ADVERTISEMENT

ಕಾರವಾರ: ಬಿ.ಪಿ.ಎಲ್ ಕಾರ್ಡ್ ಅರ್ಜಿದಾರರಿಗೂ ಪಡಿತರ

ವಿಶೇಷ ಸಂದರ್ಭವೆಂದು ಪರಿಗಣಿಸಿ ವಿತರಿಸಲು ಸಚಿವ ಸಂಪುಟ ನಿರ್ಧಾರ: ಸಚಿವ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 19:45 IST
Last Updated 11 ಏಪ್ರಿಲ್ 2020, 19:45 IST
ಕಾರವಾರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು. 
ಕಾರವಾರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿದರು.    

ಕಾರವಾರ: ‘ಬಡತನ ರೇಖೆಗಿಂತ ಕೆಳಗಿನವರ ಪಡಿತರ ಚೀಟಿಗೆ (ಬಿ.ಪಿ.ಎಲ್ ಕಾರ್ಡ್‌) ಅರ್ಜಿ ಹಾಕಿದವರಿಗೂ ಇತರ ಫಲಾನುಭವಿಗಳ ಮಾದರಿಯಲ್ಲೇ ಮೂರು ತಿಂಗಳ ಪಡಿತರ ಸಾಮಗ್ರಿಯನ್ನು ನೀಡಲಾಗುತ್ತದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಈ ಬಗ್ಗೆ ನಿರ್ಣಯಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ನಗರಕ್ಕೆ ಶನಿವಾರ ಮೊದಲ ಬಾರಿಗೆ ಬಂದ ಅವರು ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರ್ಜಿದಾರರ ಅರ್ಹತೆಯನ್ನು ಈಗಿನ ಸ್ಥಿತಿಯಲ್ಲಿ ಗುರುತಿಸಲು ಕಷ್ಟ. ಹಾಗಾಗಿ ಇದನ್ನುವಿಶೇಷ ಸಂದರ್ಭ ಎಂದು ಪರಿಗಣಿಸಲಾಗಿದೆ. ರಾಜ್ಯದಲ್ಲಿ ಒಟ್ಟು 2.52 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ 3,427 ಅರ್ಜಿದಾರರಿದ್ದಾರೆ’ ಎಂದು ಮಾಹಿತಿ ನೀಡಿದರು.

ಪೊಲೀಸರಿಂದಲೇ ಪಾಸ್: ‘ಲಾಕ್‌ಡೌನ್ ಸಂದರ್ಭದಲ್ಲಿ ಅನಿವಾರ್ಯ ಸಂಚಾರಕ್ಕೆ ಪಾಸ್ ನೀಡುವ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಲಾಗಿದೆ.ತಹಶೀಲ್ದಾರ್ ಅಥವಾ ಮತ್ಯಾರೇ ಅಧಿಕಾರಿಗಳು ಪಾಸ್ ಕೊಟ್ಟರೂ ಕೊನೆಗೆ ಪೊಲೀಸರೇ ಪರಿಶೀಲನೆ ಮಾಡುತ್ತಾರೆ. ಇದರಿಂದಆಗುತ್ತಿದ್ದ ಗೊಂದಲವನ್ನು ತಡೆಯಲು ಈ ವ್ಯವಸ್ಥೆ ಮಾಡಲಾಗಿದೆ’ ಎಂದುಹೇಳಿದರು.

ADVERTISEMENT

‘ಜಿಲ್ಲೆಯಲ್ಲಿಶಿರಸಿ, ಸಿದ್ದಾಪುರದಲ್ಲಿ ನಾಲ್ವರಿಗೆ ಮಂಗನಕಾಯಿಲೆ ಕಾಣಿಸಿಕೊಂಡಿದೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಕೋವಿಡ್ 19 ಸಮಸ್ಯೆ ಇಲ್ಲ. ಹಾಗಾಗಿ ಆರೋಗ್ಯ ಇಲಾಖೆಯ ತಂಡವು ಮಂಗನಕಾಯಿಲೆಯನ್ನು ತಡೆಯಲು ವಿಶೇಷ ಕ್ರಮ ವಹಿಸಲು ಆದೇಶ ನೀಡಿದ್ದೇನೆ. ಎರಡು ದಿನಗಳಿಗೊಮ್ಮೆ ಆ ಪ್ರದೇಶಗಳಿಗೆಭೇಟಿ ನೀಡಿಜನರಲ್ಲಿ ವಿಶ್ವಾಸ ಮೂಡಿಸಲು ಶಿರಸಿ ಉಪ ವಿಭಾಗಾಧಿಕಾರಿಗೆ ಸೂಚಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಒಟ್ಟು 44 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಆಯಾ ಪ್ರದೇಶಗಳ ವಿಸ್ತಾರಕ್ಕೆ ಗಾತ್ರಕ್ಕೆ ಅನುಗುಣವಾಗಿ ಹಾಲು ಖರೀದಿಗೆ ಅನುಕೂಲ ಮಾಡಿಕೊಡುವಂತೆ ತಹಶೀಲ್ದಾರ್ ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆನಿರ್ದೇಶಿಸಲಾಗಿದೆ’ ಎಂದು ಹೇಳಿದರು.

