ADVERTISEMENT

ಕಾರವಾರ: ಅಧ್ವಾನದ ಸ್ಥಿತಿಯಲ್ಲಿ ಮಕ್ಕಳ ಉದ್ಯಾನ

ಅನುದಾನ ಕೊರತೆಯ ನೆಪ: ನಿರ್ವಹಣೆಗೆ ಹಿಂದೇಟು ಹಾಕುತ್ತಿರುವ ಆರೋಪ

ಗಣಪತಿ ಹೆಗಡೆ
Published 7 ಏಪ್ರಿಲ್ 2025, 6:39 IST
Last Updated 7 ಏಪ್ರಿಲ್ 2025, 6:39 IST
ಕಾರವಾರದ ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನದ ಆಟಿಕೆಗಳು ಹಾಳಾಗಿದ್ದು, ಉದ್ಯಾನದಲ್ಲಿ ಕಸಕಡ್ಡಿಗಳು ಬಿದ್ದಿವೆ.
ಕಾರವಾರದ ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನದ ಆಟಿಕೆಗಳು ಹಾಳಾಗಿದ್ದು, ಉದ್ಯಾನದಲ್ಲಿ ಕಸಕಡ್ಡಿಗಳು ಬಿದ್ದಿವೆ.   

ಕಾರವಾರ: ಶಾಲೆಗೆ ರಜೆ ಆರಂಭಗೊಂಡಿದ್ದರಿಂದ ಆಡಿ ನಲಿಯಲು ಇಲ್ಲಿನ ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನಕ್ಕೆ ಬಂದ ಬಾಲಕಿಯೊಬ್ಬಳು ಉದ್ಯಾನದ ದುಸ್ಥಿತಿಗೆ ಮರುಗಿ, ಸಾಮಾಜಿಕ ಮಾಧ್ಯಮಗಳ ಮೂಲಕ ಜಿಲ್ಲಾಧಿಕಾರಿ ಗಮನಸೆಳೆದಿದ್ದಳು.

ಇದು ಕೇವಲ ಒಂದು ಉದ್ಯಾನದ ವ್ಯಥೆಯಲ್ಲ. ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳ ಉದ್ಯಾನದ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಅನುದಾನದ ಅಲಭ್ಯತೆಯ ನೆಪವೊಡ್ಡಿ ಉದ್ಯಾನಗಳ ನಿರ್ವಹಣೆಯತ್ತ ಸ್ಥಳೀಯ ಸಂಸ್ಥೆಗಳು ಗಮನಹರಿಸುತ್ತಿಲ್ಲ ಎಂಬ ಆರೋಪವಿದೆ.

ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿರುವ ಉದ್ಯಾನಗಳನ್ನೂ ಸುಸ್ಥಿತಿಯಲ್ಲಿ ಇಡಲಾಗದ ಸ್ಥಿತಿ ಉಂಟಾಗಿದೆ ಎಂಬುದಕ್ಕೆ ಟ್ಯಾಗೋರ್ ಕಡಲತೀರದ ಉದ್ಯಾನದ ದುಃಸ್ಥಿತಿ ಸಾರುತ್ತಿದೆ. ಆಡಿ ನಲಿಯಲು ಬರುವ ಮಕ್ಕಳು ಒಡೆದ ಜಾರಿಬಂಡೆ, ಮುರಿದ ಜೋಕಾಲಿ ಕಂಡು ಮರಗುತ್ತಿದ್ದಾರೆ. ಬೇಸಿಗೆ ರಜೆ ಆರಂಭಗೊಳ್ಳುತ್ತಿದ್ದು, ಸಂಜೆ ಆಟವಾಡಲು ಬರುವ ಮಕ್ಕಳ ಸಂಖ್ಯೆ ಹೆಚ್ಚಲಿದೆ. ಆದರೆ, ಈವರೆಗೆ ಉದ್ಯಾನದ ನಿರ್ವಹಣೆಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಜನರ ದೂರು.

