ಶಿರಸಿ: ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಹೆಗಡೆ ವಿರುದ್ಧ ಘೋಷಣೆ ಕೂಗಿದರು. ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೀಶ ಗೌಡ ಮಾತನಾಡಿ, ಚುನಾವಣೆ ಹೊಸ್ತಿಲಿನಲ್ಲಿ ಪ್ರಚಾರಕ್ಕಾಗಿ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಗೆ ಹರಿಬಿಟ್ಟಿರುವುದು ಖಂಡನೀಯ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿ ಬಸವರಾಜ ದೊಡ್ಮನಿ ಮಾತನಾಡಿ, ಸಂಸದ ಸ್ಥಾನದಲ್ಲಿರುವವರು ಅಸಾಂವಿಧಾನಿಕ ಶಬ್ದ ಬಳಸುವುದು ಸರಿಯಲ್ಲ. ರಾಜಕೀಯ ಲಾಭಕ್ಕಾಗಿ ಕೀಳು ಮಟ್ಟಕ್ಕಿಳಿಯುವುದು ಶೋಚನೀಯ ಎಂದರು. ಇನ್ನು ಮುಂದೆ ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.