ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಅವರಿಗೆ ಉಪಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಹುಮ್ಮಸ್ಸು ಇದೆ. ಇದೇ ಉತ್ಸಾಹದಲ್ಲಿ ಅವರು ಪ್ರಜಾವಾಣಿಗೆ ವಿಶೇಷ ಸಂದರ್ಶನ ನೀಡಿದರು.
* ಮಧ್ಯಂತರ ಚುನಾವಣೆಗೆ ನೀವು ಕಾರಣರಾದಿರಿ ಎಂಬ ಅಸಮಾಧಾನ ಜನರಲ್ಲಿದೆ. ಹೇಗೆ ಸಮರ್ಥಿಸಿಕೊಳ್ಳುತ್ತೀರಿ?
ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾರಣ ಎಂಬ ಭಾವನೆ ಜನರಲ್ಲಿದೆ. ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಎಲ್ಲೂ ಜನರು ಯಾಕಾಗಿ ರಾಜೀನಾಮೆ ಕೊಟ್ಟಿದ್ದೀರಿ ಎಂದು ಕೇಳಿಲ್ಲ. ಯಾಕೆ ಚುನಾವಣೆ ಬಂತು ಎಂದೂ ಕೇಳಿಲ್ಲ.
* ಈ ಉಪಚುನಾವಣೆಗೆ ಕಾರಣರಾಗುವಮೂಲಕ ನೀವು ಕ್ಷೇತ್ರದ ಜನರಿಗೆ ದ್ರೋಹ ಮಾಡಿದಂತಾಗಿಲ್ಲವೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ವಿಶೇಷ ಉದಾಹರಣೆ ಅಲ್ಲ. ಇಂತಹ ಅನೇಕ ಸಂದರ್ಭಗಳು ಈ ಹಿಂದೆ ಘಟಿಸಿವೆ.
* ಪ್ರವಾಹಕ್ಕೆ ತುತ್ತಾಗಿರುವ ಕ್ಷೇತ್ರ ಇದು. ಇಲ್ಲಿ ಮತ್ತೆ ಚುನಾವಣೆ ಬೇಕಿತ್ತಾ?
ಈಗೇನು ನೆರೆ ಇಲ್ಲವಲ್ಲ. ನೆರೆಯಲ್ಲಿ ನಷ್ಟವಾಗಿರುವುದನ್ನು ಸರಿದೂಗಿಸುವ ಕಾರ್ಯಗಳು ಆಗುತ್ತಿವೆ. ಜನರಿಗೆ ಪರಿಹಾರವೂ ಸಿಗುತ್ತಿದೆ. ನನ್ನ ಕ್ಷೇತ್ರದಲ್ಲಿ ನೆರೆಯಿಂದ ಆಗಿರುವ ಹಾನಿಗೆ ₹ 43 ಕೋಟಿ ನೆರವು ತಂದಿದ್ದೇನೆ. ಒಡೆದಿದ್ದ ಚಿಗಳ್ಳಿ ಅಣೆಕಟ್ಟು ಮರುನಿರ್ಮಾಣ ಕಾರ್ಯ ₹ 9 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ನಾಲ್ಕು ಸೇತುವೆಗಳು ಹಾಳಾಗಿದ್ದವು. ಅವುಗಳ ಕಾಮಗಾರಿ ಕೂಡ ನಡೆಯುತ್ತಿದೆ. ಏನು ಆಗಬೇಕೊ ಅವೆಲ್ಲವೂ ನಡೆಯುತ್ತಲೇ ಇವೆ.
* ಯಾವ ವಿಚಾರ ಮುಂದಿಟ್ಟು ಮತ ಕೇಳಲು ಜನರ ಮುಂದೆ ಹೋಗುತ್ತೀರಿ?
ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಆಗಿರುವ ಅನ್ಯಾಯ. ಮೈಸೂರು, ಮಂಡ್ಯ, ಹಾಸನ, ತುಮಕೂರಿಗೆ ಅನುದಾನಗಳೆಲ್ಲವೂ ಹೋಗುತ್ತಿದ್ದವು. ಕೆಲವರಿಗೆ ಮಾತ್ರ ಈ ಸರ್ಕಾರ ಎನ್ನುವ ಪರಿಸ್ಥಿತಿಯನ್ನು ಸಚಿವ ಸಂಪುಟ ನಿರ್ಮಾಣ ಮಾಡಿದ್ದರಿಂದ, ನಾವು ಕ್ಷೇತ್ರದ ಅಭಿವೃದ್ಧಿಗಾಗಿ ಚುನಾವಣೆಗೆ ಹೋಗಬೇಕಾಯಿತು.
* ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವ ತೃಪ್ತಿ ಇದೆಯೇ ?
ನೂರಕ್ಕೆ 110 ಪ್ರತಿಶತ ಸಮಾಧಾನವಿದೆ. ಅದೇ ನನಗಿರುವ ಧೈರ್ಯ ಕೂಡ. ಆ ಕಾರಣಕ್ಕಾಗಿಯೇ ನಾನು ಜನರನ್ನು ಎದುರಿಸುತ್ತೇನೆ.
ಇದನ್ನೂ ಓದಿ:ಯಲ್ಲಾಪುರ– ಜಾತಿ ಲೆಕ್ಕಾಚಾರದಲ್ಲಿ ಮತ ಹೊಂಚು
* ಜನ ಯಾಕಾಗಿ ನಿಮ್ಮನ್ನು ಪುನರಾಯ್ಕೆ ಮಾಡಬೇಕು?
ನಾನೊಬ್ಬ ಒಳ್ಳೆಯ ಅಭ್ಯರ್ಥಿ, ಒಳ್ಳೆಯ ಕೆಲಸಗಾರ ಎನ್ನುವ ಕಾರಣಕ್ಕಾಗಿ, ಬಡವರನ್ನು ಪ್ರೀತಿಯಿಂದ ನೋಡುತ್ತಾನೆ. ಎಂತಹ ಕಷ್ಟದಲ್ಲಿದ್ದವರನ್ನೂ ಮಾತನಾಡಿಸುತ್ತಾನೆ ಎನ್ನುವ ಕಾರಣಕ್ಕೆ ಜನರು ನನ್ನನ್ನು ಆಯ್ಕೆ ಮಾಡುವ ವಿಶ್ವಾಸವಿದೆ.
* ನಿರೀಕ್ಷಿಸಿದಷ್ಟು ಕಾರ್ಯಕರ್ತರು ನಿಮ್ಮ ಜೊತೆ ಬಿಜೆಪಿಗೆ ಬಂದ ಹಾಗಿಲ್ಲವಲ್ಲ...
ಡಿ.9ರ ಫಲಿತಾಂಶದ ದಿನ ಮತಪೆಟ್ಟಿಗೆ ಒಡೆದಾಗ ಕಾಂಗ್ರೆಸ್ ಕಾರ್ಯಕರ್ತರಿಗೆ ಇದರ ಅರಿವಾಗಬಹುದು.
* ಆಯ್ಕೆಯಾದರೆ ಕ್ಷೇತ್ರದಲ್ಲಿ ಪ್ರಮುಖ ಆದ್ಯತೆ...?
ದೇಶಕ್ಕೆ ಅನ್ನಕೊಡುವ ಅನ್ನದಾತ ಸುಖವಾಗಿರಲು ಬೇಕಾದ ಎಲ್ಲ ಯೋಜನೆಗಳೂ ನನ್ನ ಆದ್ಯತೆಗಳೇ. ಕೃಷಿ, ಶಿಕ್ಷಣ, ಆರೋಗ್ಯ ಈ ಮೂರು ವಿಚಾರವಾಗಿ ವಿಶೇಷ ಲಕ್ಷ್ಯವಹಿಸುತ್ತೇನೆ. ಬಡವರಿಗೆ ಆರೋಗ್ಯ ಸಿಗಬೇಕು. ಕಟ್ಟಕಡೆಯ ಮನುಷ್ಯನಿಗೆ ಶಿಕ್ಷಣ ಸಿಗಬೇಕು. ಅನ್ನದಾತನ ರಕ್ಷಣೆಯಾಗಬೇಕು.
ಇದನ್ನೂ ಓದಿ:ಯಲ್ಲಾಪುರ–ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಜೆಡಿಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.