ADVERTISEMENT

ಹೊನ್ನಾವರದ ಇಕೊ ಬೀಚ್: ಮೂರನೇ ಬಾರಿ 'ಬ್ಲೂ ಫ್ಲ್ಯಾಗ್' ಮನ್ನಣೆ

ಅಂತರರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತು

ಸದಾಶಿವ ಎಂ.ಎಸ್‌.
Published 17 ಅಕ್ಟೋಬರ್ 2022, 19:31 IST
Last Updated 17 ಅಕ್ಟೋಬರ್ 2022, 19:31 IST
ಹೊನ್ನಾವರ ತಾಲ್ಲೂಕಿನ ಕಾಸರಕೋಡಿನ ‘ಬ್ಲೂ ಫ್ಲ್ಯಾಗ್’ ಕಡಲತೀರ
ಹೊನ್ನಾವರ ತಾಲ್ಲೂಕಿನ ಕಾಸರಕೋಡಿನ ‘ಬ್ಲೂ ಫ್ಲ್ಯಾಗ್’ ಕಡಲತೀರ   

ಕಾರವಾರ: ಹೊನ್ನಾವರದ ಕಾಸರಕೋಡು ಇಕೊ ಬೀಚ್‌ಗೆ, ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಮನ್ನಣೆಯನ್ನು ಸತತ ಮೂರನೇ ವರ್ಷ ಪಡೆದುಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ಮೂಲಕ ಕಡಲತೀರವು ಅಂತರರಾಷ್ಟ್ರೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ಮತ್ತೊಮ್ಮೆ ಗುರುತಿಸಿಕೊಂಡಿದೆ.

ಡೆನ್ಮಾರ್ಕ್‌ನ ಕೋಪನ್‌ ಹೆಗನ್‌ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಜಾಗತಿಕ ಮಟ್ಟದಲ್ಲಿ ಈ ಮನ್ನಣೆಯನ್ನು ನೀಡುತ್ತದೆ. ಈ ಹೆಗ್ಗಳಿಕೆಯನ್ನು ಪಡೆದುಕೊಳ್ಳಲು ಸ್ಥಳೀಯ ಆಡಳಿತವು ಕಡಲತೀರದ ಸ್ವಚ್ಛತೆ, ಅಲ್ಲಿನ ನೀರಿನ ಗುಣಮಟ್ಟ, ಪರಿಸರ ಸ್ನೇಹಿ ನಿರ್ಮಾಣಗಳು 33 ವಿಭಾಗಗಳಲ್ಲಿ ನಿಗದಿ ಮಾಡಲಾದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಕಾಸರಕೋಡಿನ ಕಡಲತೀರದ ‘ಬ್ಲೂ ಫ್ಕ್ಯಾಗ್’ ಅನ್ನು 2020ರ ಡಿ.28ರಂದು ಉದ್ಘಾಟಿಸಲಾಗಿತ್ತು. ಇದೇ ರೀತಿ, ಉಡುಪಿ ಜಿಲ್ಲೆಯ ಪಡುಬಿದ್ರಿ ಕಡಲತೀರಕ್ಕೂ ಮನ್ನಣೆ ನೀಡಲಾಗಿತ್ತು. ಅಲ್ಲಿನ ಕಡಲತೀರ ಕೂಡ ಈ ವರ್ಷವೂ ‘ಬ್ಲೂ ಫ್ಲ್ಯಾಗ್’ ಪಡೆದುಕೊಂಡಿದೆ.

ADVERTISEMENT

ಸವಾಲಾಗಿದ್ದ ನಿರ್ವಹಣೆ:ಕಾಸರಕೋಡು ಕಡಲತೀರಕ್ಕೆ ಅಂತರರಾಷ್ಟ್ರೀಯ ಮನ್ನಣೆಯನ್ನು ಉಳಿಸಿಕೊಳ್ಳುವುದು ಈ ಬಾರಿ ಸವಾಲಿನ ಕಾರ್ಯವಾಗಿತ್ತು. ಸಮೀಪದ ಟೊಂಕಾದಲ್ಲಿ ಉದ್ದೇಶಿತ ವಾಣಿಜ್ಯ ಬಂದರು ಕಾಮಗಾರಿಯ ಭಾಗವಾಗಿ ರಸ್ತೆಯೊಂದನ್ನು ನಿರ್ಮಿಸಲು ಮುಂದಾಗಿದ್ದು ಇಕೊ ಬೀಚ್‌ನ ಮಾನ್ಯತೆಗೆ ಧಕ್ಕೆ ಉಂಟು ಮಾಡುವ ಆತಂಕ ಎದುರಾಗುವಂತೆ ಮಾಡಿತ್ತು.

