ADVERTISEMENT

ಕುಮಟಾ: ತೆಂಗು ಕೊಯ್ಲಿಗೆ ವೃತ್ತಿಪರತೆಯ ಸ್ಪರ್ಶ

ಕೃಷಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕುಮಟಾದ ಸೇವಾಸಂಸ್ಥೆಯಿಂದ ಯೋಜನೆ

ಎಂ.ಜಿ.ನಾಯ್ಕ
Published 20 ಅಕ್ಟೋಬರ್ 2020, 20:00 IST
Last Updated 20 ಅಕ್ಟೋಬರ್ 2020, 20:00 IST
ಕುಮಟಾದ ಎ.ವಿ.ಪಿ ಸಂಸ್ಥೆಯ ಸಿಬ್ಬಂದಿಯೊಬ್ಬರು ಸಲಕರಣೆಯ ಮೂಲಕ ತಂಗಿನ ಮರವೇರುತ್ತಿರುವುದು
ಕುಮಟಾದ ಎ.ವಿ.ಪಿ ಸಂಸ್ಥೆಯ ಸಿಬ್ಬಂದಿಯೊಬ್ಬರು ಸಲಕರಣೆಯ ಮೂಲಕ ತಂಗಿನ ಮರವೇರುತ್ತಿರುವುದು   

ಕುಮಟಾ: ತೆಂಗಿನ ಮರದಿಂದ ಕಾಯಿ ಕೊಯ್ಯುವುದು ಕೂಲಿಯಾಳುಗಳ ಕೊರತೆಯಿಂದಾಗಿ ರೈತರಿಗೆ ಪ್ರಸ್ತುತ ದೊಡ್ಡ ಸವಾಲಿನ ಕೆಲಸ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಲ್ಲಿಯ ಎ.ವಿ.ಪಿ ಸೇವಾ ಸಂಸ್ಥೆ ಹೊಸ ಯೋಜನೆ ರೂಪಿಸಿದೆ. ‌

ಸಂಸ್ಥೆಯು ದುಡಿಮೆಯಲ್ಲಿ ಆಸಕ್ತಿಯುಳ್ಳ ಗ್ರಾಮೀಣ ಯುವಕರಿಗೆ ಸಲಕರಣೆ ಬಳಸಿ ತೆಂಗಿನ ಮರ ಏರುವ ಬಗ್ಗೆ ತರಬೇತಿ ನೀಡಿತು. ಒಂದು ವರ್ಷದ ಹಿಂದೆ ತರಬೇತಿ ಪಡೆದ 10 ಯುವಕರ ತಂಡವನ್ನು ಕಟ್ಟಿತು. ಈಗ ಅವರ ಮೂಲಕ ತೆಂಗಿನಕಾಯಿ ಕೊಯ್ಯುವ ಕೆಲಸ ಮಾಡಲಾಗುತ್ತಿದೆ.

ಸಂಸ್ಥೆಯ ನೆರವು ಅಗತ್ಯವಿರುವ ರೈತರ ಹೆಸರು ವಿಳಾಸ ನೋಂದಾಯಿಸಿಕೊಳ್ಳಲು ಎ.ವಿ.ಪಿ ಸಂಸ್ಥೆಯು ಕಚೇರಿಯಲ್ಲಿ ವ್ಯವಸ್ಥೆ ಕಲ್ಪಿಸಿದೆ. ಸಂಸ್ಥೆಯವರು ರೈತರಿಗೆ ಎರಡು ದಿನಗಳ ಮೊದಲೇ ತೆಂಗಿನಕಾಯಿ ಕೊಯ್ಯಲು ಬರುವ ಸಿಬ್ಬಂದಿ ಬಗ್ಗೆ ತಿಳಿಸುತ್ತಾರೆ. 20 ಕಿಲೋಮೀಟರ್ ದೂರದೊಳಗಿನ ರೈತರ ತೋಟದಲ್ಲಿ ಒಂದು ತೆಂಗಿನ ಮರಕ್ಕೆ ₹ 32ರಂತೆ, 20 ಕಿ.ಮೀ. ಕ್ಕಿಂತ ಹೆಚ್ಚು ದೂರವಿದ್ದರೆ ₹ 35ರಂತೆ ರೈತರಿಂದ ಪಡೆದ ಶುಲ್ಕವನ್ನು ಸಿಬ್ಬಂದಿ ಎ.ವಿ.ಪಿ ಕಚೇರಿಗೆ ಪಾವತಿಸಬೇಕು. ಸಿಬ್ಬಂದಿ ನಿತ್ಯ 43 ತೆಂಗಿನಮರಗಳ ಕಾಯಿ ಕೊಯ್ದರೆ ಅವರಿಗೆ ತಿಂಗಳಿಗೆ ₹ 25 ಸಾವಿರ ವೇತನ ದೊರೆಯುತ್ತದೆ.