ADVERTISEMENT

ಶಿರಸಿ ನಗರದ ಮಕ್ಕಳ ಉದ್ಯಾನ ರಸ್ತೆ ವಿಸ್ತರಣೆ ಕಾಮಗಾರಿ ಕಾರಣಕ್ಕೆ ಮಂಕಾಗಿದೆ. ಜೂ ಸರ್ಕಲ್ ಬಳಿ, ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಅಂದಾಜು ಎರಡೂವರೆ ಎಕರೆ ವಿಸ್ತೀರ್ಣದಲ್ಲಿ ಮಕ್ಕಳ ಗಮನ ಸೆಳೆಯುವ ವಿವಿಧ ಆಟಿಕೆಗಳು, ವಾಯುವಿಹಾರಿಗಳಿಗೆ ಅನುಕೂಲಕರ ವಾಕಿಂಗ್ ಪಾಥ್, ಆಸನ ವ್ಯವಸ್ಥೆ ಇದ್ದವು. ರಸ್ತೆ ವಿಸ್ತರಣೆ ಕಾಮಗಾರಿಗೆ ಉದ್ಯಾನದ ಒಂದು ಪಾರ್ಶ್ವ ತೆರವುಗೊಂಡಿದೆ. ಗೋಡೆ ನಿರ್ಮಿಸಿದರೂ ಒಳಾವರಣದ ಕಾಮಗಾರಿಗಳು ಹಾಗೆಯೇ ಉಳಿದಿದೆ. ಹೀಗಾಗಿ ಇಡೀ ಉದ್ಯಾನ ಕಳೆಗುಂದಿದ್ದು, ಸಾರ್ವಜನಿಕರ ಭೇಟಿ ಕಡಿಮೆಯಾಗಿದೆ.

ಕುಮಟಾ ಪಟ್ಟಣದ ಹೆಗಡೆ ವೃತ್ತದ ಬಳಿ ಇರುವ ಪುರಸಭೆ ಮಾಲೀಕತ್ವದ ಕಿತ್ತೊರು ಚನ್ನಮ್ಮ ಉದ್ಯಾನದಲ್ಲಿ ಮಕ್ಕಳ ಆಟಿಕೆಗಳು ಹಾಳಾಗಿರುವ ದೂರುಗಳಿವೆ.

‘ಮಕ್ಕಳು ಆಟವಾಡುವ ಜಾರು ಬಂಡೆಯ ಸಣ್ಣಪುಟ್ಟ ದುರಸ್ತಿ ಆಗಬೇಕಿದೆ. ಗಿಡಗಳಿಗೆ ನೀರು ಹಾಕುವ ಪೈಪ್‍ಲೈನ್ ದುರಸ್ತಿ ಆದರೆ ಉದ್ಯಾನ ಆಕರ್ಷಣೀಯವಾಗುತ್ತದೆ’ ಎನ್ನುತ್ತಾರೆ ಪುರಸಭೆ ಉಪಾಧ್ಯಕ್ಷ ಮಹೇಶ ನಾಯ್ಕ.

ದಾಂಡೇಲಿಯ ಸಾಯಿನಗರ, ಬಸವೇಶ್ವರ ನಗರ ಸೇರಿದಂತೆ 11 ಉದ್ಯಾನಗಳಿವೆ. ಬಹುತೇಕ ಉದ್ಯಾನಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಕೆಲವು ಕಡೆಗಳಲ್ಲಿ ಆವರಣ ಗೋಡೆಯೂ ಇಲ್ಲದೆ ಗಿಡ ಮರ, ಹುಲ್ಲು ಹಾಸುಗಳ ಕಿತ್ತು ಹಾಳಾಗಿವೆ ಎನ್ನುವುದು ಸ್ಥಳೀಯರ ದೂರು.

