ADVERTISEMENT

ಕಾರವಾರ: ಕೋಸ್ಟ್‌ಗಾರ್ಡ್ ಸ್ವಂತ ಕಟ್ಟಡದ ಕನಸಿಗೆ ಬಲ

ಅಮದಳ್ಳಿಯಲ್ಲಿ ಜಮೀನು ಖರೀದಿ ಪ್ರಕ್ರಿಯೆಗೆ ಚಾಲನೆ: ಭೂ ಮಾಲೀಕರೊಂದಿಗೆ ಮಾತುಕತೆ

ಸದಾಶಿವ ಎಂ.ಎಸ್‌.
Published 29 ಅಕ್ಟೋಬರ್ 2019, 19:45 IST
Last Updated 29 ಅಕ್ಟೋಬರ್ 2019, 19:45 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಈಚೆಗೆ ಹೋವರ್‌ ಕ್ರಾಫ್ಟ್‌ ಅನ್ನು ತರಲಾಗಿತ್ತು
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಈಚೆಗೆ ಹೋವರ್‌ ಕ್ರಾಫ್ಟ್‌ ಅನ್ನು ತರಲಾಗಿತ್ತು   

ಕಾರವಾರ: ಕರಾವಳಿ ಕಾವಲು ಪಡೆಗೆ (ಕೋಸ್ಟ್ ಗಾರ್ಡ್) ತಾಲ್ಲೂಕಿನ ಅಮದಳ್ಳಿಯಲ್ಲಿ ಸ್ವಂತ ಸ್ಟೇಷನ್ ಕಟ್ಟಡ ಮತ್ತು ಇತರ ಸೌಲಭ್ಯಗಳ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ26 ಎಕರೆ 8 ಗುಂಟೆ ಜಾಗವನ್ನು ಭೂ ಮಾಲೀಕರಿಂದ ನೇರವಾಗಿ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ.

ಭೂ ಮಾಲೀಕರ ಜೊತೆಗೆಕೋಸ್ಟ್ ಗಾರ್ಡ್ ಅಧಿಕಾರಿಗಳು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಬಾಡ ಹೋಬಳಿ ವ್ಯಾಪ್ತಿಯಲ್ಲಿರುವ ಅಮದಳ್ಳಿ ಸರ್ವೆ ನಂಬರ್ 180/1ಎ ದಿಂದ 192/6ವರೆಗೆ ಇರುವ ಜಮೀನನ್ನು ಈ ಉದ್ದೇಶಕ್ಕೆ ಗುರುತಿಸಲಾಗಿದೆ.ಜಾಗದ ಖರೀದಿಗೆ ಸರ್ಕಾರ ನಿಗದಿ ಮಾಡಿದ ದರವನ್ನು ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಮಹತ್ವವೇನು?:ಕಡಲತೀರದಿಂದ 12ಕಿಲೋಮೀಟರ್‌ವರೆಗೆ ಭದ್ರತೆ ಹಾಗೂ ಉಸ್ತುವಾರಿಯು ಪೊಲೀಸ್ ಇಲಾಖೆಗೆ ಸೇರುತ್ತದೆ. 13ರಿಂದ24 ಕಿಲೋಮೀಟರ್ ವ್ಯಾಪ್ತಿಯು ಕೋಸ್ಟ್ ಗಾರ್ಡ್‌ಗೆ ಸೇರಿದ್ದಾಗಿದೆ.25ಕಿಲೋಮೀಟರ್ ನಂತರದ ಜವಾಬ್ದಾರಿಯು ನೌಕಾನೆಲೆಯದ್ದಾಗಿದೆ. ಹಾಗಾಗಿ ತನ್ನ ಸುಪರ್ದಿಯಲ್ಲಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಆಗುವಂತೆನೆಲೆ ಹೊಂದಲು ಕೋಸ್ಟ್‌ ಗಾರ್ಡ್ ಪ್ರಯತ್ನಿಸುತ್ತಿದೆ.

ADVERTISEMENT

ಸಮುದ್ರದಲ್ಲಿ ಮೀನುಗಾರಿಕಾ ದೋಣಿಗಳು ಸಂಕಷ್ಟದಲ್ಲಿ ಸಿಲುಕಿದಾಗ, ಕೂರ್ಮಗಡದಂತಹ ಪ್ರದೇಶಗಳಲ್ಲಿ ಯಾತ್ರಿಗಳು ತೊಂದರೆಗೆ ಒಳಗಾದಾಗ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಸಹಾಯಕ್ಕೆ ಧಾವಿಸುತ್ತಾರೆ. ಮೀನುಗಾರಿಕಾ ಇಲಾಖೆಯೂ ಸೇರಿದಂತೆ ಇತರ ವಿವಿಧ ಇಲಾಖೆಗಳ ಜೊತೆಗೂಡಿ ಕಾರ್ಯಾಚರಣೆ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೂಡಲೇ ಸ್ಪಂದನೆಗೆ ಅನುಕೂಲವಾಗುವ ರೀತಿಯಲ್ಲಿ ಹಲವು ಸೌಕರ್ಯಗಳನ್ನು ಕೋಸ್ಟ್‌ ಗಾರ್ಡ್ ಹೊಂದಬೇಕಿದೆ. ಹಾಗಾಗಿ ಸ್ವಂತ ನೆಲೆ ಹೊಂದುವುದು ಮಹತ್ವದ್ದಾಗಿದೆ.

ಸ್ವಂತ ಕಟ್ಟಡದ ಕನಸು: ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಕೋಸ್ಟ್‌ಗಾರ್ಡ್ ಸ್ಟೇಷನ್ ಸ್ಥಾಪನೆಗೆ ಕೋಸ್ಟ್‌ಗಾರ್ಡ್ ಅಧಿಕಾರಿಗಳು ಈ ಹಿಂದೆ ಹಲವು ಬಾರಿಪ್ರಯತ್ನಿಸಿದ್ದರು. ಅದಕ್ಕಾಗಿ ಜಾಗವನ್ನೂ ನೀಡಲಾಗಿತ್ತು. ಆದರೆ, ಅದಕ್ಕೆ ಸ್ಥಳೀಯರಿಂದ ಪ್ರಬಲವಾದ ವಿರೋಧ ವ್ಯಕ್ತವಾದ ಕಾರಣ ರದ್ದು ಮಾಡಲಾಗಿತ್ತು. ಸದ್ಯ ಅಮದಳ್ಳಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿಯಿದೆ.

‘ಭೂ ಸ್ವಾಧೀನವಿಲ್ಲ’: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಕೋಸ್ಟ್‌ಗಾರ್ಡ್ ಸಲುವಾಗಿ ಭೂ ಸ್ವಾಧೀನ ಮಾಡುವುದಿಲ್ಲ. ಕೋಸ್ಟ್‌ ಗಾರ್ಡ್ ಭೂ ಮಾಲೀಕರಿಂದಲೇ ಜಮೀನು ಖರೀದಿ ಮಾಡುತ್ತದೆ. ಇದರಲ್ಲಿ ಜಿಲ್ಲಾಡಳಿತದ ಮಧ್ಯಪ್ರವೇಶವಿರುವುದಿಲ್ಲ. ಸರ್ಕಾರವೇ ಜಮೀನು ಖರೀದಿಸಲು ಮುಂದೆ ಬಂದಾಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ದರ ನಿಗದಿ ಮಾಡಲಾಗುತ್ತದೆ. ನಂತರ ಭೂ ಮಾಲೀಕರು ಮತ್ತು ಖರೀದಿದಾರರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.