ADVERTISEMENT

ಕಾಳುಮೆಣಸು: ಸಂಸ್ಕರಣಾ ಸಂಕಷ್ಟಕ್ಕೆ ಮುಕ್ತಿ

ಮೊದಲ ಬಾರಿಗೆ ಹಸಿ ಕಾಳುಮೆಣಸು ನೇರ ಟೆಂಡರ್ ಆರಂಭ

ರಾಜೇಂದ್ರ ಹೆಗಡೆ
Published 11 ಫೆಬ್ರುವರಿ 2026, 7:24 IST
Last Updated 11 ಫೆಬ್ರುವರಿ 2026, 7:24 IST
ಶಿರಸಿಯ ಟಿಎಸ್ಎಸ್ ವ್ಯಾಪಾರಿ ಅಂಗಳದಲ್ಲಿ ನೇರ ಟೆಂಡರ್ ವ್ಯವಸ್ಥೆಯಡಿ ಮಾರಾಟಕ್ಕೆ ಬಂದ ಹಸಿ ಕಾಳುಮೆಣಸು
ಶಿರಸಿಯ ಟಿಎಸ್ಎಸ್ ವ್ಯಾಪಾರಿ ಅಂಗಳದಲ್ಲಿ ನೇರ ಟೆಂಡರ್ ವ್ಯವಸ್ಥೆಯಡಿ ಮಾರಾಟಕ್ಕೆ ಬಂದ ಹಸಿ ಕಾಳುಮೆಣಸು   

ಶಿರಸಿ: ಕಾಳುಮೆಣಸಿನ ಕೊಯ್ಲು ಹಂಗಾಮು ಆರಂಭವಾಗುತ್ತಿದ್ದಂತೆ, ರೈತರು ಎದುರಿಸುತ್ತಿದ್ದ ಸಂಸ್ಕರಣಾ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಇಲ್ಲಿನ ತೋಟಗಾರ್ಸ್ ಸೇಲ್ ಸೊಸೈಟಿ (ಟಿಎಸ್ಎಸ್) ಹಸಿ ಕಾಳುಮೆಣಸನ್ನು ನೇರವಾಗಿ ಟೆಂಡರ್ ಮೂಲಕ ಮಾರಾಟ ಮಾಡಲು ವಿಶೇಷ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಮಲೆನಾಡು ಭಾಗದ ರೈತರು ತಮ್ಮ ಉತ್ಪನ್ನಕ್ಕೆ ಹೆಚ್ಚಿನ ಶ್ರಮವಿಲ್ಲದೆ ಸ್ಪರ್ಧಾತ್ಮಕ ಬೆಲೆ ಪಡೆಯಲು ಸಾಧ್ಯವಾಗುತ್ತಿದೆ.

