ADVERTISEMENT

ಪಾದಚಾರಿ, ದ್ವಿಚಕ್ರ ಸವಾರರ ಗೋಳು

ಒಳಚರಂಡಿಗೆ ಅಳವಡಿಸಿದ ಸಿಮೆಂಟ್ ಸ್ಲ್ಯಾಬ್‌ಗಳ ಕುಸಿತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 12:33 IST
Last Updated 20 ಜೂನ್ 2018, 12:33 IST
siddapura
siddapura   

ಸಿದ್ದಾಪುರ: ಎರಡು ಜಿಲ್ಲೆಗಳ ಕೇಂದ್ರಸ್ಥಾನವಾಗಿರುವ ಸಿದ್ದಾಪುರ ಬಸ್ ನಿಲ್ದಾಣ ಮೇಲ್ದರ್ಜೆಗೇರಿದ್ದರೂ ಚರಂಡಿ, ಗಟಾರ ಹಾಗೂ ರಸ್ತೆ ಅವ್ಯವಸ್ಥೆಯಿಂದಾಗಿ ಪಾದಚಾರಿಗಳು, ವಾಹನಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಬಸ್‌ನಿಂದಿಳಿದು ಅಂಗಡಿ ಮುಂಗಟ್ಟುಗಳಿಗೆ ತೆರಳುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಸ್ಥಿತಿ ಇಲ್ಲಿದೆ. ರಸ್ತೆ ಕಾಂಕ್ರಿದ್ದರೂ ಒಳಚರಂಡಿಗೆ ಅಲ್ಲಲ್ಲಿ ಅಳವಡಿಸಿದ ಸಿಮೆಂಟ್ ಸ್ಲ್ಯಾಬ್‌ಗಳು ಕುಸಿದು ರಸ್ತೆ ಹಾಗೂ ಚರಂಡಿಯ ವ್ಯತ್ಯಾಸವೇ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಸಾಗರ ಪ್ರದೇಶಕ್ಕೆ ಹೋಗುವ ಬಸ್, ಲಾರಿಗಳು ಸಿದ್ದಾಪುರ ಬಸ್ ನಿಲ್ದಾಣದ ಮೂಲಕವೇ ಹಾದುಹೋಗಬೇಕಿದೆ. ಪ್ರತಿನಿತ್ಯ ನೂರಾರು ಬಸ್‌ಗಳು, ಬೃಹತ್ ಟ್ರಕ್‌ಗಳು, ಖಾಸಗಿ ವಾಹನಗಳು ಓಡಾಡುತ್ತಿರುವ ಸಿದ್ದಾಪುರ ಬಸ್ ನಿಲ್ದಾಣ ಇತ್ತೀಚಿನ ದಿನಗಳಲ್ಲಿ ಮೇಲ್ದರ್ಜೆಗೇರಿಸಲ್ಪಿಟ್ಟಿತ್ತು. ಕಾಂಕ್ರಿಟೀಕರಣಗೊಂಡ ರಸ್ತೆಗಳು ವಿಸ್ತಾರಗೊಂಡಂತೆ ಸಿದ್ದಾಪುರ ಪೇಟೆಯಲ್ಲಿಯೂ ಸಹ ಅಂಗಡಿ ಮುಂಗಟ್ಟುಗಳ ಸಂಖ್ಯೆಯಲ್ಲಿಯೂ ಏರಿಕೆಯಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು , ಪ್ರಯಾಣಿಕರ ಸಂಖ್ಯೆ ಅಧಿಕಗೊಂಡು ಎರಡು ಜಿಲ್ಲೆಗಳ ಸಂಪರ್ಕದ ಕೇಂದ್ರಸ್ಥಾನವಾಗಿ ಸಿದ್ದಾಪುರ ಗುರುತಿಸಿಕೊಂಡಿದೆ.

