ADVERTISEMENT

ಚಾರಣಿಗರ ನೆಚ್ಚಿನ ತಾಣ: ಭೀಮ ಬುಗುರಿ ಆಡುತ್ತಿದ್ದ ಕಲ್ಲು!

ಕಾರವಾರ ತಾಲ್ಲೂಕಿನ ತೋಡೂರು ಗ್ರಾಮದ ಕಾಡಿನಲ್ಲಿರುವ ಪ್ರಕೃತಿ ವಿಸ್ಮಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 14:56 IST
Last Updated 16 ಜುಲೈ 2022, 14:56 IST
ಕಾರವಾರ ತಾಲ್ಲೂಕಿನ ತೋಡೂರು ಗ್ರಾಮದ ಗುಡ್ಡದ ಮೇಲಿರುವ ಭೀಮನ ಬುಗುರಿ ಕಲ್ಲಿನ ಬಳಿ ತೆರಳಿರುವ ಪ್ರವಾಸಿಗರು(ಸಂಗ್ರಹ ಚಿತ್ರ)
ಕಾರವಾರ ತಾಲ್ಲೂಕಿನ ತೋಡೂರು ಗ್ರಾಮದ ಗುಡ್ಡದ ಮೇಲಿರುವ ಭೀಮನ ಬುಗುರಿ ಕಲ್ಲಿನ ಬಳಿ ತೆರಳಿರುವ ಪ್ರವಾಸಿಗರು(ಸಂಗ್ರಹ ಚಿತ್ರ)   

ಕಾರವಾರ: ಇದು ಬೆಟ್ಟದ ಮೇಲಿರುವ ಒಂಟಿ ಕಲ್ಲು. ಚಾರಣಿಗರ ನೆಚ್ಚಿನ ತಾಣ. ಕಾಡಿನ ನಡುವೆ ಇರುವ ಈ ಸ್ಥಳಕ್ಕೆ ಹೋಗುವುದೇ ವಿಶಿಷ್ಟ ಅನುಭವ.

ತಾಲ್ಲೂಕಿನ ತೋಡೂರು ಹತ್ತಿರದ ಭೀಮನ ಬುಗುರಿ, ನೈಸರ್ಗಿಕ ತಾಣವಾಗಿ ಆಕರ್ಷಿಸುತ್ತದೆ. ಇಲ್ಲಿರುವ ಏಕ ಶಿಲೆಯು ಬುಗುರಿಯಾಕಾರದಲ್ಲಿದೆ. ಅದನ್ನು ಭೀಮ ಬುಗುರಿಯಂತೆ ತಿರುಗಿಸುತ್ತಿದ್ದ ಎಂಬ ಉಲ್ಲೇಖ ಜನಪದರ ನಡುವೆ ಇದೆ. ಹಾಗಾಗಿಯೇ ಸ್ಥಳಕ್ಕೆ ಆ ಹೆಸರು ಬಂದಿರುವ ಸಾಧ್ಯತೆಯಿದೆ.

ಎತ್ತರದಲ್ಲಿರುವ ನೈಸರ್ಗಿಕ, ಕಲ್ಲಿನ ವೇದಿಕೆಯಲ್ಲಿ ಸುಮಾರು 30 ಅಡಿಗಳಷ್ಟು ಎತ್ತರದ ಶಿಲೆಯು ಲಂಬಾಕಾರದಲ್ಲಿ ನಿಂತಿದೆ. ಸುತ್ತಲೂ ಯಾವುದೇ ಕಲ್ಲು, ಮಣ್ಣಿನ ಬೆಂಬಲವಿಲ್ಲದೇ ನೇರವಾಗಿ ನಿಂತಿರುವುದು ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾಗಿದೆ.

ADVERTISEMENT

ಭೀಮನ ಬುಗುರಿಯ ಸುತ್ತ ಇನ್ನೂ ಹಲವು ದೊಡ್ಡ ಬಂಡೆಗಳು ಬಿದ್ದುಕೊಂಡಿವೆ. ಅಲ್ಲಿ ಗುಹೆ, ಕಂದಕಗಳಾಗಿವೆ. ಈ ಸ್ಥಳದಲ್ಲಿ ನಿಂತು ನೋಡಿದರೆ ದೂರದ ಅಮದಳ್ಳಿ, ಮುದಗಾ, ನೌಕಾನೆಲೆ ಕಾಣಿಸುತ್ತವೆ.

ಹೋಗುವುದು ಹೇಗೆ?:

ಭೀಮನ ಬುಗುರಿಯು ಕಾರವಾರದಿಂದ ಸುಮಾರು 23 ಕಿಲೋಮೀಟರ್ ದೂರದಲ್ಲಿದೆ. 17 ಕಿಲೋಮೀಟರ್ ದೂರದ ತೋಡೂರು ಕಾಲೊನಿ ತನಕ ವಾಹನದಲ್ಲಿ ಹೋಗಬಹುದು. ಅಲ್ಲಿಂದ ಕಡಿದಾದ ದಾರಿಯಲ್ಲಿ, ದಟ್ಟ ಕಾಡಿನ ನಡುವೆ ಸಾಗಬೇಕು. ಸುಮಾರು ಆರು ಕಿಲೋಮೀಟರ್ ಚಾರಣ ಮಾಡಬೇಕು. ಸಾವನಾಳ ಎಂಬ ಗ್ರಾಮದ ಮೂಲಕ ಸಾಗಿ ಈ ತಾಣವನ್ನು ಸೇರಬಹುದು.

ಬೇಳೂರು— ನಗೆ ಕೋವೆ, ಗುಡ್ಡಳ್ಳಿ ಮುಂತಾದ ಗ್ರಾಮಗಳಿಂದಲೂ ಇಲ್ಲಿಗೆ ಬರಬಹುದು. ದುರ್ಗಮ ದಾರಿಯಿರುವ ಕಾರಣ ಹಾದಿ ತಪ್ಪುವ ಸಾಧ್ಯತೆಯಿರುತ್ತದೆ. ಹಾಗಾಗಿ ಸ್ಥಳೀಯರ ಮಾರ್ಗದರ್ಶನ ಪಡೆಯುವುದು ಸೂಕ್ತ. ಮಳೆಗಾಲ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಬೇಸಿಗೆಯಲ್ಲಿ ಮಾತ್ರ ಚಾರಣ ಮಾಡಲು ಸುರಕ್ಷಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.