ಸಾಮಾನ್ಯವಾಗಿ ಕಾಳುಮೆಣಸನ್ನು ಕೊಯ್ದ ನಂತರ ಅದರ ಕರೆಯಿಂದ ಕಾಳನ್ನು ಬೇರ್ಪಡಿಸುವುದು ಮತ್ತು ಸರಿಯಾದ ಹದಕ್ಕೆ ಒಣಗಿಸುವುದು ರೈತರಿಗೆ ದೊಡ್ಡ ತಲೆನೋವಿನ ಕೆಲಸ. ಪ್ರಸ್ತುತ ಮಲೆನಾಡು ಭಾಗದಲ್ಲಿ ಕೃಷಿ ಕೂಲಿ ಕಾರ್ಮಿಕರ ತೀವ್ರ ಅಭಾವ ಎದುರಾಗಿದೆ. ಕಾಳುಮೆಣಸನ್ನು ಮರದಿಂದ ಇಳಿಸಲು ಪರಿಣತ ಏಣಿಯಾಳುಗಳ ಅವಶ್ಯಕತೆಯಿದ್ದು, ಅವರ ದಿನಗೂಲಿ ದರ ಗಣನೀಯವಾಗಿ ಏರಿಕೆಯಾಗಿದೆ. ಕಾಳುಮೆಣಸನ್ನು ವೈಜ್ಞಾನಿಕವಾಗಿ ಒಣಗಿಸದಿದ್ದರೆ ಶಿಲೀಂದ್ರ ಬಾಧೆ ಅಥವಾ ಬಣ್ಣ ಬದಲಾವಣೆಯಾಗಿ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುವ ಸಂಭವವಿರುತ್ತದೆ. ವಿಶೇಷವಾಗಿ ಅಕಾಲಿಕ ಮಳೆ ಅಥವಾ ಮೋಡ ಕವಿದ ವಾತಾವರಣವಿದ್ದಾಗ ಒಣಗಿಸುವುದು ಸವಾಲಿನ ಕೆಲಸ. ಒಣಗಿಸುವ ಪ್ರಕ್ರಿಯೆ ಕುಂಠಿತಗೊಂಡರೆ ಕಾಳುಮೆಣಸಿನ ಬಣ್ಣ ಮತ್ತು ಗುಣಮಟ್ಟ ಕೆಡುವ ಭೀತಿಯೂ ಇರುತ್ತದೆ. ಇಂತಹ ಅಡಚಣೆಗಳನ್ನು ಗಮನಿಸಿದ ಟಿಎಸ್ಎಸ್ ಸಂಸ್ಥೆಯು, ಭಾನುವಾರ ಹೊರತುಪಡಿಸಿ ಪ್ರತಿದಿನ ಹಸಿ ಕಾಳುಮೆಣಸಿನ ನೇರ ಮಾರಾಟಕ್ಕೆ ವ್ಯವಸ್ಥೆ ಮಾಡಿದೆ.

‘ಮಾರುಕಟ್ಟೆಯಲ್ಲಿ ಹಸಿ ಕಾಳುಮೆಣಸಿನ ಕರೆಗೆ ಪ್ರತಿ ಕ್ವಿಂಟಲ್‌ಗೆ ₹18 ಸಾವಿರದಿಂದ ₹21 ಸಾವಿರದವರೆಗೆ ಧಾರಣೆ ಲಭ್ಯವಾಗುತ್ತಿದೆ. ಇಳುವರಿಯ ಲೆಕ್ಕಾಚಾರದ ಪ್ರಕಾರ, ಸುಧಾರಿತ ತಳಿಯ ಒಂದು ಕ್ವಿಂಟಲ್ ಹಸಿ ಕಾಳುಮೆಣಸಿನಿಂದ ಸುಮಾರು 30 ರಿಂದ 33 ಕೆಜಿಯಷ್ಟು ಒಣಗಿದ ಮೆಣಸು ಪಡೆಯಬಹುದು. ಆದರೆ, ಒಣಗಿಸುವ ಹಂತದಲ್ಲಿ ಆಗುವ ತೂಕದ ನಷ್ಟ ಮತ್ತು ಕೂಲಿ ಪ್ರಕ್ರಿಯೆಗಳಿಗೆ ತಗಲುವ ವೆಚ್ಚ ಮತ್ತು ಶ್ರಮ ರೈತರ ಲಾಭಾಂಶವನ್ನು ಕುಂಠಿತಗೊಳಿಸುತ್ತಿತ್ತು. ಟಿಎಸ್‌ಎಸ್ ಆರಂಭಿಸಿರುವ ನೇರ ಟೆಂಡರ್ ಪ್ರಕ್ರಿಯೆಯಿಂದಾಗಿ ರೈತರು ಈ ಎಲ್ಲಾ ಸಂಸ್ಕರಣಾ ವೆಚ್ಚಗಳಿಂದ ಮುಕ್ತವಾಗಿ ಹಸಿ ಮೆಣಸನ್ನೇ ನೇರವಾಗಿ ಮಾರಾಟ ಮಾಡಿ ಆರ್ಥಿಕವಾಗಿ ಲಾಭ ಕಂಡುಕೊಳ್ಳುತ್ತಿದ್ದಾರೆ. ಇದರಿಂದ ಶ್ರಮ ತಪ್ಪುವುದಲ್ಲದೆ ತಕ್ಷಣವೇ ಹಣ ಕೈಗೆ ಸೇರುತ್ತಿದೆ’ ಎನ್ನುತ್ತಾರೆ ಬೆಳೆಗಾರ ಕೃಷ್ಣಮೂರ್ತಿ ಹೆಗಡೆ. 

