ADVERTISEMENT

‘ಕಾರವಾರ ಬಳಿ ಚನ್ನಭೈರಾದೇವಿ ಸ್ಮಾರಕ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 11:37 IST
Last Updated 12 ಸೆಪ್ಟೆಂಬರ್ 2022, 11:37 IST

ಮೈಸೂರು: ‘ಕಾಳುಮೆಣಸಿನ ರಾಣಿ ಎಂದೇ ಖ್ಯಾತರಾಗಿದ್ದ ಗೇರುಸೊಪ್ಪದ ಚನ್ನಭೈರಾದೇವಿ ಸ್ಮಾರಕವನ್ನು ಉತ್ತರಕನ್ನಡ ಜಿಲ್ಲೆಯ ಕಾರವಾರದ ಬಳಿ ತಲೆಎತ್ತಲಿರುವ ಥೀಮ್‌ ಪಾರ್ಕ್‌ನಲ್ಲಿ ನಿರ್ಮಿಸಲಾಗುವುದು’ ಎಂದು ಧರ್ಮಸ್ಥಳದ ಎಸ್‌ಡಿಎಂ ವಿದ್ಯಾಸಂಸ್ಥೆಗಳ ಸಮೂಹದ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ್ ತಿಳಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ ಸಂಸ್ಕೃತಿ ಕೇಂದ್ರ ಹಾಗೂ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜಿನ ಸಹಯೋಗದಲ್ಲಿ ನಗರದ ಎಸ್‌ಡಿಎಂ ಕಾಲೇಜಿನಲ್ಲಿ ಸೋಮವಾರ ಆರಂಭವಾದ ‘ಜೈನ ಧರ್ಮ: ಸಮಾಜಮುಖಿ ಚಿಂತನೆಗಳು’ ಕುರಿತ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚನ್ನಭೈರಾದೇವಿಯು ಅಪ್ರತಿಮ ಹೋರಾಟಗಾರ್ತಿಯಾಗಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸಿ ರಾಜ್ಯಭಾರ ಮಾಡಿದ ರಾಣಿ. ಅವರ ಬಗ್ಗೆ ಹೆಚ್ಚಾಗಿ ಪ್ರಚಾರವಾಗಿಲ್ಲ. ಆದ್ದರಿಂದ ಆ ರಾಣಿಯ ಸ್ಮಾರಕ ನಿರ್ಮಾಣಕ್ಕೆ 10 ಎಕರೆ ಜಾಗವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಕೋರಿದ್ದರು. ಸರ್ಕಾರವು ಸ್ಪಂದಿಸಿದ್ದು, ಜಾಗ ಮಂಜೂರು ಮಾಡಿದೆ. ರಾಣಿಯ ಶೌರ್ಯ-ಪರಾಕ್ರಮ, ಜೀವನಗಾಥೆ ಕುರಿತ ವರ್ಣಚಿತ್ರಗಳು, ಸಾಹಿತ್ಯ ಮತ್ತು ಡಾಕ್ಯುಮೆಂಟರಿಗಳನ್ನು ಸ್ಮಾರಕ ಒಳಗೊಂಡಿರಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.