ADVERTISEMENT

ಅಪಾಯ: ರಸ್ತೆ ಕಾಂಕ್ರಿಟೀಕರಣಗೊಂಡಿದೆ ಎಂದು ನಡೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ. ರಸ್ತೆ ಕಾಂಕ್ರೀಟಿಕರಣಗೊಂಡಾಗ ನಿರ್ಮಿಸಿದ ಒಳಚರಂಡಿಗೆ ಅಳವಡಿಸಿದ ಸ್ಲ್ಯಾಬ್‌ಗಳು ಅಲ್ಲಲ್ಲಿ ಕಿತ್ತುಹೋಗಿವೆ. ಕೆಲವು ಕಡೆಗಳಲ್ಲಿ ಸ್ಲ್ಯಾಬ್‌ಗಳು ತುಂಡಾಗಿ ಚರಂಡಿಯೊಳಗೆ ಬಿದ್ದಿದ್ದು ಅಪಾಯ ಕೈಬೀಸಿ ಕರೆಯುತ್ತಿವೆ. ಕೆಲವು ಕಡೆಗಳಲ್ಲಿ ಒಳಚರಂಡಿಗೆ ಅಳವಡಿಸಿದ ಚಾವಣಿ ಸಂಪೂರ್ಣ ಶಿಥಿಲವಾಗಿ ಗುಂಡಿಗಳಾಗಿ ಅದಕ್ಕೆ ಅಳವಡಿಸಿದ ಕಬ್ಬಿಣದ ಸರಳುಗಳು ಕಾಣುತ್ತಿವೆ. ಎಲ್ಲಿಯಾದರೂ ನಡೆದುಕೊಂಡು ಹೋಗುವಾಗ ಎಚ್ಚರ ತಪ್ಪಿದರೂ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

ಒಳಚರಂಡಿಗೆ ಅಳವಡಿಸಿದ ಸ್ಲ್ಯಾಬ್‌ಗಳು ತುಂಡಾಗಿ ಚರಂಡಿಯೊಳಗೆ ಸೇರಿಕೊಂಡಿರುವ ಪರಿಣಾಮ ಮಳೆಯ ನೀರು ಸರಾಗವಾಗಿ ಹರಿದುಕೊಂಡು ಹೋಗುವುದಿಲ್ಲ. ಬೃಹತ್ ಮಳೆಗೆ ಮಳೆಯ ನೀರು ರಸ್ತೆಯ ಮೇಲೆ ಹರಿಯುವುದರಿಂದ ರಸ್ತೆ, ಚರಂಡಿಯ ಸಮತಟ್ಟಾಗಿರುತ್ತದೆ. ಆಧುನಿಕತೆಯ ಪರಿಣಾಮವಾಗಿ ಕೈಯಲ್ಲಿ ಮೊಬೈಲ್ ಹಿಡಿದು ಮಾತನಾಡುತ್ತಾ ಸಾಗುತ್ತಿದ್ದಾಗ ಚರಂಡಿಯೊಳಗೆ ಬಿದ್ದು ಅಪಾಯ ತಂದುಕೊಂಡಿರದ್ದಾರೆ. ರಸ್ತೆ ಚೆನ್ನಾಗಿರುವ ಪರಿಣಾಮ ಚರಂಡಿಯ ಅಪಾಯವನ್ನರಿಯದೆ ವಾಹನಗಳು ಸಾಗಿದಾಗ ಚರಂಡಿಯೊಳಗೆ ಬಿದ್ದಿದ್ದರು. ದಿನಂಪ್ರತಿ ಸಾವಿರಾರು ಮಂದಿ ಓಡಾಡುವ ಸಿದ್ದಾಪುರ ಪೇಟೆಯಲ್ಲಿಯೆ ಪಾದಚಾರಿಗಳಿಗೆ ಅಪಾಯ ಸಂಭವಿಸಲಬಹುದಾಗಿದೆ. ಸರಿಪಡಿಸದಿರುವುದು ಮಾತ್ರ ದುರಂತ.

ಕಾಂಕ್ರಿಟ್ ರಸ್ತೆ ಇಕ್ಕೆಲದಲ್ಲಿ ಮಣ್ಣು ಹಾಕದ ಪರಿಣಾಮ ದ್ವಿಚಕ್ರ ಸವಾರರು ಸ್ಕಿಡ್ ಆಗಿ ಬೀಳುವ ಸಾಧ್ಯತೆ ಅಧಿಕವಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕು
– ಭಾಸ್ಕರ ಶೆಟ್ಟಿ ಚೀನಾಬೇರು,ಸ್ಥಳೀಯ ನಿವಾಸಿ

ಸಂದೇಶ್ ಶೆಟ್ಟಿ ಆರ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.