
ಕಾರವಾರ: ‘ದೇಶ ಉತ್ತಮವಾಗಿ ಮುನ್ನಡೆಯಲು ಸಂವಿಧಾನದ ಅಂಶಗಳ ಪಾಲನೆ ಆಧಾರವಾಗಿದೆ. ಸಂವಿಧಾನ ಪವಿತ್ರ ಗ್ರಂಥವಾಗಿದ್ದು, ಅದರ ಪೀಠಿಕೆ ನಿತ್ಯದ ಪ್ರಾರ್ಥನೆಯಾಗಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಜಗತ್ತಿನ ಹಲವು ದೇಶಗಳ ಸಂವಿಧಾನದ ಅಂಶಗಳ ಅಧ್ಯಯನ ನಡೆಸಿ, ಅವುಗಳಲ್ಲಿನ ಉತ್ತಮ ಅಂಶಗಳನ್ನು ಆರಿಸಿಕೊಂಡು, ಅವುಗಳಿಗೆ ಮಹತ್ವದ ಅಂಶಗಳನ್ನು ಸೇರಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದ ಸಮಿತಿ ದೇಶದ ಸಂವಿಧಾನ ರಚಿಸಿದೆ. ಈ ಕಾರಣದಿಂದಲೇ ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ಭಾರತದಲ್ಲಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ‘ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಜಾತಿ, ಧರ್ಮ ಇರುವ ನಮ್ಮ ದೇಶದಲ್ಲಿ ಎಲ್ಲರನ್ನು ಶಾಂತಿಯುತವಾಗಿ ಕಾಪಾಡಲು ಸಂವಿಧಾನವೇ ಕಾರಣ. ಸಂವಿಧಾನಕ್ಕೆ ಪೂರಕವಾಗಿ ನಮ್ಮ ವಿಚಾರಧಾರೆಯನ್ನು ಬೆಳೆಸಿಕೊಳ್ಳಬೇಕು’ ಎಂದರು.
ಪ್ರಾಧ್ಯಾಪಕ ನಾಗರಾಜ ಹೆಗಡೆ ಅಪಗಾಲ ಸಂವಿಧಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಮೇಶ್ ವೈ.ಕೆ., ಡಿಡಿಪಿಯು ಸತೀಶ ನಾಯ್ಕ, ಇತರರು ಪಾಲ್ಗೊಂಡಿದ್ದರು.
ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.