ADVERTISEMENT

‘ನಿತ್ಯವೂ 43 ಮರಗಳ ತೆಂಗಿನಕಾಯಿ ಕೊಯ್ದರೆ ನಮಗೆ ಕನಿಷ್ಠ ಸಂಬಳ ಸಿಗುತ್ತದೆ. ದೊಡ್ಡ ತೋಟದಲ್ಲಿ 80 ಮರಗಳ ತೆಂಗಿನಕಾಯಿ ಕೊಯ್ಯಲು ಸಾಧ್ಯ. ಆಗ ಮರುದಿನ ರಜಾ ಸೌಲಭ್ಯ ಪಡೆಯಬಹುದು. ತೆಂಗಿನಕಾಯಿ ಕೊಯ್ದ ನಂತರ ಸಲಕರಣೆಗೆ ಗ್ರೀಸ್ ಹಚ್ಚಿ ಸಂಸ್ಥೆಗೆ ಒಪ್ಪಿಸಬೇಕು. ಮರುದಿನ ಕರೆ ಬಂದಾಗ ಕರ್ತವ್ಯಕ್ಕೆ ತೆರಳಬೇಕು’ ಎಂದು ತೆಂಗಿನಮರ ಏರುವ ಸಿಬ್ಬಂದಿ ಪ್ರಕಾಶ ಗೌಡ ಹಾಗೂ ಸಂದೀಪ ಶೆಟ್ಟಿ ತಿಳಿಸಿದರು.

ಸಿಬ್ಬಂದಿಗೆ ವಿಮೆ ಸೌಲಭ್ಯ:‘ಕೊಚ್ಚಿಯ ತೆಂಗು ಅಭಿವೃದ್ಧಿ ಮಂಡಳಿಯಡಿ ಸಂಸ್ಥೆಯನ್ನು ನೋಂದಾಯಿಸಿಕೊಳ್ಳಲಾಗಿದೆ. ತೆಂಗಿನಕಾಯಿ ಕೊಯ್ಯುವ ಸಿಬ್ಬಂದಿಗೆ ಜನರಲ್ ಇನ್ಸೂರೆನ್ಸ್ ಕಂಪನಿ ಹಾಗೂ ತೆಂಗಿನ ಮರ ಏರುವವರಿಗೆ ಓರಿಯೆಂಟಲ್ ಇನ್ಸುರೆನ್ಸ್ ಕಂಪನಿಯ ‘ಕೇರ್ ಸುರಕ್ಷಾ’ ವಿಮೆ ಮಾಡಿಸಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ ಅಳವಳ್ಳಿ ಮಾಹಿತಿ ನೀಡಿದರು.

‘ಭವಿಷ್ಯ ನಿಧಿ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ಆರಂಭದಲ್ಲಿ 10 ಸಿಬ್ಬಂದಿಯ ತಂಡ ಹೊರ ತಾಲ್ಲೂಕುಗಳ ತೋಟಗಳಿಗೂ ಹೋಗಿ ತೆಂಗಿನಕಾಯಿ ಕೊಯ್ಲು ಮಾಡಿದ್ದಾರೆ’ ಎಂದು ತಿಳಿಸಿದರು.

‘ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೂ ಸಿಬ್ಬಂದಿಯ ತಂಡವನ್ನು ಕಳುಹಿಸಿಕೊಡಲಾಗಿತ್ತು. ರೈತರ ಬೇಡಿಕೆ ಹೆಚ್ಚಾದಂತೆ ಸಿಬ್ಬಂದಿ ನೇಮಿಸಿ ತರಬೇತಿ ನೀಡಲಾಗುವುದು. ಮುಂಬರುವ ಮುಂಗಾರು ಹಂಗಾಮಿಗೆ ಅಡಿಕೆ ಗೊನೆಗೆ ಔಷಧಿ ಹೊಡೆಯುವ, ಗೊನೆ ಕೊಯ್ಯುವ ಸೌಲಭ್ಯ ಕೂಡ ಆರಂಭಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.