ADVERTISEMENT

‘ಇತ್ತೀಚಿನ ವರ್ಷಗಳಲ್ಲಿ ಕಾಳುಮೆಣಸು ಕೊಯ್ಲಿನ ದರ ಗಣನೀಯವಾಗಿ ಏರಿಕೆಯಾಗಿದೆ. ಹಸಿ ಅಡಿಕೆ ಮಾರಾಟಕ್ಕೆ ತರುವ ರೈತರು ತಮ್ಮ ತೋಟದ ಕಾಳುಮೆಣಸನ್ನು ಸಂಸ್ಕರಿಸಲು ಆಳುಗಳಿಲ್ಲದೆ ಕಷ್ಟಪಡುತ್ತಿದ್ದರು. ಹಸಿ ಅಡಿಕೆ ಟೆಂಡರ್ ಮಾದರಿಯಲ್ಲೇ ಕಾಳುಮೆಣಸಿನಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದ್ದು, ರೈತರಿಂದ ಈಗಾಗಲೇ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ’ ಎನ್ನುತ್ತಾರೆ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ.

ಈಗಾಗಲೇ ಸುಮಾರು 100 ಕ್ವಿಂಟಲ್‌ಗೂ ಅಧಿಕ ಹಸಿ ಕಾಳುಮೆಣಸು ವಹಿವಾಟು ನಡೆಸುವ ಮೂಲಕ ಈ ವ್ಯವಸ್ಥೆ ರೈತಸ್ನೇಹಿಯಾಗಿದೆ ಎಂಬುದನ್ನು ಸಾಕ್ಷೀಕರಿಸಿದೆ.
– ಗೋಪಾಲಕೃಷ್ಣ ವೈದ್ಯ, ಟಿಎಸ್ಎಸ್ ಅಧ್ಯಕ್ಷ

ಸಮಯ ಶ್ರಮ ಉಳಿತಾಯ

‘ನಾವು ಹೊರ ಊರಿನಲ್ಲಿ ಕೆಲಸ ಮಾಡಿಕೊಂಡಿದ್ದರೂ ಊರಿನಲ್ಲಿರುವ ತೋಟದ ನಿರ್ವಹಣೆ ಮಾಡುತ್ತಿದ್ದೇವೆ. ಕಾಳುಮೆಣಸು ಕೊಯ್ದ ಮೇಲೆ ಅದನ್ನು ಸಂಸ್ಕರಿಸಿ ಬೇಯಿಸಿ ಹದವಾಗಿ ಒಣಗಿಸಿ ಪೇಟೆಗೆ ತರುವುದು ಸಮಸ್ಯೆಯಾಗುತ್ತಿತ್ತು. ಈಗಾಗಲೇ ನಾವು ಅಡಿಕೆಯನ್ನು ಹಸಿ ರೂಪದಲ್ಲೇ ಟೆಂಡರ್‌ಗೆ ನೀಡುತ್ತಿದ್ದೆವು. ಈಗ ಟಿ.ಎಸ್.ಎಸ್. ಕಾಳುಮೆಣಸನ್ನೂ ಅದೇ ಮಾದರಿಯಲ್ಲಿ ಖರೀದಿ ಮಾಡುತ್ತಿರುವುದು ನಮ್ಮಂತಹ ಪರ ಊರಿನಲ್ಲಿದ್ದು ತೋಟ ನಿರ್ವಹಿಸುವವರಿಗೆ ವರದಾನವಾಗಿದೆ. ಸಮಯ ಶ್ರಮ ಉಳಿತಾಯವಾಗುವುದಲ್ಲದೆ ಆರ್ಥಿಕವಾಗಿಯೂ ಇದು ಹೆಚ್ಚು ಅನುಕೂಲಕರವಾಗಿದೆ’ ಎಂಬುದು ಹೊರ ಊರಿನಿಂದ ತೋಟ ನಿರ್ವಹಿಸುವ ಅನಿವಾಸಿ ಬೆಳೆಗಾರರ ಮಾತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.