ಉದ್ಯಾನ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಲು ಅವಕಾಶವಿಲ್ಲ. ಪೌರಕಾರ್ಮಿಕರ ಕೊರತೆಯೂ ನಿರ್ವಹಣೆಗೆ ಸಮಸ್ಯೆಯಾಗಿದೆ. 4ನೇ ಹಂತದ ನಗರೋತ್ಥಾನ ಯೋಜನೆಯಲ್ಲಿ ಉದ್ಯಾನ ಅಭಿವೃದ್ಧಿಗೆ ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

‘ಸಾಯಿ ನಗರದ ಉದ್ಯಾನನ ಓಪನ್ ಜಿಮ್ ಪರಿಕರಗಳನ್ನು ಕಳವು ಮಾಡಲಾಗಿದೆ. ಹಲವು ವರ್ಷಗಳಿಂದ ಹಾಳಾಗಿದ್ದ ಬಾಂಬೆ ಚಾಳದ ಉದ್ಯಾನವನ್ನು ವಾರ್ಡ್ ಅಭಿವೃದ್ಧಿ ನಿಧಿ ಬಳಸಿ ಅಭಿವೃದ್ಧಿಪಡಿಸಲಾಗಿದೆ’ ಎನ್ನುತ್ತಾರೆ ನಗರಸಭೆ ಸದಸ್ಯ ದಶರಥ ಬಂಡಿವಡ್ಡರ.

ಸಿದ್ದಾಪುರ ಪಟ್ಟಣದ ಶಂಕರ ಮಠದ ಸಮೀಪದ ಉದ್ಯಾನವನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಉದ್ಯಾನಕ್ಕೆ ನೀರಿನ ಕೊರತೆ ಎದುರಾಗಿಲ್ಲ. ಮಕ್ಕಳ ಆಟಿಕೆಗಳನ್ನೂ ಅಳವಡಿಸಿದ್ದು, ಹೆಚ್ಚು ಜನರು ಬರುತ್ತಿದ್ದಾರೆ ಎಂದು ಆರ್‌ಎಫ್‌ಒ ಅಜಯ್ ಕುಮಾರ ಹೇಳಿದರು.

ಹಳಿಯಾಳ ಪಟ್ಟಣದ ಮರಡಿಗುಡ್ಡ ನಿಸರ್ಗಧಾಮದಲ್ಲಿ ನೀರಿನ ಕೊರತೆಯಿಂದ ಗಿಡಮರಗಳು ಒಣಗಿವೆ. ಉದ್ಯಾನದಲ್ಲಿರುವ ನೀರಿನ ಗುಂಡಿಯಲ್ಲಿ ನೀರು ಸಂಪೂರ್ಣ ಬತ್ತಿದೆ. ಇಲ್ಲಿ ಹಾಳಾಗಿದ್ದ ಆಟಿಕೆ ಸಾಮಗ್ರಿಗಳನ್ನು ಬದಲಿಸಿ, ಹೊಸ ಸಾಮಗ್ರಿ ಅಳವಡಿಸಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಿಂದ ನಿರ್ಮಿಸಿದ್ದ ಕಾರಂಜಿ ಮತ್ತು ಅದರ ಬಳಿಯ ಪ್ರತಿಮೆಗಳು ಹಾಳಾಗಿವೆ. ಉದ್ಯಾನದಲ್ಲಿರುವ ಕಬ್ಬಿಣದ ವೀಕ್ಷಣಾ ಗೋಪುರಕ್ಕೂ ತುಕ್ಕು ಹಿಡಿದಿದೆ.

‘ಪಟ್ಟಣದಲ್ಲಿ ಬಡಾವಣೆ ನಿರ್ಮಿಸುವವರು ನಿಯಮದ ಪ್ರಕಾರ ಉದ್ಯಾನ ನಿರ್ಮಾಣಕ್ಕೆ ಜಾಗ ಮೀಸಲಿಡಬೇಕು. ಪಟ್ಟಣದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಈವರೆಗೆ ಯಾವೊಂದೂ ಉದ್ಯಾನ ನಿರ್ಮಾಣ ಆಗಿಲ್ಲ’ ಎಂಬುದು ಹಿರಿಯ ನಾಗರಿಕರ ದೂರು.

