ADVERTISEMENT

ಸಂತಾನೋತ್ಪತ್ತಿ: ವಲಸೆ ಹಕ್ಕಿಗಳ ಕಲರವ

ಮುಂಡಗೋಡ ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮ

​ಶಾಂತೇಶ ಬೆನಕನಕೊಪ್ಪ
Published 21 ನವೆಂಬರ್ 2024, 6:13 IST
Last Updated 21 ನವೆಂಬರ್ 2024, 6:13 IST
ಮುಂಡಗೋಡ ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮದಲ್ಲಿ ಹಕ್ಕಿಗಳು ಗೂಡು ಕಟ್ಟುವುದರಲ್ಲಿ ನಿರತರಾಗಿರುವುದು
ಮುಂಡಗೋಡ ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮದಲ್ಲಿ ಹಕ್ಕಿಗಳು ಗೂಡು ಕಟ್ಟುವುದರಲ್ಲಿ ನಿರತರಾಗಿರುವುದು   

ಮುಂಡಗೋಡ: ಮೈ ಕೊರೆಯುವ ಚಳಿ. ಕಣ್ಣು ಹಾಯಿಸಿದಷ್ಟು ದೂರ ಕಾಣುವ ನೀರು. ಕೊಯ್ಲಿಗೆ ಬಂದಿರುವ ಬೆಳೆ. ಗಿಡ–ಮರಗಳಿಂದ ಆವೃತ್ತವಾಗಿರುವ ಪ್ರದೇಶ. ನಡುಗಡ್ಡೆಯಂತಿರುವ ಈ ಸ್ಥಳವು ವಲಸೆ ಹಕ್ಕಿಗಳ ಕಲರವ ಇಮ್ಮಡಿಯಾಗುವಂತೆ ಮಾಡಿದೆ.

ಕಳೆದ ವರ್ಷ ಹವಾಮಾನ ವೈಪರೀತ್ಯದಿಂದ ವಲಸೆ ಹಕ್ಕಿಗಳ ಸಂಖ್ಯೆ ಕ್ಷೀಣಿಸಿತ್ತು. ಆದರೆ, ಈ ವರ್ಷ ನವಂಬರ್‌ ಆರಂಭದಲ್ಲಿಯೇ, ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮದಲ್ಲಿ ಸಂತಾನೋಭಿವೃದ್ಧಿಗೆ ಸಂಚಾರ ಆರಂಭಿಸಿವೆ.

ಪ್ರತಿ ವರ್ಷ ನವಂಬರ್‌ ಆರಂಭದಿಂದ ಫೆಬ್ರುವರಿ ಅಂತ್ಯದವರೆಗೆ ವಲಸೆ ಹಕ್ಕಿಗಳು, ಸ್ಥಳೀಯ ಹಕ್ಕಿಗಳು ಅತ್ತಿವೇರಿ ಪಕ್ಷಿಧಾಮದಲ್ಲಿ ಸಂತಾನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಈ ವರ್ಷ ಹೆಚ್ಚಿನ ಪ್ರಮಾಣದ ಮಳೆಯಾಗಿರುವುದು, ವಲಸೆ ಹಕ್ಕಿಗಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ.

ADVERTISEMENT

ನೀರ ಮಧ್ಯದ ಸಣ್ಣ ಗಿಡ ಗಂಟಿಗಳ ಸ್ಥಳ, ಗಿಡ ಮರಗಳು ಈ ಅತಿಥಿ ಹಕ್ಕಿಗಳ ನೆಚ್ಚಿನ ತಾಣವಾಗುತ್ತಿವೆ. ನಸುಕಿನಲ್ಲಿ ಹಾಗೂ ಗೋಧೂಳಿ ಸಮಯದಲ್ಲಿ ನೀರಿನಂಚಿಗೆ ರೆಕ್ಕೆ ಸೋಂಕಿಸುತ್ತ, ಬಾನೆತ್ತರಕ್ಕೆ ಹಾರುತ್ತ, ಇಂಪಾದ ಧ್ವನಿಯನ್ನು ಕಾಡಿನ ಮಧ್ಯದಲ್ಲಿ ಮಾರ್ದನಿಸುತ್ತ, ಸ್ವಚ್ಛಂದವಾಗಿ ಯಾರ ಹಂಗು ಇಲ್ಲದೇ ಹಕ್ಕಿಗಳು ಹಾರಾಡುತ್ತಿವೆ.

ಪಶ್ಚಿಮಾಭಿಮುಖವಾಗಿ ಸೂರ್ಯ ಮರೆಯಾಗುತ್ತಿದ್ದಂತೆ, ಕತ್ತಲು ತುಂಬಿದ ಗಿಡ ಮರ, ಪೊದೆಗಳಲ್ಲಿ ಬೆಳ್ಳಕ್ಕಿಗಳ ಬಣ್ಣ ಇಡಿ ಇಡಿಯಾಗಿ ಗೋಚರಿಸುತ್ತದೆ. ಕಿವಿಗಡಚ್ಚಿಕ್ಕುವ ಬಾನಾಡಿಗಳ ಹಾಡು, ಕತ್ತಲು ಆದರೂ ಅಲ್ಲಿಂದ ಕದಲದಂತೆ ಪಕ್ಷಿಪ್ರಿಯರನ್ನು ಸೆಳೆಯುತ್ತದೆ.

