ADVERTISEMENT

ಸಾಲು ಸಾಲು ರಜೆ: ಗೋಕರ್ಣಕ್ಕೆ ಪ್ರವಾಸಿಗರ ದಂಡು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 14:21 IST
Last Updated 24 ಡಿಸೆಂಬರ್ 2023, 14:21 IST
ಗೋಕರ್ಣದ ಮುಖ್ಯ ದೇವಸ್ಥಾನದ ಎದುರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರವಾಸಿಗರು
ಗೋಕರ್ಣದ ಮುಖ್ಯ ದೇವಸ್ಥಾನದ ಎದುರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರವಾಸಿಗರು   

ಗೋಕರ್ಣ: ನಿರಂತರ ಸಾಲು ರಜೆಯ ಕಾರಣ ಮತ್ತು ವರ್ಷಾಂತ್ಯ ಸಮೀಪಿಸುತ್ತಿರುವದರಿಂದ ಕ್ಷೇತ್ರ ಗೋಕರ್ಣಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು,ವಸತಿ ಗೃಹಗಳೆಲ್ಲಾ ಭರ್ತಿಯಾಗಿವೆ. ಅನೇಕ ಪ್ರವಾಸಿಗರು ರೂಮ್ ಸಿಗದೆ  ಕುಮಟಾ, ಅಂಕೋಲಾ ಕಡೆ ತೆರಳುತ್ತಿದ್ದಾರೆ.

ದರ್ಶನಕ್ಕೆ ದೊಡ್ಡ ಸಾಲು

ADVERTISEMENT

ಮಹಾಬಲೇಶ್ವರನ ಆತ್ಮಲಿಂಗದ ದರ್ಶನಕ್ಕೆ ದೊಡ್ಡ ಸಾಲು ನಿರ್ಮಾಣವಾಗಿದ್ದು ಕನಿಷ್ಠ 3 ಗಂಟೆಯಾದರೂ ಸಾಲಿನಲ್ಲಿ ನಿಲ್ಲಬೇಕಾಗಿದೆ. ಅನೇಕರಿಗೆ ದರ್ಶನ ಸಾಧ್ಯವಾಗದೇ ಹೊರಗಿನಿಂದಲೇ ಕೈಮುಗಿದು ಹೋಗುತ್ತಿದ್ದಾರೆ. ಭೋಜನಕ್ಕೂ ಅಪಾರ ಸಂಖ್ಯೆಯಲ್ಲಿ ಜನ ಬರುತ್ತಿದ್ದು, ಅವರನ್ನು ನಿಯಂತ್ರಿಸುವುದು ಸವಾಲಾಗಿದೆ.

ಬೀಚ್‌ಗಳೆಲ್ಲಾ ಜನರಿಂದ ತುಂಬಿದ್ದು, ಕುಡ್ಲೆ ಬೀಚ್, ಓಂ ಬೀಚ್‌ಗಳಲ್ಲಿ ಕಿ.ಮೀ  ದೂರದಲ್ಲೆ ವಾಹನ ನಿಲ್ಲಿಸಲಾಗಿದೆ. ಉಳಿಯಲು ಸ್ಥಳವಿಲ್ಲದೇ ಸಮುದ್ರದ ದಂಡೆಯ ಮೇಲೆ ಜನ ಮಲಗುತ್ತಿದ್ದಾರೆ.

ವಾಹನ ಪಾರ್ಕಿಂಗ್ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಾರ್ಕಿಂಗ್ ಸ್ಥಳಕ್ಕೆ ಮುಖ್ಯ ದೇವಸ್ಥಾನದ ಎದುರಿನಿಂದಲೆ ಸಾಗಬೇಕಾಗಿದ್ದು, ದೇವಸ್ಥಾನಕ್ಕೆ ಹೋಗುವ ಪ್ರವಾಸಿಗರಿಗೆ ಇದರಿಂದ ತೊಂದರೆಯಾಗುತ್ತಿದೆ. ಶಾಲಾ ಮಕ್ಕಳು ಪ್ರವಾಸಕ್ಕೆ ಬರುತ್ತಿದ್ದು, ಮಕ್ಕಳಿಗೂ ತೊಂದರೆಯಾಗುತ್ತಿದೆ. ಹೋಟೆಲ್‌ಗಳಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ದಿನದ ಸಮಯಕ್ಕಿಂತ ಮೊದಲೇ ಬಂದ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.