ಯಲ್ಲಾಪುರ ಪಟ್ಟಣದ ಐಬಿ ರಸ್ತೆಯಲ್ಲಿರುವ ಜೋಡುಕೆರೆ ಮಕ್ಕಳ ಉದ್ಯಾನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಅರಣ್ಯ ಇಲಾಖೆಯ ಉದ್ಯಾನ ಬಹಳಷ್ಟು ಸಲ ಮುಚ್ಚಿರುತ್ತದೆ. ಅದು ಉಪಯೋಗಕ್ಕೆ ಲಭ್ಯವಿರುವುದೇ ಅಪರೂಪ ಎಂಬುದು ಜನರ ಆರೋಪ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ನಾಯ್ಕ, ಸಂತೋಷಕುಮಾರ ಹಬ್ಬು, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಸುಜಯ್ ಭಟ್, ಪ್ರವೀಣಕುಮಾರ ಸುಲಾಖೆ, ವಿಶ್ವೇಶ್ವರ ಗಾಂವ್ಕರ.

ಹಳಿಯಾಳದ ಮರಡಿ ಗುಡ್ಡದ ಇಕೋ ಪಾರ್ಕ್‌‍ನಲ್ಲಿ ನಿರ್ಮಿಸಿದ ನವಗ್ರಹ ವನ ಒಣಗಿರುವುದು
ಶಿರಸಿಯ ಮಕ್ಕಳ ಉದ್ಯಾನದಲ್ಲಿ ಜಾರುಬಂಡಿಗಳು ಹಾಳಾಗಿರುವುದು
ಶಿರಸಿಯ ಜೂ ವೃತ್ತದಲ್ಲಿರುವ ಮಕ್ಕಳ ಉದ್ಯಾನದ ಪರಿಕರಗಳು ನಿರ್ವಹಣೆ ಇಲ್ಲದಾಗಿ ಜನರು ಭೇಟಿ ನೀಡಲು ಹಿಂದೇಟು ಹಾಕುವ ಸ್ಥಿತಿ ಇದೆ
ಶ್ರೀನಾಥ ಹೆಗಡೆ ಶಿರಸಿ ನಿವಾಸಿ
ವಿಹಾರಕ್ಕೆ ಬರುವವರು ಉದ್ಯಾನ ನಮ್ಮದು ಎನ್ನುವ ಭಾವನೆಯಿಂದ ಶುಚಿತ್ವ ಕಾಪಾಡಬೇಕು. ಸಾಧ್ಯವಾದರೆ ಸಾರ್ವಜನಿಕರು ಅಲ್ಲಿ ವನಮಹೋತ್ಸವ ಆಚರಿಸುವ ಸಂಪ್ರದಾಯ ಆರಂಭಿಸಬೇಕು
ಡಾ.ಜಯದೇವ ಬಳಗಂಡಿ ಕುಮಟಾ ವೈದ್ಯ
ಯಲ್ಲಾಪುರದ ಜೋಡುಕೆರೆ ಸಮೀಪದ ಉದ್ಯಾನ ಉತ್ತಮ ನಿರ್ವಹಣೆ ಮಾಡಿದರೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ನಿರ್ವಹಣೆಗೆ ಸ್ವಯಂಸೇವಾ ಸಂಸ್ಥೆಗಳಿಗೆ ಜವಾಬ್ದಾರಿ ನೀಡಬೇಕು
ನಾಗರಾಜ ನಾಯ್ಕ ಯಲ್ಲಾಪುರ ನೂತನ ನಗರ ನಿವಾಸಿ
ಕಾರವಾರದ ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನಕ್ಕೆ ಪ್ರವಾಸಿಗರು ಸ್ಥಳೀಯರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿದ್ದರೂ ವರ್ಷಗಳಿಂದ ಅದು ನಿರ್ವಹಣೆ ಇಲ್ಲದೆ ಹಾಳುಬಿದ್ದಿದೆ
ದೀಪಕ ತಾಂಡೇಲ ಕಾರವಾರ ಸ್ಥಳೀಯ ನಿವಾಸಿ
ಮಕ್ಕಳ ಆಟಿಕೆ ಪಾಲಕರ ಮೋಜು