ವಲಸೆ ಹಕ್ಕಿಗಳ ಸಂಖ್ಯೆ ಇನ್ನಷ್ಟು ಹೆಚ್ಚಿದಂತೆ, ಪಕ್ಷಿಧಾಮವು ಮುಂದಿನ ಮೂರನಾಲ್ಕು ತಿಂಗಳು ‘ಹೆರಿಗೆ ಆಸ್ಪತ್ರೆ’ಯಂತೆ ಆಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವುದರಲ್ಲಿ ಮುಂದಡಿ ಇಡಲಿದೆ ಎನ್ನುತ್ತಾರೆ ಪಕ್ಷಿಪ್ರಿಯರು.

ಅತ್ತಿವೇರಿಯ ಸದ್ಯದ ಅತಿಥಿಗಳು: ಬ್ಲ್ಯಾಕ್‌ ಹೆಡ್ಡೆಡ್‌ ಐಬೀಸ್‌, ಕಾರ್ಮೋರಂಟ್ಸ್‌, ಡಾರ್ಟರ್‌, ಸ್ಪಾಟ್‌ ಬಿಲ್ಲಡ್‌ ಡಕ್ಸ್‌ (ಸದ್ಯ ಗೂಡು ಕಟ್ಟುವುದರಲ್ಲಿ ನಿರತರಾಗಿರುವ ಪಕ್ಷಿಗಳಿವು), ಫಾರೆಸ್ಟ್‌ ವ್ಯಾಗಟೇಲ್‌, ಗ್ರೇ ಮತ್ತು ಬಿಳಿ ವ್ಯಾಗಟೇಲ್‌, ಬ್ಲ್ಯೂ ಟೇಲ್‌ ಬೀ ಈಟರ್‌, ಗ್ರೀನ್‌ ವಾರ್ಬಲರ್‌, ಗ್ರೀನಿಶ್‌ ವಾರ್ಬಲರ್‌, ಏಷಿಯನ್‌ ಬ್ರೌನ್‌ ಫ್ಲೈಕ್ಯಾಚರ್‌, ಟೈಗಾ ಫ್ಲೈಕ್ಯಾಚರ್‌, ವರ್ಡಿಟರ್‌ ಫ್ಲೈಕ್ಯಾಚರ್‌, ಸ್ಯಾಂಡಪೈಪರ್ಸ್‌, ಲಿಟ್ಲ್‌ ರಿಂಗ್ಡ್‌ ಪ್ಲೋವರ್‌, ಕೆನಫಿಶ್‌ ಪ್ಲೋವರ್‌, ಸ್ನೈಪ್ಸ್‌.

‘ಪ್ರತಿ ವರ್ಷ 20ಕ್ಕೂ ಹೆಚ್ಚು ದೇಶಗಳಿಂದ ವಲಸೆ ಹಕ್ಕಿಗಳು ಆಗಮಿಸುವುದು ದಾಖಲಾಗಿವೆ. ಸುಮಾರು 50ಕ್ಕಿಂತ ಹೆಚ್ಚು ಪ್ರಬೇಧದ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ. ಸಂತಾನೋಭಿವೃದ್ಧಿಗಾಗಿ ಹಲವು ಹಕ್ಕಿಗಳು ಈಗಾಗಲೇ ಆಗಮಿಸಿ, ಗೂಡು ಕಟ್ಟುವುದರಲ್ಲಿ ನಿರತರಾಗಿವೆ.‌ ಡಿಸೆಂಬರ್‌ ಮಧ್ಯದವರೆಗೂ ವಲಸೆ ಹಕ್ಕಿಗಳ ಆಗಮನ ಇರುತ್ತದೆ. ಈ ವರ್ಷದ ವಾತಾವರಣ ವಲಸೆ ಹಕ್ಕಿಗಳಿಗೆ ಪೂರಕವಾಗಿದೆʼ ಎಂದು ಉಪವಲಯ ಅರಣ್ಯಾಧಿಕಾರಿ ಸಂಜೀವ ಹೇಳಿದರು.

ʼಪಕ್ಷಿಧಾಮದಲ್ಲಿ ವಲಸೆ ಹಕ್ಕಿಗಳ ಆಗಮನ ಆರಂಭವಾಗಿದೆ. ಸುರಕ್ಷಿತ ತಾಣ ಎಂದು ತಿಳಿದುಕೊಂಡು ವಲಸೆ ಹಕ್ಕಿಗಳು ಇಲ್ಲಿ ಸಂತಾನಾಭಿವೃದ್ಧಿಗೆ ಆಗಮಿಸುತ್ತವೆ. ಅವುಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಶೀಘ್ರದಲ್ಲಿಯೇ ಮಾಡಲಾಗುವುದು. ವಲಸೆ ಹಕ್ಕಿಗಳ ದಿನಾಚರಣೆ ಕೈಗೊಳ್ಳುವ ಮೂಲಕ ಸ್ಥಳೀಯರಿಗೆ ಇನ್ನಷ್ಟು ಮಾಹಿತಿ ನೀಡಲಾಗುವುದುʼ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಹುಲಕೋಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.