ADVERTISEMENT

ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಬಸ್‍: ಕೆಡಿಪಿ ಸಭೆಯಲ್ಲಿ ಪ್ರಸ್ತಾಪ

ರಾತ್ರಿ ಸಂಚರಿಸುವ ಪ್ರಯಾಣಿಕರಿಗೆ ತೀವ್ರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:57 IST
Last Updated 11 ಜುಲೈ 2025, 4:57 IST
ಶಿರಸಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಸ್ ನಿಲ್ದಾಣದ ಕಂಟ್ರೋಲರ್ ರಾಮಚಂದ್ರ ಶೆಟ್ಟಿ ಮಾತನಾಡಿದರು
ಶಿರಸಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬಸ್ ನಿಲ್ದಾಣದ ಕಂಟ್ರೋಲರ್ ರಾಮಚಂದ್ರ ಶೆಟ್ಟಿ ಮಾತನಾಡಿದರು   

ಶಿರಸಿ: ಗ್ರಾಮೀಣ ಪ್ರದೇಶ ಸೇರಿದಂತೆ ದೂರದ ಊರುಗಳಿಗೆ ರಾತ್ರಿ ಸಂಚರಿಸುವ ಬಸ್‍ಗಳು ಅರ್ಧ ದಾರಿಯಲ್ಲಿ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು.

ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಇಲಾಖೆ ಕುರಿತು ಕೇಂದ್ರೀಯ ಬಸ್ ನಿಲ್ದಾಣದ ಕಂಟ್ರೋಲರ್ ರಾಮಚಂದ್ರ ಶೆಟ್ಟಿ ಮಾಹಿತಿ ನೀಡುವಾಗ ಈ ವಿಷಯ ಪ್ರಸ್ತಾಪಿಸಿದ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಿ.ಪಿ. ಸತೀಶ, ‘ಬೆಂಗಳೂರು, ಮಂಗಳೂರು ಸೇರಿ ದೂರದ ಪ್ರದೇಶಗಳಿಗೆ ರಾತ್ರಿ ವೇಳೆ ಸಂಚರಿಸುವ ಬಸ್‌ಗಳು ಕೆಟ್ಟು ನಿಲ್ಲುತ್ತಿವೆ. ಈ ವೇಳೆ ಪರ್ಯಾಯ ಬಸ್ ಕೂಡ ಆಯಾ ಘಟಕದಿಂದಲೇ ಬಿಡಬೇಕು. ಇದು ತೀರಾ ಸಮಸ್ಯೆಗೆ ಕಾರಣವಾಗುತ್ತಿದೆ’ ಎಂದು ಅಸಮಾಧಾನ ಹೊರಹಾಕಿದರು.

ಇದಕ್ಕೆ ದನಿಗೂಡಿಸಿದ ಕುಳವೆ ಗ್ರಾಮ ಪಂಚಾಯಿತಿ ಸದಸ್ಯ ಸಂದೇಶ ಭಟ್, ‘ಗ್ರಾಮೀಣ ಭಾಗದಲ್ಲೂ ರಾತ್ರಿ ಪಾಳಿಯ ಕೆಲ ಬಸ್‍ಗಳು ಹೆಡ್‍ಲೈಟ್ ಸಮಸ್ಯೆಗೆ ಒಳಗಾಗುತ್ತಿವೆ. ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಳ್ಳುವ ಅಗತ್ಯವಿದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಮಚಂದ್ರ ಶೆಟ್ಟಿ, ‘ಬಹುತೇಕ ಬಸ್‍ಗಳ ಬಳಕೆ ಅವಧಿ ಮುಗಿದಿದ್ದು, ಪದೇ ಪದೇ ದುರಸ್ತಿಗೆ ಬರುತ್ತಿವೆ. ಚಿಕ್ಕಪುಟ್ಟ ಸಮಸ್ಯೆಗಳಾದರೆ ಬಸ್ ನಿಲ್ದಾಣದಲ್ಲೇ ದುರಸ್ತಿ ಮಾಡಲು ಸದ್ಯ ಒಬ್ಬ ಮೆಕ್ಯಾನಿಕ್ ನಿಯೋಜಿಸಲಾಗಿದೆ’ ಎಂದು ಹೇಳಿದರು.

