
ಕಾರವಾರ: ಅಂಕೋಲಾ ತಾಲ್ಲೂಕಿನ ಸುಂಕಸಾಳ ಬಳಿ ಗುರುವಾರ ನಸುಕಿನ ಜಾವ ಖಾಸಗಿ ಬಸ್‌ಗಳಿಗೆ ಲಾರಿ ಡಿಕ್ಕಿಯಾದ ಪರಿಣಾಮ ಬಸ್‌ನಲ್ಲಿದ್ದ 24 ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಳ್ಳಾರಿಯಿಂದ ಪಣಜಿಗೆ ಸಂಚರಿಸುತ್ತಿದ್ದ ಬಸ್, ಹುಬ್ಬಳ್ಳಿಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಬಸ್‌ಗೆ ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿದೆ ಎಂದು ಅಂಕೋಲಾ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಪರಿಣಾಮ ಹೆದ್ದಾರಿಯಲ್ಲಿ ಕಿಲೋ ಮೀಟರ್‌ಗಟ್ಟಲೆ ದೂರದವರೆಗೆ ಸಂಚಾರ ದಟ್ಟಣೆ ಉಂಟಾಯಿತು. ಯಲ್ಲಾಪುರ ತಾಲ್ಲೂಕಿನ ಅರೆಬೈಲ್ ಘಟ್ಟದಲ್ಲಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಯಲ್ಲಾಪುರ ಜಾತ್ರೆ ಮುಗಿಸಿ ಕರಾವಳಿ ಭಾಗದ ಕಡೆಗೆ ಪ್ರಯಾಣಿಸುತ್ತಿದ್ದವರ ಸಂಖ್ಯೆ ಹೆಚ್ಚಿದ್ದರಿಂದ ನಸುಕಿನ ಜಾವದಲ್ಲಿ ದಟ್ಟಣೆ ಹೆಚ್ಚಾಯಿತು.
'ಮೂರ್ನಾಲ್ಕು ತಾಸುಗಳವರೆಗೆ ಅರಬೈಲ್ ಘಟ್ಟದಲ್ಲಿ ಬಸ್ ನಿಂತಿತ್ತು. ನಸುಕಿನ ಜಾವ ಅಂಕೋಲಾಕ್ಕೆ ತಲುಪಬೇಕಿದ್ದವರಿಗೆ ಮೂರು ತಾಸು ತಡವಾಯಿತು' ಎಂದು ಪ್ರಯಾಣಿಕರೊಬ್ಬರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.