ADVERTISEMENT

ಧರ್ಮವಿದ್ದಲ್ಲಿ ಮಾತ್ರ ಸುಖ ನೆಲೆಸಲು ಸಾಧ್ಯ: ಬೃಹ್ಮಾನಂದ ಸರಸ್ವತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:10 IST
Last Updated 10 ಜನವರಿ 2026, 7:10 IST
ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಟ್ರಸ್ಟಿಗಳಾಗಿ ಆಯ್ಕೆಯಾದವರಿಗೆ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಸನ್ಮಾನಿಸಿದರು
ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಟ್ರಸ್ಟಿಗಳಾಗಿ ಆಯ್ಕೆಯಾದವರಿಗೆ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಸನ್ಮಾನಿಸಿದರು   

ಶಿರಸಿ: ‘ಧರ್ಮವಿದ್ದಲ್ಲಿ ಮಾತ್ರ ಸುಖ ನೆಲೆಸಲು ಸಾಧ್ಯ. ಧರ್ಮವನ್ನು ಉಳಿಸಿ ಬೆಳೆಸುವ ಮೂಲಕ ಸುಖೀ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು’ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠದ ಬೃಹ್ಮಾನಂದ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.

ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗುರುವಂದನಾ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, 'ಸಮಾಜವು ಇಂದು ರಾಜಕೀಯ ಮತ್ತು ಜಾತಿ ವೈಷಮ್ಯದಿಂದ ಹೊರಬರಬೇಕಾದ ಅನಿವಾರ್ಯತೆ ಇದೆ. ಜಾತಿ ಭಾವನೆಗಳು ಸಮುದಾಯದ ಒಳಗಿರಲಿ, ಆದರೆ ಅದು ದೇಶ ಕಟ್ಟುವ ಕಾರ್ಯಕ್ಕೆ ಪೂರಕವಾಗಿರಬೇಕು. ಮಠದ ಜವಾಬ್ದಾರಿಯನ್ನು ಸಮುದಾಯಕ್ಕೂ ಹಂಚುವ ಉದ್ದೇಶದಿಂದ ವಿಕೇಂದ್ರೀಕರಣ ವ್ಯವಸ್ಥೆ ಅಳವಡಿಸಿಕೊಂಡು ಹೊಸ ಟ್ರಸ್ಟಿಗಳನ್ನು ನೇಮಕ ಮಾಡಲಾಗಿದೆ' ಎಂದು ತಿಳಿಸಿದರು.

​ಇದೇ ಸಂದರ್ಭದಲ್ಲಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಟ್ರಸ್ಟಿಗಳಾಗಿ ಆಯ್ಕೆಯಾದ ಶಾಸಕ ಭೀಮಣ್ಣ ನಾಯ್ಕ, ಎಚ್.ಆರ್. ನಾಯ್ಕ, ಹರೀಶಕುಮಾರ ಬೆಳ್ತಂಗಡಿ, ಸುಜಾತಾ ಬಂಗೇರ, ಎಸ್.ಕೆ.ಚಂದ್ರ ಪೂಜಾರಿ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

​ಸನ್ಮಾನ ಸ್ವೀಕರಿಸಿ ಮಾತನಾಡಿದ ಮೆಸ್ಕಾಂ ಅಧ್ಯಕ್ಷ ಹರೀಶಕುಮಾರ ಬೆಳ್ತಂಗಡಿ ‘ಸ್ವಾಮೀಜಿ ಧರ್ಮ ಪ್ರಚಾರದೊಂದಿಗೆ ಸಮುದಾಯವನ್ನು ಮೇಲೆತ್ತುವ ಕಾರ್ಯ ಮಾಡುತ್ತಿದ್ದಾರೆ. ಅವರು ಮಹಾಮಂಡಲೇಶ್ವರ ಸ್ಥಾನಕ್ಕೇರಿರುವುದು ಇಡೀ ಸಮುದಾಯಕ್ಕೆ ಹೆಮ್ಮೆಯ ವಿಷಯ’ ಎಂದರು. ಬಳಿಕ ಮಾತನಾಡಿದ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ‘ನಾರಾಯಣಗುರುಗಳ ಆಶಯದಂತೆ 26 ಪಂಗಡಗಳು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಂಘಟಿತರಾಗಬೇಕು’ ಎಂದು ಆಶಿಸಿದರು.

ADVERTISEMENT

​ಕಾರ್ಯಕ್ರಮಕ್ಕೂ ಮುನ್ನ ಶಾಸಕ ಭೀಮಣ್ಣ ನಾಯ್ಕ ಹಾಗೂ ಗೀತಾ ನಾಯ್ಕ ದಂಪತಿ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ವೇದಿಕೆಯಲ್ಲಿ ಪ್ರಮುಖರಾದ ಅರುಣ ನಾಯ್ಕ ಭಟ್ಕಳ, ಶ್ರೀಧರ ನಾಯ್ಕ, ವಾಮನ ನಾಯ್ಕ, ನಾಗೇಶ ನಾಯ್ಕ, ವಿಜಯಕುಮಾರ ನಾಯ್ಕ, ಆನಂದ ನಾಯ್ಕ, ವಿ.ಎನ್. ನಾಯ್ಕ, ಗಣಪತಿ ನಾಯ್ಕ, ನರಸಿಂಹ ನಾಯ್ಕ, ಆರ್.ಎಸ್. ನಾಯ್ಕ, ಮಾರಿಕಾಂಬಾ ದೇವಾಲಯದ ಅಧ್ಯಕ್ಷ ಆರ್.ಜಿ. ನಾಯ್ಕ, ಗೋವಿಂದ ನಾಯ್ಕ, ವಕೀಲ ರವೀಂದ್ರ ನಾಯ್ಕ, ರಾಜು ನಾಯ್ಕ, ಸುಮಲತಾ ನಾಯ್ಕ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಸಮಿತಿ ವಿಭಾಗೀಯ ಅಧ್ಯಕ್ಷ ವೆಂಕಟೇಶ ನಾಯ್ಕ ಸ್ವಾಗತಿಸಿದರು.  

ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಶಾಲಿಯಾಗಿ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಮತ್ತು ಸಮಾನ ಅವಕಾಶಗಳು ಸಿಗುವಂತಾಗಬೇಕು.
ಭೀಮಣ್ಣ ನಾಯ್ಕ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.