‘ಬ್ಲೂ ಫ್ಲ್ಯಾಗ್’ ಕಡಲತೀರ ಎಂದು ಗುರುತಿಸಲಾದ ಪ್ರದೇಶದ ಅತ್ಯಂತ ಸಮೀಪದಲ್ಲೇ ಈ ರಸ್ತೆ ನಿರ್ಮಾಣ ಆರಂಭಿಸಲಾಗಿತ್ತು. ಚಿರೆಕಲ್ಲು ಮಣ್ಣು, ಜಲ್ಲಿ ಕಲ್ಲುಗಳನ್ನು ಕಡಲತೀರಕ್ಕೆ ಸುರಿಯಲಾಗಿತ್ತು. ಇದರಿಂದ ಸಮುದ್ರದ ನೀರು ಕಲುಷಿತವಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಕೆಲವರು, ಕೋಪನ್‌ಹೆಗನ್‌ನಲ್ಲಿರುವ ‘ಬ್ಲೂ ಫ್ಯಾಗ್’‌ನ ಅಂತರರಾಷ್ಟ್ರೀಯ ನಿರ್ದೇಶಕರಿಗೆ ಈ ವರ್ಷ ಜನವರಿಯಲ್ಲಿ ಪತ್ರ ಬರೆದಿದ್ದರು.

ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜಯಂತ್, ಕಾಳಜಿ ವಹಿಸಿ ಅಂತರರಾಷ್ಟ್ರೀಯ ಮನ್ನಣೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಬೀಚ್ ವಾಲಿಬಾಲ್ 28ರಿಂದ:ಕಾಸರಕೋಡಿನ ಇಕೊ ಬೀಚ್‌ಗೆ ‘ಬ್ಲೂ ಫ್ಲ್ಯಾಗ್’ ಮನ್ನಣೆ ದೊರಕಿದ ಬಳಿಕ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ವಾರಾಂತ್ಯಗಳಲ್ಲಿ ದಿನವೊಂದಕ್ಕೆ ಸ್ಥಳೀಯರು ಹಾಗೂ ಬೇರೆ ಬೇರೆ ಊರುಗಳಿಂದ ನಾಲ್ಕರಿಂದ ಐದು ಸಾವಿರ ಜನ ಕಡಲತೀರಕ್ಕೆ ಭೇಟಿ ನೀಡುತ್ತಿದ್ದಾರೆ.

ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು, ಅ.28ರಿಂದ 30ರ ತನಕ ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿಯನ್ನು ಈ ಕಡಲತೀರದಲ್ಲಿ ಆಯೋಜಿಸಿದೆ. ವಿಜೇತ ತಂಡಗಳಿಗೆ ಮೊದಲ ಬಹುಮಾನ ₹ 25 ಸಾವಿರ, ಎರಡನೇ ಬಹುಮಾನ ₹ 20 ಸಾವಿರ, ಮೂರನೇ ಬಹುಮಾನ ₹ 15 ಸಾವಿರ ಮತ್ತು ನಾಲ್ಕನೇ ಬಹುಮಾನ ₹ 10 ಸಾವಿರ ನಿಗದಿ ಮಾಡಲಾಗಿದೆ.

**

ಇಕೊ ಬೀಚ್‌ಗೆ ಅಂತರರಾಷ್ಟ್ರೀಯ ಮನ್ನಣೆ ಸಿಕ್ಕಿದ ಮೇಲೆ ಪ್ರವಾಸಿಗರ ಸಂಖ್ಯೆ ವೃದ್ಧಿಸಿದೆ. ಪ್ರವಾಸಿಗರನ್ನು ಆಕರ್ಷಿಸಲು ಮತ್ತಷ್ಟು ಕಾರ್ಯಕ್ರಮ ರೂಪಿಸಲಾಗುವುದು.
– ಜಯಂತ್, ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.