
ಶಿರಸಿ: ಶಕ್ತಿ ಯೋಜನೆ ಫಲಾನುಭವಿಗಳ ಜತೆ ಸಾರ್ವಜನಿಕರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಾರಿಗೆ ವಿಭಾಗಕ್ಕೆ ಹೆಚ್ಚಿನ ಬಸ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ನಗರದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪದಾಧಿಕಾರಿಗಳ ಸಭೆ ನಡೆಸಿದ ಅವರು ನಂತರ ಮಾಧ್ಯಮಗಳ ಜತೆ ಮಾತನಾಡಿದರು. 'ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳನ್ನು ಪೂರೈಸಿದೆ. ಅಧಿಕಾರ ವಹಿಸಿಕೊಂಡ ಒಂದು ವರ್ಷದಲ್ಲಿಯೇ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ, ಜನರಿಗೆ ಅನುಕೂಲ ಕಲ್ಪಿಸಲು ಯೋಜನೆಗಳನ್ನು ರೂಪಿಸಲಾಗಿದೆ’ ಎಂದರು.
‘ಈ ವರ್ಷ ಮಳೆ ಹೆಚ್ಚಾಗಿರುವ ಕಾರಣ ರಸ್ತೆಗಳು ಹಾಳಾಗಿದ್ದು, ಬಸ್‍ಗಳು ದುರಸ್ತಿಗೆ ಬರುತ್ತಿವೆ. ಹೀಗಾಗಿ ಹೆಚ್ಚಿನ ಬಸ್ ನೀಡುವಂತೆ ಈಗಾಗಲೇ ಒತ್ತಾಯಿಸಲಾಗಿದೆ’ ಎಂದ ಅವರು, ‘ಈವರೆಗೆ ಪಂಚ ಗ್ಯಾರಂಟಿ ಯೋಜನೆಯಡಿ ₹1 ಲಕ್ಷ ಕೋಟಿಗಳನ್ನು ವೆಚ್ಚ ಮಾಡಲಾಗಿದೆ. ಈ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಬೇಕು. ಈ ಕುರಿತು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಬೇಕು. ಕಟ್ಟ ಕಡೆಯ ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭದೊರಕಿಸಬೇಕು. ಪಂಚಾಯಿತಿ ಮಟ್ಟಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಯೋಜನೆಗಳ ಲಾಭ ದೊರಕಿಸಲು ಕ್ರಮ ವಹಿಸಲು ಸೂಚಿಸಲಾಗಿದೆ' ಎಂದರು.
'ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಪಡೆದ ಹಣದಿಂದ ತಮ್ಮ ಬದುಕಿನಲ್ಲಿ ಆದ ಬದಲಾವಣೆಗಳ ಕುರಿತ ಫಲಾನುಭವಿಗಳ ಯಶೋಗಾಥೆ ಪ್ರಕಟಿಸುವ ಮೂಲಕ ಯೋಜನೆಗಳ ಮಾಹಿತಿ ಪ್ರತಿಯೊಬ್ಬರಿಗೂ ತಲುಪಿಸಲು ವ್ಯಾಪಕವಾಗಿ ಪ್ರಚಾರ ಕೈಗೊಳ್ಳುವಂತೆ ಹೇಳಲಾಗಿದೆ' ಎಂದ ಅವರು,'ಗೃಹಲಕ್ಷ್ಮೀ ಸಂಘ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಮೈಕ್ರೋ ಫೈನಾನ್ಸ್ ಮೂಲಕ ಬಡವರಿಗೆ ದೌರ್ಜನ್ಯವಾಗುತ್ತಿತ್ತು. ಅದನ್ನು ತಪ್ಪಿಸುವ ಸಲುವಾಗಿ ಈ ಸಹಕಾರ ಸಂಘ ಸ್ಥಾಪನೆಗೆ ಮುಂದಾಗಿರುವುದು ಉತ್ತಮ ನಡೆಯಾಗಿದೆ' ಎಂದು ಹೇಳಿದರು.
'ಯುವಕರು ಈ ಯೋಜನೆ ಲಾಭ ಪಡೆಯಲು ನಿರುತ್ಸಾಹ ತೋರುತ್ತಿರುವುದು ನೋಂದಣಿಗೆ ಸ್ವಲ್ಪ ಹಿನ್ನಡೆಯಾಗಿದೆ. ಯುವಕರಿಗೆ ತರಬೇತಿ ಮತ್ತು ಉದ್ಯೋಗ ಮೇಳಗಳನ್ನು ಆಯೋಜಿಸಬೇಕು. ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿ ತೋರುವಂತೆ ಕ್ರಮವಹಿಸಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಸಂಬಂಧಪಟ್ಟ ಯುವನಿಧಿ ಯೋಜನೆ ಅಧಿಕಾರಿಗಳಿಗೆ ತಿಳಿಸಲಾಗಿದೆ' ಎಂದರು.
ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ನಾಗರಾಜ ಮುರುಡೇಶ್ವರ, ಶಿರಸಿ ಘಟಕದ ಅಧ್ಯಕ್ಷೆ ಸುಮಾ ಉಗ್ರಾಣಕರ ಹಾಗೂ ಇತರರಿದ್ದರು.
Quote - 'ಯಾವುದೇ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುವುದಿಲ್ಲ. ಎಸ್.ಆರ್.ಪಾಟೀಲ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷ
ಯೋಜನೆ ಕುರಿತು ಪ್ರಚಾರ: ಯುವನಿಧಿ ಯೋಜನೆಯಡಿ ಸರ್ಕಾರದ ನಿರ್ದೇಶನದ ಪ್ರಕಾರ ಈಗಾಗಲೇ ವಿದ್ಯಾರ್ಥಿಗಳ ನೋಂದಣಿಗಾಗಿ ಅಭಿಯಾನ ಕೈಕೊಂಡು ನೋಂದಣಿ ಮಾಡಲಾಗುತ್ತಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಈ ಯೋಜನೆ ಕುರಿತು ಪ್ರಚಾರ ಕಾರ್ಯಕ್ರಮ ಕೈಕೊಳ್ಳಲು ತಿಳಿಸಲಾಗಿದ್ದು ಆಯಾ ಜಿಲ್ಲಾ ತಾಲ್ಲೂಕು ಸಮಿತಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ಎಸ್.ಆರ್.ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.