ADVERTISEMENT

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್, ‘ಮಳೆಗಾಲದ ಕಾರಣ ವಾಂತಿ, ಬೇಧಿ, ಜ್ವರ ಪ್ರಕರಣಗಳು  ಹೆಚ್ಚುತ್ತಿದೆ. ಎಲ್ಲ ರೋಗಿಗಳಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್, ಬಿಸಿನೀರು ಬಳಸಬೇಕು’ ಎಂದರು. ‘ನಾಯಿ ಹಾಗೂ ಹಾವು ಕಡಿತದ ಲಸಿಕೆ ಲಭ್ಯವಿದ್ದು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಪೂರೈಸಲಾಗಿದೆ’ ಎಂದು ಹೇಳಿದರು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, ‘ಅಡಿಕೆಗೆ ಕೊಳೆ ರೋಗ ಆರಂಭವಾಗಿದೆ. ಸಸ್ಯ ಸಂರಕ್ಷಣಾ ಕ್ರಮ ಕೈಗೊಳ್ಳುವುದು ಅನಿವಾರ್ಯ. ತುತ್ತ, ಸುಣ್ಣ ಖರೀದಿಗೆ ಸಹಾಯಧನ ಲಭ್ಯವಿದೆ’ ಎಂದರು.

ತೋಟಗಾರಿಕಾ ಇಲಾಖೆ ಡಿಡಿ ಬಿ.ಪಿ.ಸತೀಶ, ‘ಜಿಲ್ಲೆಯಲ್ಲಿ 222 ಮಳೆ ಮಾಪಕ ಯಂತ್ರಗಳಿವೆ. 103 ಕೇಂದ್ರಗಳು ಹಾಳಾಗಿದ್ದು, ಪ್ರಸಕ್ತ ಸಾಲಿನ ವಿಮಾ ಯೋಜನೆ ಅನುಷ್ಠಾನಕ್ಕೆ ವಿಮಾ ಕಂಪನಿ ಒಪ್ಪಿಲ್ಲ. ಹಾಗಾಗಿ ಇನ್ನೂ ಸರ್ಕಾರದಿಂದ ಅಧಿಸೂಚನೆ ಆಗಿಲ್ಲ’ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾತನಾಡಿ, ‘ಮುಂಗಾರು ಬೆಳೆ ಸಮೀಕ್ಷೆ ಆ.15ರಿಂದ ಆರಂಭವಾಗಲಿದೆ. ಆ್ಯಪ್ ಮೂಲಕವೂ ಸಮೀಕ್ಷೆ ನಡೆಸಲು ರೈತರಿಗೆ ಸ್ವತಃ ಅವಕಾಶವಿದೆ’ ಎಂದರು.

ನರೇಗಾ ಅನುಷ್ಠಾನದಲ್ಲಿ ಅರಣ್ಯ ಇಲಾಖೆ ಪ್ರಗತಿ ನಿರೀಕ್ಷಿತವಾಗಿಲ್ಲ. ನಿಗದಿತ ಸಮಯದೊಳಗೆ ಗುರಿ ಸಾಧನೆ ಆಗಬೇಕು
ಚನ್ನಬಸಪ್ಪ ಹಾವಣಗಿ ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ

ಕಟಾವಾದ ಬೆಳೆಗೆ ಪರಿಹಾರವಿಲ್ಲ:

ಮಳೆಯಿಂದ ಹಾನಿಯಾದ ಮೆಕ್ಕೆಜೋಳ ಬೆಳೆಗೆ ಪರಿಹಾರ ನೀಡಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷಿ ಅಧಿಕಾರಿ ಮಧುಕರ ನಾಯ್ಕ ‘ತಾಲ್ಲೂಕಿನ ಪೂರ್ವ ಭಾಗ ಬನವಾಸಿ ಹೋಬಳಿಯಲ್ಲಿ ಕಟಾವಾದ 50 ಎಕರೆಯಷ್ಟು ಮೆಕ್ಕೆಜೋಳ ಮಳೆಗೆ ಹಾನಿಯಾಗಿದೆ. ಆದರೆ ಕಟಾವಾದ ಬೆಳೆಗೆ ಪರಿಹಾರ ನೀಡಲು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಅವಕಾಶವಿಲ್ಲ. ಆದರೂ ಕೆಲವು ಪ್ರಕರಣಗಳಡಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.