‘ಕರೆಸುವ ದುಃಸ್ಸಾಹಸ ಬೇಡ’:‘ಹೊರ ರಾಜ್ಯಗಳಲ್ಲಿ ಇರುವ ನಮ್ಮ ಜಿಲ್ಲೆಯವರನ್ನು ಈ ಸಂದರ್ಭದಲ್ಲಿ ಕರೆದುಕೊಂಡು ಬರುವ ದುಃಸ್ಸಾಹಸಕ್ಕೆ ಯಾವುದೇ ಜನಪ್ರತಿನಿಧಿಗಳುಮುಂದಾಗಬಾರದು.ಆ ಒತ್ತಡವನ್ನು ಜಿಲ್ಲಾಡಳಿತದ ಮೇಲೂ ಹೇರಬಾರದು’ ಎಂದು ಶಿವರಾಮ ಹೆಬ್ಬಾರಮನವಿ ಮಾಡಿದರು.

‘ಕೊರೊನಾ ವೈರಸ್‌ನಿಂದ ಜಿಲ್ಲೆ ಈಗ ಸುರಕ್ಷಿತವಾಗಿದೆ. ಒಂದುವೇಳೆ, ಜಿಲ್ಲೆಯ ಗಡಿಯನ್ನು ಮುಕ್ತಗೊಳಿಸಿದರೆ ಸಮಸ್ಯೆಯಾಗುತ್ತದೆ. ಗೋವಾದಲ್ಲಿ ನನ್ನ ಕ್ಷೇತ್ರದವರೇ 2,800 ಜನರಿದ್ದಾರೆ. ಅವರಿಗೆ ಬೇಕಾಗಿದ್ದನ್ನುಅಲ್ಲೇ ವ್ಯವಸ್ಥೆ ಮಾಡಲಾಗುತ್ತದೆ. ನಾನು ಮತ್ತು ಜಿಲ್ಲಾಧಿಕಾರಿಯನ್ನು ಒಳಗೊಂಡ ತಂಡ ಗೋವಾಕ್ಕೆ ತೆರಳಿ ಚರ್ಚೆ ಮಾಡಲೂ ಸಿದ್ಧವಿದೆ. ಈ ಸಂಬಂಧ ಗೋವಾ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹಾಗೂ ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಇದ್ದರು.

ಸಚಿವರು ಹೇಳಿದ್ದು...

* ಗ್ರಾಮೀಣ ಭಾಗದಲ್ಲಿ ಔಷಧಿಯನ್ನು ಪಿ.ಡಿ.ಒ ಮೂಲಕ ಪಡೆಯಬಹುದು.

* ಪಂಪ್‌ಸೆಟ್‌ಗಳಿಗೆ ಡೀಸೆಲ್ಬೇಕಾದತೆಗ್ರಾಮ ಪಂಚಾಯ್ತಿಗೆ ತಿಳಿಸಿ ಹಣ ನೀಡಬೇಕು.

*ಕೃಷಿ ಕೆಲಸಕ್ಕೆ ಹೋಗುವವರಿಗೆ ಹಸಿರು ಕಾರ್ಡ್‌ವಿತರಣೆಗೆ ನಿರ್ಧಾರ.

*ಭಟ್ಕಳ ಭಾಗದವರು ಆದಷ್ಟೂ ಸ್ಥಳೀಯವಾಗಿ ಚಿಕಿತ್ಸೆ ಪಡೆಯುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.