ADVERTISEMENT

ಶಿರಸಿ: ‘ಗಾಂಧಿಮನೆಯ ಅವಲಕ್ಕಿ ಸರ’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 7:40 IST
Last Updated 23 ಡಿಸೆಂಬರ್ 2025, 7:40 IST
ಶಿರಸಿಯಲ್ಲಿ ಬರಹಗಾರ ಎಂ.ಜಿ.ಹೆಗಡೆ ಅವರ ಗಾಂಧಿಮನೆಯ ಅವಲಕ್ಕಿ ಸರ ಕೃತಿಯನ್ನು ವಾಸುದೇವ ಶಾನಭಾಗ ಬಿಡುಗಡೆ ಮಾಡಿದರು
ಶಿರಸಿಯಲ್ಲಿ ಬರಹಗಾರ ಎಂ.ಜಿ.ಹೆಗಡೆ ಅವರ ಗಾಂಧಿಮನೆಯ ಅವಲಕ್ಕಿ ಸರ ಕೃತಿಯನ್ನು ವಾಸುದೇವ ಶಾನಭಾಗ ಬಿಡುಗಡೆ ಮಾಡಿದರು   

ಶಿರಸಿ: ‘ಗಾಂಧಿಮನೆಯ ಅವಲಕ್ಕಿ ಸರ ಕೃತಿಯು ಇಂದಿನ ದಿನಗಳಲ್ಲಿ ಯಾವ ಕಾರಣವೂ ಇಲ್ಲದೆಯೇ ಜನರು ತಮಗೆ ತಾವೇ ಬೆಳೆಸಿಕೊಳ್ಳುವ ಅಸಹಜ ದ್ವೇಷಗಳನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸುತ್ತದೆ’ ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು. 

ನಗರದ ವಿನಾಯಕ ಸಭಾಂಗಣದಲ್ಲಿ ಭಾನುವಾರ ಬರಹಗಾರ ಎಂ.ಜಿ.ಹೆಗಡೆ ಅವರ ಗಾಂಧಿಮನೆಯ ಅವಲಕ್ಕಿ ಸರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದರೋಡೆಕೋರರ ಪ್ರವೇಶದಿಂದ ಆರಂಭವಾಗಿ, ಗಾಂಧಿ ಭವನದ ಸಂದರ್ಶನದಲ್ಲಿ ಕೊನೆಯಾಗುವ ಕಾದಂಬರಿಯು ಸುಮಾರು ಮೂರು ತಲೆಮಾರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಯಾನವನ್ನು ಹೇಳುತ್ತದೆ. ಇಲ್ಲಿ ಗಾಂಧಿ ಇಲ್ಲ‌ ಬದಲಾಗಿ ಗಾಂಧಿಯ ನೆರಳು ಇದೆ. ಮನುಷ್ಯರಲ್ಲಿರುವ ಸಹಜ, ಒಳ್ಳೆಯತನಗಳನ್ನು ಪ್ರಕಟಗೊಳ್ಳುವಂತೆ ಮಾಡುವ ಶಕ್ತಿಯಾಗಿ ಗಾಂಧಿಯ ನೆರಳು ಕೆಲಸ ಮಾಡಿದಾಗ ಸಮಾಜ ಆದರ್ಶಾತ್ಮಕ ಬದಲಾವಣೆಯನ್ನು ಹೇಗೆ ಕಾಣುತ್ತದೆ ಎಂಬುದನ್ನು ಕೃತಿ ಸಾರುತ್ತದೆ’ ಎಂದರು. 

ADVERTISEMENT

ಬರಹಗಾರ ಅಜಿತ ಹರೀಶಿ ಮಾತನಾಡಿ, ‘ಪ್ರಭುತ್ವ ವಿರೋಧ ಮತ್ತು ದೇಶ ವಿರೋಧ ಎರಡೂ ಬೇರೆ ಬೇರೆಯಾದರೂ, ಸದಾ ಆಡಳಿತದಲ್ಲಿರುವ ಜನರು ಇವೆರಡನ್ನೂ ಒಂದು ಮಾಡಿ ರಕ್ಷಣೆ ಪಡೆಯಲು ಬಯಸುತ್ತಾರೆ. ಇದನ್ನು ವಿಡಂಬನಾತ್ಮಕವಾಗಿ ಈ ಕಾದಂಬರಿಯಲ್ಲಿ ಹೇಳಲಾಗಿದೆ. ಗಾಂಧಿಮನೆ ಮತ್ತು ಅವಲಕ್ಕಿ ಸರ ಎಂಬ ಎರಡು ವಿರೋಧಾತ್ಮಕ ರೂಪಕಗಳನ್ನು ಬಳಸಿ ಈ ಕೃತಿಯನ್ನು ಹೆಣೆಯಲಾಗಿದೆ’ ಎಂದು ತಿಳಿಸಿದರು.

ಹಿರಿಯ ಸಾಹಿತಿ ವಾಸುದೇವ ಶಾನಭಾಗ ಪುಸ್ತಕ ಬಿಡುಗಡೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಶಿರಸಿ ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವಿಜಯೇಂದ್ರ ಪಾಟೀಲ ಕಲ್ಬುರ್ಗಿ, ಬಾಬು ನಾಯ್ಕ ಸಿದ್ಧಾಪುರ, ವಿ.ಪಿ.ಹೆಗಡೆ, ಎಸ್.ಕೆ.ಭಾಗವತ, ಪ್ರಕಾಶಕ ಸೃಷ್ಟಿ ನಾಗೇಶ ಇದ್ದರು. ಸಂಘಟಕ ಐ.ಡಿ.ಭಟ್ ಸ್ವಾಗತಿಸಿದರು. ರೋಹಿಣಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. 

ಪುಸ್ತಕದ ವಿವರ ಪುಸ್ತಕ: ಗಾಂಧಿಮನೆಯ ಅವಲಕ್ಕಿ ಸರ 

ಲೇಖಕ: ಎಂ.ಜಿ.ಹೆಗಡೆ 

ಬೆಲೆ: ₹380

ಪುಟ:332

ಪ್ರಕಾಶನ: ಸೃಷ್ಟಿ ಪ್ರಕಾಶನ ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.