
ಕುಮಟಾ: ಹಲವು ದಶಕಗಳ ಹಿಂದೆ ಸಿಗಡಿ ಮೀನಿನ ಕೃಷಿಗೆ ಬಳಕೆಯಾಗಿ, ಪಾಳುಬಿದ್ದಿದ್ದ 600 ಎಕರೆ ವಿಸ್ತೀರ್ಣದ ಗಜನಿ ಭೂಮಿಯಲ್ಲಿ ಕಾಂಡ್ಲಾವನ ರೂಪುಗೊಂಡಿದೆ.
ಹೊನ್ನಾವರದ ‘ಸ್ನೇಹ ಕುಂಜ’ ಸಂಸ್ಥೆಯು ಗಜನಿ ಭೂಮಿಯ ಒಡೆತನವುಳ್ಳ 250 ರೈತರನ್ನು ಪ್ರೇರೇಪಿಸಿ ಕಾಂಡ್ಲಾ ಗಿಡಗಳನ್ನು ಬೆಳೆಸುವಂತೆ ಮಾಡಿದೆ. ಹೀಗೆ ಬೆಳೆಸಿದ ಗಿಡಗಳಿಂದ ಸಂಗ್ರಹವಾಗುವ ‘ಕಾರ್ಬನ್ ಕ್ರೆಡಿಟ್’ ಆದಾಯವನ್ನೂ ರೈತರಿಗೆ ನೀಡಲಾಗುತ್ತದೆ.
‘ಹಿಂದೆ ಕಗ್ಗ ತಳಿಯ ಭತ್ತ ಬೆಳೆಯುತ್ತಿದ್ದ ತಾಲ್ಲೂಕಿನ ಅಘನಾಶಿನಿ ನದಿಯ ಹಿನ್ನೀರು ಆಧರಿಸಿ ಗಜನಿಗಳಲ್ಲಿ ಸಿಗಡಿ ಕೃಷಿಗೆ ಉದ್ಯಮಿಗಳಿಗೆ ರೈತರು ಜಮೀನು ನೀಡಿದ್ದರು. ಬಿಳಿ ಚುಕ್ಕಿ ರೋಗ ಬಂದು ಸಿಗಡಿ ಕೃಷಿ ನಷ್ಟವಾಗಿತ್ತು. ಹೊಂಡಗಳಲ್ಲಿ ಮುಂದೆ ಕೃಷಿ ಸಾಧ್ಯವಾಗದೆ, ಹಲವು ದಶಕಗಳಿಂದ ಹಾಗೇ ಇದ್ದವು. ಇದೇ ಜಾಗವನ್ನು ಈಗ ಕಾಂಡ್ಲಾ ವನವಾಗಿ ರೂಪಿಸಲಾಗಿದೆ’ ಎಂದು ಸ್ನೇಹಕುಂಜ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಹೆಗಡೆ ತಿಳಿಸಿದರು.
‘ಕಾಂಡ್ಲಾ ಗಿಡಗಳು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಹೀರಿ ವಾತಾವರಣ ಶುದ್ಧಗೊಳಿಸುತ್ತವೆ. ಕಾಂಡ್ಲಾ ವನ ಪ್ರಮಾಣ ಹೆಚ್ಚಿದಷ್ಟು ಪರಿಸರದಲ್ಲಿ ಇಂಗಾಲದ ಪ್ರಮಾಣ ಕಡಿಮೆಯಾಗುತ್ತದೆ. ಈ ಕಾರ್ಯಕ್ಕೆ ಹಿಮಾಲಯ ವೆಲ್‌ನೆಸ್ ಕಂಪನಿ ಮತ್ತು ವ್ಯಾಲ್ಯು ನೆಟ್ವರ್ಕ್ ವೆಂಚರ್ಸ್ ಎಂಬ ಏಜೆನ್ಸಿ ಮೂಲಕ ಪರಿಸರ ರಕ್ಷಣೆಗೆ ಕಾಂಡ್ಲಾ ಕೃಷಿ ಕೈಕೊಳ್ಳಲಾಗಿದೆ’ ಎಂದರು.
‘ಪ್ರತಿ ವರ್ಷ 12 ಸಾವಿರ ಮೆಟ್ರಿಕ್ ಟನ್ ಇಂಗಾಲವನ್ನು ನೆಲದಡಿ ಹುದುಗಿಸಿ ಪರಿಸರ ಶುದ್ಧ ಮಾಡಲು ರೈತರ ಜಮೀನು ಬಳಕೆ ಆಗುತ್ತದೆ. ಇದರಿಂದ ರೈತರಿಗೆ ಕಾರ್ಬನ್ ಕ್ರೆಡಿಟ್ ಹೆಸರಿನಲ್ಲಿ ಪ್ರತಿ ಎಕರೆಗೆ ₹6 ರಿಂದ ₹ 8 ಸಾವಿರ ಆದಾಯ ಸಿಗುತ್ತದೆ’ ಎಂದು ಅವರು ತಿಳಿಸಿದರು.
ಕಾಂಡ್ಲಾ ಕೃಷಿ ಪ್ರದೇಶವು ಮೀನು ಸಿಗಡಿ ಏಡಿ ಸೇರಿ ಜಲಚರಗಳ ಸಂತತಿ ಬೆಳೆಯಲು ಅನುಕೂಲಕರ. ರೈತರಿಗೆ ಉತ್ತಮ ಆದಾಯ ಸಿಗುತ್ತದೆನರಸಿಂಹ ಹೆಗಡೆ, ಕಾರ್ಯದರ್ಶಿ ಸ್ನೇಹ ಕುಂಜ ಸಂಸ್ಥೆ
ರೈತರ 5 ಗುಂಪು ರಚನೆ
‘ಕುಮಟಾದ ಧಾರೇಶ್ವರದಿಂದ ಮಾದನಗೇರಿವರೆಗೆ 2020-21ರಿಂದ ರೈತರ ಪಾಳುಬಿದ್ದ ಗಜನಿ ಭೂಮಿಯಲ್ಲಿ ಕಾಂಡ್ಲಾ ಗಿಡ ನೆಡುವ ಯೋಜನೆ ಕೈಗೆತ್ತಿಕೊಂಡಿದ್ದೇವೆ. 250 ರೈತರ ಜೊತೆ ಈ ಬಗ್ಗೆ ಒಪ್ಪಂದ ಮಾಡಿಕೊಂಡು ತಲಾ 50 ಜನರ ರೈತರ 5 ಗುಂಪು ರಚಿಸಲಾಗಿದೆ’ ಎಂದು ಸ್ನೇಹ ಕುಂಜ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಹೆಗಡೆ ತಿಳಿಸಿದರು. ‘ಕಾರ್ಬನ್ ಕ್ರೆಡಿಟ್ ಆದಾಯ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಸಮನಾಗಿ ಜಮೆ ಆಗುವಂತೆ ವ್ಯವಸ್ಥೆ ರೂಪಿಸಲಾಗಿದೆ. 2026ರ ಮಾರ್ಚ್‌ನಲ್ಲಿ ಮೊದಲ ಹಂತದ ಕಾರ್ಬನ್ ಕ್ರೆಡಿಟ್ ಮೊತ್ತ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.