ಮುಂಡಗೋಡ ಪಟ್ಟಣ ಪಂಚಾಯಿತಿ ಆವರಣದಲ್ಲಿರುವ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬಂದು ಆಟವಾಡಿ ಖುಷಿಪಡುತ್ತಾರೆ. ಆದರೆ ಮಕ್ಕಳ ಜೊತೆ ಕೆಲವೊಮ್ಮೆ ವಯಸ್ಕರು ಜೋಕಾಲಿ ಇನ್ನಿತರ ಪರಿಕರಗಳನ್ನು ಬಳಸುವುದರಿಂದ ಪದೇ ಪದೇ ಪರಿಕರಗಳು ದುರಸ್ತಿಗೆ ಒಳಗಾಗುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಅರಣ್ಯ ಇಲಾಖೆಯ ಸಾಲುಮರದ ಸಸ್ಯೋದ್ಯಾನದಲ್ಲಿ ಉತ್ತಮವಾದ ಉದ್ಯಾನ ಮಕ್ಕಳ ಪರಿಕರಗಳು ಇದ್ದರೂ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಬಣ್ಣ ಮಾಸಿದ ತುಂಡರಿಸಿದ ಮಕ್ಕಳ ಆಟದ ಪರಿಕರಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ‘ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ದೊಡ್ಡವರಿಗೆ ವಾಕ್‌ ಮಾಡಲು ಅನುಕೂಲವಾಗಿದೆ. ಗಿಡಗಂಟಿಗಳ ಸ್ವಚ್ಛತೆಗೆ ತುಸು ಆದ್ಯತೆ ನೀಡಬೇಕಾಗಿದೆ. ಆದರೆ ಮಕ್ಕಳಿಗೆ ಆಟವಾಡಲು ಸಾಕಷ್ಟು ಸಂಖ್ಯೆಯಲ್ಲಿ ಪರಿಕರಗಳಿದ್ದರೂ ದುರಸ್ತಿಗೆ ಕಾದಿರುವುದು ಕಂಡುಬರುತ್ತವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಂಜುನಾಥ.
ಬಿಡುಗಡೆಯಾಗದ ಅನುದಾನ
ಹೊನ್ನಾವರ ಪಟ್ಟಣದಲ್ಲಿ ಕೆಲ ಉದ್ಯಾನಗಳು ಜನರಿಗೆ ನೆಮ್ಮದಿ ನೀಡುವ ತಾಣಗಳಾಗಿಲ್ಲ ಎಂಬ ದೂರುಗಳು ಹೆಚ್ಚಿವೆ. ರಾಯಲ್‌ಕೇರಿಯ ಸಮೀಪ ಹಾಗೂ ಗಾಂಧಿನಗರದಲ್ಲಿ ಪಟ್ಟಣ ಪಂಚಾಯಿತಿ ಸುಪರ್ದಿಯಲ್ಲಿರುವ ಉದ್ಯಾನಗಳು ದುಸ್ಥಿತಿಯಲ್ಲಿವೆ. ‘ಗಾಂಧಿನಗರದ ಉದ್ಯಾನ ಅಕ್ರಮ ಚಟುವಟಿಕೆಗಳ ಅಡ್ಡೆಯಾಗಿದೆ’ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ. ಕರ್ನಲ್ ಹಿಲ್ ಸಮೀಪದ ರೋಟರಿ ಉದ್ಯಾನ ಕೇವಲ ಹೆಸರಿಗಷ್ಟೇ ಉದ್ಯಾನವಾಗಿ ಈಗ ಉಳಿದಿದೆ. ಪ್ರಭಾತನಗರದಲ್ಲಿರುವ ಅರಣ್ಯ ಇಲಾಖೆಯ ವನ ಕಿರಿದಾಗಿದ್ದು ಸೌಂದರ್ಯವಿಲ್ಲ. ‘ಪಟ್ಟಣದ ಉದ್ಯಾನಗಳ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳು ಕಳೆದಿವೆ. ಅನುದಾನ ಬಿಡುಗಡೆಯಾಗಿಲ್ಲ’ ಎಂದು ಪಟ್ಟಣ ಪಂಚಾಯಿತಿ ಸಿಬ್ಬಂದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.