‘ಭಟ್ಕಳಕ್ಕೆ ಹೊಸದಾಗಿ ಬರುವವವರಿಗೆ ಸ್ವಾಗತ ನೀಡುವ ಹಾಗೂ ಭಟ್ಕಳದ ಗುರುತು ಪರಿಚಯಿಸುವ ಈ ಗೋಪುರವನ್ನು 2001ರಲ್ಲಿ ನಿರ್ಮಿಸಲಾಗಿತ್ತು. ಸಾಮಾನ್ಯ ವೃತ್ತದಂತೆ ಇರದೆ ಆಕರ್ಷಕ ಎನಿಸುತ್ತಿತ್ತು. ರಾಷ್ಟ್ರೀಯ ಹಬ್ಬ ಹರಿದಿನಗಳ ಸಂದರ್ಭದಲ್ಲಿ ತಾಲ್ಲೂಕಾಡಳಿತದಿಂದ ಈ ಗೋಪುರಕ್ಕೆ ಅಲಂಕಾರ ಮಾಡಲಾಗುತ್ತಿತ್ತು. ವಿಜಯೋತ್ಸವ, ಪ್ರತಿಭಟನೆ ನಡೆಯುವುದಿದ್ದರೆ ಗೋಪುರವೇ ಕೇಂದ್ರ ಸ್ಥಳ ಆಗುತ್ತಿತ್ತು’ ಎಂದು ಸ್ಥಳೀಯರು ಹೇಳುತ್ತಾರೆ.
2001ರಲ್ಲಿ ಸ್ಥಾಪನೆಯಾಗಿದ್ದ ವೃತ್ತ ವೃತ್ತ ನಿರ್ಮಾಣಕ್ಕೆ ₹12 ಲಕ್ಷ ವೆಚ್ಚ ಜೆಸಿಬಿ ಬಳಸಿ ಕಮಾನು, ಗೋಲಗಳ ತೆರವು
ಭಟ್ಕಳದ ಮೆರಗು ಹೆಚ್ಚಿಸಲು 2002ರಲ್ಲಿ ನಮ್ಮ ಕುಟುಂಬದಿಂದ ಶಂಸುದ್ದೀನ್ ವೃತ್ತದ ಗೋಪುರವನ್ನು ನಿರ್ಮಿಸಲಾಗಿತ್ತು. ಈಗ ತೆರವು ಮಾಡಿರುವುದು ನಮಗೆ ಮಾತ್ರವಲ್ಲ ಸಮಸ್ತ ಭಟ್ಕಳಿಗರಿಗೆ ನಿರಾಸೆಯಾಗಿದೆಶಾಹಿಖ್ ಕೋಲಾ ಉದ್ಯಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.